ವರ್ಷಾಂತ್ಯದ ಸಂಭ್ರಮದಲ್ಲಿರುವ ಉದ್ಯಾನನಗರಿ ಬೆಂಗಳೂರಿನ ಸಂಗೀತ ಪ್ರಿಯರಿಗೆ ಭರ್ಜರಿ ರಸದೌತಣ ನೀಡಲು ಬೃಹತ್ ಸಂಗೀತ ಕಾರ್ಯಕ್ರಮವೊಂದು ಸಿದ್ಧಗೊಂಡಿದೆ. ಈಗಾಗಲೇ ಹಲವು ಯಶಸ್ವಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಸರು ಮಾಡಿರುವ ಬೆಂಗಳೂರು ಮೂಲದ ‘ನಾಯ್ಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯು ‘U1niverse ಟೂರ್’ ಎಂಬ ವಿನೂತನ ಪರಿಕಲ್ಪನೆಯಡಿಯಲ್ಲಿ ಈ ಮೆಗಾ ಕಾನ್ಸರ್ಟ್ ಹಮ್ಮಿಕೊಂಡಿದೆ.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಯುವನ್ ಶಂಕರ್ ರಾಜಾ ಅವರ ಲೈವ್ ಗಾಯನ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವನ್ ಶಂಕರ್ ರಾಜಾ ಈ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ನನಗೆ ಪ್ರಿಯವಾದ ಊರು
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸಂಗೀತ ಮಾಂತ್ರಿಕ ಯುವನ್ ಶಂಕರ್ ರಾಜಾ, ಸತತ ನಾಲ್ಕು ಗಂಟೆಗಳ ಕಾಲ ನಡೆಯಲಿರುವ ಈ ಬೃಹತ್ ಸಂಗೀತ ಸಂಜೆಯ ರೂಪುರೇಷೆಗಳನ್ನು ವಿವರಿಸಿದರು. "ಬೆಂಗಳೂರು ನನ್ನ ಪಾಲಿಗೆ ಅತ್ಯಂತ ಪ್ರಿಯವಾದ ಊರು. ಇಲ್ಲಿ ನಡೆಯುತ್ತಿರುವ ಈ ವಿಶೇಷ ಲೈವ್ ಕಾನ್ಸರ್ಟ್ನಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಈ ಸಂಗೀತ ಕಾರ್ಯಕ್ರಮವು ಅತ್ಯಾಧುನಿಕ ವೇದಿಕೆ, ವಿಭಿನ್ನ ಸಂಗೀತ ಸಂಯೋಜನೆ, ಪ್ರತಿಭಾವಂತ ಗಾಯಕರು ಹಾಗೂ ನುರಿತ ತಾಂತ್ರಿಕ ವರ್ಗದೊಂದಿಗೆ ಹೊಸ ಅನುಭವ ನೀಡಲಿದೆ" ಎಂದು ಯುವನ್ ಶಂಕರ್ ರಾಜಾ ಭರವಸೆ ವ್ಯಕ್ತಪಡಿಸಿದರು.
ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ; ಪೋಸ್ಟರ್, ಆಹ್ವಾನ ಪತ್ರಿಕೆ ಬಿಡುಗಡೆ!
ಕಾರ್ಯಕ್ರಮದ ಆಯೋಜಕರಾದ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಸಿಇಒ ವಿಕಾಸ್ ಮತ್ತು ಸಿಒಒ ಅಪರ್ಣಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಿಎಫ್ಒ ಸುರೇಶ್ ಗೌಡ, "ನಮ್ಮದು ಬೆಂಗಳೂರು ಮೂಲದ ಸಂಸ್ಥೆಯಾಗಿದ್ದು, ಈ ಹಿಂದೆ ವಿಜಯ್ ಪ್ರಕಾಶ್, ಶಾನ್, ರಾಜೇಶ್ ಕೃಷ್ಣನ್ ಅವರಂತಹ ದಿಗ್ಗಜ ಗಾಯಕರ ಲೈವ್ ಮ್ಯೂಸಿಕ್ ಕಾನ್ಸರ್ಟ್ಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದೇವೆ. ಇದೀಗ ಡಿಸೆಂಬರ್ 5 ರಂದು ಬೆಂಗಳೂರಿನ ನೈಸ್ ಗ್ರೌಂಡ್ಸ್ನಲ್ಲಿ ಯುವನ್ ಶಂಕರ್ ರಾಜಾ ಅವರ ಬೃಹತ್ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ವರ್ಗದ ಸಂಗೀತ ಪ್ರೇಮಿಗಳು ಭಾಗವಹಿಸಲಿ ಎಂಬ ಉದ್ದೇಶದಿಂದ ಟಿಕೆಟ್ ದರವನ್ನು ಕೇವಲ 699 ರೂಪಾಯಿಗಳಿಂದ ನಿಗದಿಪಡಿಸಲಾಗಿದ್ದು, ಗರಿಷ್ಠ 3,000 ರೂಪಾಯಿಗಳವರೆಗೆ ಟಿಕೆಟ್ ಲಭ್ಯವಿರಲಿದೆ" ಎಂದು ಮಾಹಿತಿ ನೀಡಿದರು.
ಅಲ್ಲದೆ, ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ 'ಕನ್ನಡ ಹಬ್ಬ'ದಂತಹ ಕಾರ್ಯಕ್ರಮಗಳನ್ನು ಸಂಪೂರ್ಣ ಉಚಿತವಾಗಿ ಆಯೋಜಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು. ಇದೇ ವೇಳೆ ಮಾತನಾಡಿದ ‘ಸುಮನ್ ಟಿವಿ ಕನ್ನಡ’ದ ಮುಖ್ಯಸ್ಥ ಯುಗಂಧರ್ ಪೂಲಾ, "ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಈ ಪ್ರತಿಷ್ಠಿತ ಮ್ಯೂಸಿಕ್ ಕಾನ್ಸರ್ಟ್ಗೆ ಸುಮನ್ ಟಿವಿ ಕನ್ನಡ ಡಿಜಿಟಲ್ ಪಾರ್ಟ್ನರ್ ಆಗಿ ಕೈಜೋಡಿಸುತ್ತಿದೆ. ಯುವನ್ ಶಂಕರ್ ರಾಜಾ ಅವರು ಮುಖ್ಯ ಆಕರ್ಷಣೆಯಾಗಿರುವ ಈ ವೇದಿಕೆಯಲ್ಲಿ ದಕ್ಷಿಣ ಭಾರತದ ಇನ್ನೂ ಹಲವಾರು ಪ್ರಮುಖ ಸೆಲೆಬ್ರಿಟಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿಶೇಷ ಅತಿಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು" ಎಂದು ಹೇಳಿದರು.