70-80ರ ದಶಕದಲ್ಲಿ ಬಂಗಾಳಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ನಟಿ ಮಿಥು ಮುಖರ್ಜಿ ಅವರು ಭಾನುವಾರ (ಸೆ.20) ರಾತ್ರಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಕಳೆದ ಒಂದು ವರ್ಷದಿಂದ ತೀವ್ರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
17ನೇ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ
1955ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಮಿಥು ಮುಖರ್ಜಿ ಅವರು ತಮ್ಮ 17ನೇ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟರು. 1972ರಲ್ಲಿ ಖ್ಯಾತ ನಿರ್ದೇಶಕ ಚಿತ್ತಾ ಬೋಸ್ ಅವರ ‘ಶೇಷ್ ಪರ್ಬಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು, ನಟ ಶಮಿತ್ ಭಂಜಾ ಅವರಿಗೆ ಜೋಡಿಯಾಗಿ ನಟಿಸಿದ್ದರು. ನಂತರ ದಿನೇನ್ ಗುಪ್ತಾ ನಿರ್ದೇಶನದ ‘ಮರ್ಜಿನಾ ಅಬ್ದುಲ್ಲಾ’ ಚಿತ್ರವು ಇವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರದಲ್ಲಿ ನಟ ದೇವ್‌ರಾಜ್ ರಾಯ್ ಎದುರು ಶೀರ್ಷಿಕೆ ಪಾತ್ರದಲ್ಲಿ ಮಿಥು ಮುಖರ್ಜಿ ಪ್ರದರ್ಶಿಸಿದ ಮನೋಜ್ಞ ಅಭಿನಯ ಅವರಿಗೆ ಚಿತ್ರರಂಗದಲ್ಲಿ ಭದ್ರ ನೆಲೆ ಒದಗಿಸಿತು.
ದಕ್ಷಿಣ ಭಾರತದ ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ; ಗಣ್ಯರಿಂದ ಕಂಬನಿ
ಲಜೆಂಡರಿ ಹೀರೋಗಳ ಜೊತೆ ನಟನೆ
ತಮ್ಮ ಸುವರ್ಣ ಕಾಲಘಟ್ಟದಲ್ಲಿ ಬಂಗಾಳಿ ಚಿತ್ರರಂಗದ ದಂತಕಥೆಗಳಾದ ಉತ್ತಮ್ ಕುಮಾರ್, ಸೌಮಿತ್ರ ಚಟರ್ಜಿ ಹಾಗೂ ರಂಜಿತ್ ಮಲ್ಲಿಕ್ ಅವರಂತಹ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಖ್ಯಾತಿ ಇವರದ್ದು. ‘ನಿಶಿಕನ್ಯಾ’, ‘ಮೌಚಕ್’, ‘ಕಬಿ’, ‘ಹೋಟೆಲ್ ಸ್ನೋ ಫಾಕ್ಸ್’, ‘ಪ್ರತಿಮಾ’, ‘ಬಂಧನ್’, ‘ಪ್ರಾರ್ಥನಾ’ ಮತ್ತು ‘ಸ್ವಯಂಸಿದ್ಧ’ ಸೇರಿದಂತೆ ಸಾಲು ಸಾಲು ಹಿಟ್ ಬಂಗಾಳಿ ಚಿತ್ರಗಳಲ್ಲಿ ನಟಿಸಿ, ಆ ಕಾಲದ ಮುಂಚೂಣಿ ನಟಿಯಾಗಿ ಮಿಂಚಿದರು.
ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದ ನಟಿ
ಬಂಗಾಳಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಮಿಥು ಮುಖರ್ಜಿ ತಮ್ಮದೇ ಆದ ಛಾಪು ಮೂಡಿಸಿದ್ದರು. 1976ರಲ್ಲಿ ದುಲಾಲ್ ಗುಹಾ ನಿರ್ದೇಶನದ ‘ಖಾನ್ ದೋಸ್ತ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಅವರು, ಬಸು ಚಟರ್ಜಿ ನಿರ್ದೇಶನದ ‘ಸಫೇದ್ ಝೂಟ್’, ಧರ್ಮೇಂದ್ರ-ಹೇಮಾ ಮಾಲಿನಿ ಅಭಿನಯದ ‘ದಿಲ್ಲಗಿ’ ಹಾಗೂ ‘ದೋ ಲಡ್ಕೆ ದೋನೋ ಕಡ್ಕೆ’ ಮುಂತಾದ ಜನಪ್ರಿಯ ಹಿಂದಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
36 ವರ್ಷಗಳಿಂದ ನಟನೆಗೆ ಬ್ರೇಕ್
1980ರ ದಶಕದಲ್ಲಿ ‘ದುಜಾನೆ’ ಚಿತ್ರದ ನಂತರ ನಟನೆಯಿಂದ ತಾತ್ಕಾಲಿಕ ವಿರಾಮ ಪಡೆದುಕೊಂಡಿದ್ದ ಮುಖರ್ಜಿ, ಬಳಿಕ 1990ರಲ್ಲಿ ಚಂದ್ರ ಬರೋಟ್ ನಿರ್ದೇಶನದ ‘ಆಶ್ರಿತಾ’ ಚಿತ್ರದ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಮರಳಿದರು. ಆದರೆ ಇದೇ ಅವರ ವೃತ್ತಿಬದುಕಿನ ಕೊನೆಯ ಸಿನಿಮಾವಾಯಿತು.
ಆ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಸರಿದ ಅವರು, ಮುಂಬೈನಲ್ಲಿ ನೆಲೆಸಿ ಅತ್ಯಂತ ಸರಳ ಹಾಗೂ ಪ್ರಚಾರ ರಹಿತವಾದ ಬದುಕನ್ನು ಸಾಗಿಸುತ್ತಿದ್ದರು. ಸಾರ್ವಜನಿಕ ಸಮಾರಂಭಗಳಿಂದಲೂ ದೂರವೇ ಉಳಿದಿದ್ದ ಈ ಹಿರಿಯ ಕಲಾವಿದೆ ಮಿಥು ಮುಖರ್ಜಿ, ಇದೀಗ ಇಹಲೋಕ ತ್ಯಜಿಸುವುದರೊಂದಿಗೆ ಬಂಗಾಳಿ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತಾಗಿದೆ.