ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಕೇಂದ್ರ ಸಚಿವ ಅಮಿತ್‌ ಶಾ; ಚಿತ್ರತಂಡವನ್ನು ಭೇಟಿಯಾಗಿ ಅಭಿನಂದನೆ

ʻರಾಮಾಯಣʼ ಚಿತ್ರತಂಡವನ್ನು ಭೇಟಿಯಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಚಿತ್ರದ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಈ ಸಂದರ್ಭದಲ್ಲಿದ್ದರು.

ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಗಳಿಸುತ್ತಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರತಂಡವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಅಭಿನಂದಿಸಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರಿದಿರುವ ಬೆನ್ನಲ್ಲೇ ಈ ಮಹತ್ವದ ಭೇಟಿ ನಡೆದಿದ್ದು, ʻರಾಮಾಯಣʼ ಕುರಿತು ಅಮಿತ್ ಶಾ ಅವರಿಗಿರುವ ಆಳವಾದ ಜ್ಞಾನ ಮತ್ತು ತಮಗೆ ದೊರೆತ ಮೆಚ್ಚುಗೆಯನ್ನು ಚಿತ್ರತಂಡವು ತಮ್ಮ ಶ್ರಮಕ್ಕೆ ಸಿಕ್ಕ ವಿಶೇಷ ಗೌರವ ಎಂದು ಬಣ್ಣಿಸಿದೆ.

ಚಿತ್ರತಂಡಕ್ಕೆ ಅಮಿತ್‌ ಶಾ ಭರ್ಜರಿ ಮೆಚ್ಚುಗೆ

ಈ ವಿಶೇಷ ಭೇಟಿಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ಪ್ರಮುಖ ನಟರಾದ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಸಹ-ನಿರ್ಮಾಪಕ ನೀರಜ್ ಸಂಘೈ ಉಪಸ್ಥಿತರಿದ್ದರು. ಭಾರತೀಯ ಮಹಾಕಾವ್ಯವನ್ನು ಇಷ್ಟು ಬೃಹತ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿತೆರೆಗೆ ತಂದ ಚಿತ್ರತಂಡದ ಪ್ರಯತ್ನವನ್ನು ಅಮಿತ್ ಶಾ ಮುಕ್ತಕಂಠದಿಂದ ಶ್ಲಾಘಿಸಿದರು. ರಾಮಾಯಣದ ಇತಿಹಾಸ ಮತ್ತು ಅದರ ಸಾಂಸ್ಕೃತಿಕ ಮಹತ್ವವೂ ಸೇರಿದಂತೆ ಮಹಾಕಾವ್ಯದ ಕುರಿತು ಶಾ ಅವರಿಗಿರುವ ಆಳವಾದ ಜ್ಞಾನವನ್ನು ಕಂಡು ಚಿತ್ರತಂಡವು ಖುಷಿಪಟ್ಟಿದೆ.

ಪ್ರತಿದಿನ ಹೊಸ ಹೊಸ ದಾಖಲೆ ಬರೆಯುತ್ತಿರುವ ʻರಾಮಾಯಣʼ; ಅಲ್ಲು ಅರ್ಜುನ್‌ ನಟನೆಯ ʻಪುಷ್ಪ 2ʼ ರೆಕಾರ್ಡ್‌ ಬ್ರೇಕ್‌ ಮಾಡಲು ಇನ್ನೆಷ್ಟು ಕೋಟಿ ಬೇಕು?

2000 ಕೋಟಿ ಕ್ಲಬ್‌ನತ್ತ ʻರಾಮಾಯಣʼ

ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರವು ನವೆಂಬರ್ 5 ರಂದು ಭಾರತದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತಾಮಾತೆಯಾಗಿ, ಯಶ್ ರಾವಣನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 1,750 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಈ ಸಿನಿಮಾ, ಇದೀಗ 2,000 ಕೋಟಿ ಕ್ಲಬ್ ಸೇರುವತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಚಿತ್ರದ ಅದ್ಧೂರಿ ದೃಶ್ಯವೈಭವ, ಭಾವನಾತ್ಮಕ ನಿರೂಪಣೆ ಹಾಗೂ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಅವರ ಜುಗಲ್‌ಬಂದಿ ಸಂಗೀತಕ್ಕೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಚಿತ್ರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಸಿಕ್ಕಿದ್ದು, 2027ರ ಆಸ್ಕರ್ ಪ್ರಶಸ್ತಿಗಳ (Academy Awards) 'ಅತ್ಯುತ್ತಮ ವಿಶುವಲ್‌ ಎಫೆಕ್ಟ್ಸ್‌' ವಿಭಾಗದ 20 ಚಿತ್ರಗಳ ಲಾಂಗ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಎಲ್ಲಾ ಯಶಸ್ಸಿನ ನಡುವೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಇಡೀ ತಂಡಕ್ಕೆ ಕೇಂದ್ರ ಗೃಹ ಸಚಿವರೊಂದಿಗಿನ ಈ ಭೇಟಿಯು ಚಿತ್ರದ ಪಯಣದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.