ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಬುಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಊರ್ವಶಿ ಪುತ್ರಿ ತೇಜಾ; ಹೀರೋ ʻಬಿಗ್‌ ಬಾಸ್‌ʼ ಭುವನ್‌ ಹೇಳಿದ್ದೇನು?

'ಬಿಗ್ ಬಾಸ್' ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ 'ಬುಲ್ಲಿ' ಚಿತ್ರದ ಮೂಲಕ ಬಹುಭಾಷಾ ಹಿರಿಯ ನಟಿ ಊರ್ವಶಿ ಅವರ ಮಗಳು ತೇಜಾ ನಾಯರ್ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. 10 ವರ್ಷಗಳ ನಂತರ ಕನ್ನಡಕ್ಕೆ ಮರಳಿರುವ ಊರ್ವಶಿ ಕೂಡ ಈ ಚಿತ್ರದಲ್ಲಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ.

ʻಬಿಗ್ ಬಾಸ್ʼ ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ "ಬುಲ್ಲಿ" ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಕಾಮಿಡಿ ಚಿತ್ರದಲ್ಲಿ ಬಹುಭಾಷಾ ಹಿರಿಯ ನಟಿ ಊರ್ವಶಿ ಅವರು ಭುವನ್ ಜೊತೆ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ, ಊರ್ವಶಿ ಅವರ ಮಗಳು ತೇಜಾ ಊರ್ವಶಿ ನಾಯರ್ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

'ಸಮೃದ್ಧ್ ಸ್ಟುಡಿಯೋಸ್' ಹಾಗೂ 'ಭುವನಂ ಎಂಟರ್ಟೈನ್ಮೆಂಟ್' ಲಾಂಛನದಲ್ಲಿ ನವೀನ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಆಕರ್ಶ್ ಹಾಗೂ ಹರ್ಷಿಕಾ ಪೂಣಚ್ಚ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

10 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ಊರ್ವಶಿ

ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಊರ್ವಶಿ, "ಸುಮಾರು 10 ವರ್ಷಗಳ ನಂತರ ನಾನು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದೇನೆ. ಹಲವು ಆಫರ್‌ಗಳು ಬಂದಿದ್ದರೂ ಸೂಕ್ತ ಕಥೆ ಸಿಕ್ಕಿರಲಿಲ್ಲ. ಭುವನ್ ಮತ್ತು ಹರ್ಷಿಕಾ ಚೆನ್ನೈಗೆ ಬಂದು ಈ ಸಿನಿಮಾದ ಕಥೆ ಹಾಗೂ ಯೋಜನೆ ತಿಳಿಸಿದಾಗ ನನಗೆ ತುಂಬಾ ಖುಷಿಯಾಯಿತು" ಎಂದರು.

Bhuvann Ponnannaa: ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌ ಪೊನ್ನಣ್ಣ; ಏನದು?

ಮಗಳು ನಟಿಸುತ್ತಿರುವುದು ಖುಷಿ ನೀಡಿದೆ

"ಈ ಸಿನಿಮಾ ಒಪ್ಪಿಕೊಳ್ಳದೇ ಇದ್ದರೆ ಒಂದು ಅತ್ಯುತ್ತಮ ಚಿತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎನಿಸುತ್ತಿತ್ತು. ಭುವನ್ ಅವರೊಂದಿಗೆ ನಟಿಸಿ ತುಂಬಾ ಸಂತೋಷವಾಗಿದೆ. ಅವರು ಮುಂದಿನ ದಿನಗಳಲ್ಲಿ ಒಬ್ಬ ಪ್ರಮುಖ ನಾಯಕ ನಟನಾಗಿ ಹೊರಹೊಮ್ಮಲಿದ್ದಾರೆ. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರ್ ನಾಗ್, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಕನ್ನಡದ ದಿಗ್ಗಜ ನಟರೊಂದಿಗೆ ಅಭಿನಯಿಸಿದ ಅನುಭವ ನನಗಿದೆ. ಕನ್ನಡ ಚಿತ್ರರಂಗ ನನ್ನನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸಿದೆ. ಈಗ ನನ್ನ ಮಗಳ ಸಿನಿಮಾಯಾನವೂ ಕನ್ನಡ ಚಿತ್ರರಂಗದಿಂದಲೇ ಆರಂಭವಾಗುತ್ತಿರುವುದು ಅತ್ಯಂತ ಸಂತಸ ತಂದಿದೆ" ಎಂದು ತಿಳಿಸಿದರು.

ಡಾರ್ಕ್ ಕಾಮಿಡಿ ಜಾನರ್‌ನ 'ಬುಲ್ಲಿ'

ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಟ ಭುವನ್ ಪೊನ್ನಣ್ಣ, "700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ಅವರ ಜೊತೆ ನಟಿಸುವುದು ನನ್ನ ಬಹುದಿನದ ಕನಸಾಗಿತ್ತು. ಈ ಚಿತ್ರದ ಮೂಲಕ ಅದು ಈಡೇರಿದೆ. ಇದೊಂದು 'ಡಾರ್ಕ್ ಕಾಮಿಡಿ' ಜಾನರ್‌ನ ಸಿನಿಮಾವಾಗಿದ್ದು, ಮನರಂಜನೆಯೇ ಪ್ರಧಾನವಾಗಿದೆ. ತಾಯಿ-ಮಗನ ಅಪರೂಪದ ಬಾಂಧವ್ಯದ ಕಥೆಯೂ ಇದರಲ್ಲಿದೆ" ಎಂದರು.

ಮೊದಲ ಹಂತದ ಚಿತ್ರೀಕರಣ ಮುಕ್ತಾಯ

"ಚಿತ್ರದಲ್ಲಿ ನಾನು 'ಬಲರಾಮ' ಎಂಬ ಮಧ್ಯಮ ಕುಟುಂಬದ 'Gen Z' ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸ್ನೇಹಿತರು ಪ್ರೀತಿಯಿಂದ 'ಬುಲ್ಲಿ' ಎಂದು ಕರೆಯುವುದರಿಂದ ಚಿತ್ರಕ್ಕೆ ಅದೇ ಶೀರ್ಷಿಕೆ ಇಡಲಾಗಿದೆ. ಪ್ರಸ್ತುತ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಊರ್ವಶಿ ಅವರ ಅಭಿನಯದ ಭಾಗದ ಶೂಟಿಂಗ್ ಪೂರ್ಣಗೊಂಡಿದೆ" ಎಂದು ಭುವನ್ ಹೇಳಿದರು. ಈ ಚಿತ್ರಕ್ಕೆ ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣವಿದ್ದು, ತಾರಾಗಣದಲ್ಲಿ ಅಚ್ಯುತ್ ಕುಮಾರ್, ಓಂ ಪ್ರಕಾಶ್ ರಾವ್, ಪ್ರಕಾಶ್ ತುಮ್ಮಿನಾಡು, ಹುಲಿ ಕಾರ್ತಿಕ್ ಮತ್ತು ಬಾಲ ನಟ ಆರ್ಯ ಸಂತೋಷ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.