ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varalaxmi Sarathkumar: ಕಿಚ್ಚನ ನಾಯಕಿ ಇದೀಗ ನಿರ್ದೇಶಕಿ; ಕಾಲಿವುಡ್‌ನಲ್ಲಿ ಹೊಸ ಸಾಹಸಕ್ಕೆ ಮುಂದಾದ ವರಲಕ್ಷ್ಮೀ

ಕಾಲಿವುಡ್‌ನ ಹಿರಿಯ ನಟ ಶರತ್‌ ಕುಮಾರ್‌ ಅವರ ಪುತ್ರಿ, ಬಹುಭಾಷಾ ನಟಿ ವರಲಕ್ಷ್ಮೀ ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ʼಸರಸ್ವತಿʼ ಚಿತ್ರದ ಮೂಲಕ ನಿರ್ದೇಶಕಿ, ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಪ್ರಿಯಾಮಣಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕಾಲಿವುಡ್‌ನಲ್ಲಿ ಹೊಸ ಸಾಹಸಕ್ಕೆ ಮುಂದಾದ ವರಲಕ್ಷ್ಮೀ

-

Ramesh B Ramesh B Sep 27, 2025 9:33 PM

ಚೆನ್ನೈ: 2014ರಲ್ಲಿ ತೆರೆಕಂಡ ಕಿಚ್ಚ ಸುದೀಪ್‌ (Sudeepa) ನಟಿಸಿ, ನಿರ್ದೇಶಿಸಿದ ʼಮಾಣಿಕ್ಯʼ (Maanikya) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ ಕಾಲಿವುಡ್‌ ನಟಿ, ಬಹುಭಾಷಾ ತಾರೆ ವರಲಕ್ಷ್ಮೀ ಶರತ್‌ಕುಮಾರ್‌ (Varalaxmi Sarathkumar) ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಟನೆಯ ಬಳಿಕ ಇದೀಗ ನಿರ್ದೇಶನ ಮತ್ತು ನಿರ್ಮಾಣಕ್ಕೆ ಇಳಿದಿದ್ದು, ತಮಿಳು ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ. ಚಿತ್ರಕ್ಕೆ ʼಸರಸ್ವತಿʼ (Saraswathi) ಎಂದು ಹೆಸರಿಡಲಾಗಿದ್ದು, ಪ್ರಿಯಾಮಣಿ (Priyamani) ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರ ತಮಿಳು ಜತೆಗೆ ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲೂ ತೆರೆಗೆ ಬರಲಿದೆ. ವಿಶೇಷ ಎಂದರೆ ನಿರ್ದೇಶನದ ಜತೆಗೆ ವರಲಕ್ಷ್ಮೀ ತಮ್ಮ ಸಹೋದರಿ ಪೂಜಾ ಶರತ್‌ಕುಮಾರ್‌ ಅವರೊಂದಿಗೆ ಸೇರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮನ್‌ ಎಸ್‌. ಸಂಗೀತ ಸಂಯೋಜಿಸಲಿದ್ದಾರೆ.

ತಮ್ಮ ಹೊಸ ಸಾಹಸದ ಬಗ್ಗೆ ವರಲಕ್ಷ್ಮೀ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼನಿರ್ದೇಶಕಿಯಾಗಿ ಹೊಸ ಪಯಣ ಆರಂಭಿಸುತ್ತಿರುವ ಬಗ್ಗೆ ಖುಷಿಯಾಗುತ್ತಿದೆ. ನನ್ನ ಸಹೋದರಿ ಪೂಜಾ ಜತೆ ಸೇರಿ ನಿರ್ಮಾಣಕ್ಕಿಳಿದಿರುವುದು ಬೋನಸ್‌. ನನ್ನ ಜತೆ ಕೈಜೋಡಿಸಿದ ಕಲಾವಿದರು, ತಂತ್ರಜ್ಞರಿಗೆ ಧನ್ಯವಾದಗಳು. ಅತ್ಯತ್ತಮವಾದುದನ್ನೇ ನೀಡಲು ಶ್ರಮಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಅಗತ್ಯʼʼ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Varalaxmi Sarathkumar: ಬಾಲ್ಯದಲ್ಲಿ 5-6 ಮಂದಿಯಿಂದ ಕಿರುಕುಳ; ಕಿಚ್ಚ ಸುದೀಪ್‌ ನಾಯಕಿ ವರಲಕ್ಷ್ಮೀಯ ಕಣ್ಣೀರ ಕಥೆ ಇದು

ಸಹೋದರಿಯರಾದ ವರಲಕ್ಷ್ಮೀ ಮತ್ತು ಪೂಜಾ ತಮ್ಮದೇ ಬ್ಯಾನರ್‌ ದೋಸ ಡೈರೀಸ್‌ ಎನ್ನುವ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಮೊದಲ ಪ್ರಾಜೆಕ್ಟ್‌ ಆಗಿ ʼಸರಸ್ವತಿʼ ಮೂಡಿ ಬರಲಿದೆ. ಪ್ರಕಾಶ್‌ ರಾಜ್‌, ನವೀನ್‌ ಚಂದ್ರ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮೇಲ್ನೋಟಕ್ಕೆ ಇದು ಮಹಿಳಾ ಪ್ರಧಾನ ಚಿತ್ರ ಎನ್ನುವ ಸೂಚನೆ ಸಿಕ್ಕಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

ಕಾಲಿವುಡ್‌ನ ಹಿರಿಯ ನಟ ಶರತ್‌ಕುಮಾರ್‌ ಅವರ ಪುತ್ರಿ ವರಲಕ್ಷ್ಮೀ 2012ರಲ್ಲಿ ರಿಲೀಸ್‌ ಆದ ʼಪೋಡಾ ಪೋಡಿʼ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದಾದ ಬಳಿಕ 2014ರಲ್ಲಿ ʼಮಾಣಿಕ್ಯʼ ಮೂಲಕ ಸ್ಯಾಂಡಲ್‌ವುಡ್‌ಗೆ ಆಗಮಿಸಿದರು. ನಂತರ ಸುದೀಪ್‌ ಅವರ ʼರನ್ನʼ ಸಿನಿಮಾದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. 2016ರಲ್ಲಿ ಮಮ್ಮುಟ್ಟಿ ಅಭಿನಯದ ʼಕಸಬʼ ಮೂಲಕ ಮಲಯಾಳಂಗೂ ಪ್ರವೇಶಿಸಿದರು.

2019ರಲ್ಲಿ ತೆರೆಕಂಡ ʼತೆನಾಲಿ ರಾಮಕೃಷ್ಣ ಬಿಎ, ಬಿಲ್‌ʼ ವರಲಕ್ಷ್ಮೀ ನಟಿಸಿದ ಮೊದಲ ತೆಲುಗು ಚಿತ್ರ. ಕಳೆದ ವರ್ಷ ತೆರೆಕಂಡ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ ʼಮ್ಯಾಕ್ಸ್‌ʼನಲ್ಲಿಯೂ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಖಡಕ್‌ ಪಾತ್ರ ಅದರಲ್ಲಿಯೂ ಪೊಲೀಸ್‌ ಪಾತ್ರಕ್ಕೆ ಜನಪ್ರಿಯರಾಗಿರುವ ಅವರು ಸಹಜಾಭಿನಯದಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಕಳೆದ ವರ್ಷ ನಿಕೋಲೈ ಸಚ್‌ದೇವ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರು ಸದ್ಯ ಇಂಗ್ಲಿಷ್‌, ತಮಿಳು ಮತ್ತು ಅರೆಬಿಕ್‌ನಲ್ಲಿ ತಯಾರಾಗುತ್ತಿರುವ ʼರಿಝಾನ-ಎ ಕ್ಯಾಜ್ಡ್‌ ಬರ್ಡ್‌ʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.