ʻರಿಯಲ್ ಸ್ಟಾರ್ʼ ಉಪೇಂದ್ರ ಅವರು ಕಳೆದ ವರ್ಷ ರಜನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ನಟಿಸಿದ್ದರು. ಬಹಳ ದಿನಗಳ ನಂತರ ತಮಿಳಿಗೆ ಎಂಟ್ರಿ ಕೊಟ್ಟಿದ್ದ ಅವರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಅವರೀಗ ಪುನಃ ತಮಿಳು ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ಕೂಲಿ ಚಿತ್ರದಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಕೆಲಸ ಮಾಡಿದ್ದ ಅವರು ಈ ಬಾರಿ ಮತ್ತೋರ್ವ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಜೊತೆ ಕೆಲಸ ಮಾಡಲಿದ್ದಾರೆ.
ಹೌದು, ಕಾರ್ತಿಕ್ ಸುಬ್ಬರಾಜ್ ಸದ್ಯಕ್ಕೆ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಿರತರಾಗಿದ್ದು, ಅದಕ್ಕೆ ಇಳಯರಾಜ ಸಂಗೀತ ನೀಡುತ್ತಿದ್ದಾರೆ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ ಗುನೀತ್ ಮೋಂಗಾ ಬಂಡವಾಳ ಹೂಡುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿಯೇ ಉಪೇಂದ್ರ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
Actor Upendra: ಸಿಲಿಂಡರ್‌ಗೂ ನನಗೂ ಲಿಂಕ್ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ
ಈ ಚಿತ್ರದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಾಗಿದೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಆಪ್ತಮೂಲಗಳು ಖಚಿತಪಡಿಸಿವೆ. ಕಾರ್ತಿಕ್ ಸುಬ್ಬರಾಜ್ ಅವರ 'ಸ್ಟೋನ್ ಬೆಂಚ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಶೂಟಿಂಗ್ ಜುಲೈನಿಂದ ಆರಂಭವಾಗಲಿದೆ.
ಹೀರೋ ಆಗಿ ಸಿದ್ದಲಿಂಗಯ್ಯ ಮೊಮ್ಮಗ
ಕನ್ನಡ ಸಿನಿಮಾ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ (ನಟ ಮುರಳಿ ಅವರ ಪುತ್ರ) ಅಥರ್ವ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಕಾರ್ತಿಕ್ ಸುಬ್ಬರಾಜ್ ಜೊತೆ ಅಥರ್ವ ಕೈಜೋಡಿಸಿದ್ದಾರೆ. ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅಥರ್ವ, ಸದ್ಯ 'ಹೃದಯಂ ಮುರಳಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಇನ್ನು ಹೆಸರಿಡದ ಕಾರ್ತಿಕ್ ಸುಬ್ಬರಾಜ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್ ಮಾಡ್ತೀನಿ; ಜನರ ತಲೆಗೆ ಹುಳಬಿಟ್ಟ ಉಪೇಂದ್ರ!
ಉಪ್ಪಿ ನಟನೆಯ ಮೂರನೇ ತಮಿಳು ಸಿನಿಮಾ
ನಟ ಉಪೇಂದ್ರ ಅವರು ಈ ಹಿಂದೆ ವಿಶಾಲ್ ನಟನೆಯ 'ಸತ್ಯಂ' (2008) ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದ್ದರು. ಅದಾಗಿ 17 ವರ್ಷಗಳ ನಂತರ ರಜನಿಕಾಂತ್ ಅಭಿನಯದ 'ಕೂಲಿ' (2025) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಕಾರ್ತಿಕ ಸುಬ್ಬರಾಜ್ ಸಿನಿಮಾಕ್ಕೆ ಓಕೆ ಎಂದಿದ್ದಾರೆ. ಇನ್ನು, ಕನ್ನಡದಲ್ಲಿ ಉಪೇಂದ್ರ ನಟನೆಯ ಭಾರ್ಗವ, ತ್ರಿಶೂಲಂ, ಬುದ್ದಿವಂತ 2 ಸಿನಿಮಾಗಳು ತೆರೆಗೆ ಬರಬೇಕಿವೆ. ಆಂಧ್ರ ಕಿಂಗ್ ತಾಲೂಕಾ ಸಿನಿಮಾದ ನಂತರ ತೆಲುಗಿನಿಂದಲೂ ಅವರಿಗೆ ಆಫರ್ಸ್ ಬರುತ್ತಿವೆಯಂತೆ.