ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಿರಿಯ ನಟಿ ‘ಸಾಹುಕಾರ್‌’ ಜಾನಕಿ ತೀವ್ರ ಅಸ್ವಸ್ಥ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ಹಿರಿಯ ನಟಿ ʻಸಾಹುಕಾರ್‌ʼ ಜಾನಕಿ ವಯೋಸಹಜ ಅನಾರೋಗ್ಯ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಹಿರಿಯ ಕಲಾವಿದೆಯ ಆರೋಗ್ಯ ಸದ್ಯ ಸ್ಥಿರವಾಗಿದ್ದು, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಅಭಿಮಾನಿಗಳು ಜಾನಕಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಬಹುಭಾಷಾ ನಟಿ, ಪದ್ಮಶ್ರೀ ಪುರಸ್ಕೃತೆ ‘ಸಾಹುಕಾರ್‌’ ಜಾನಕಿ (95) ತೀವ್ರ ಅಸ್ವಸ್ಥಗೊಂಡಿದ್ದಾರೆ. ವಯೋಸಹಜ ಸಮಸ್ಯೆಗಳು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ (ಆ.20) ರಾತ್ರಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ ಕಾರಣ, ವೈದ್ಯರು ಅವರನ್ನು ತುರ್ತು ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಜಾನಕಿ ಅವರಿಗೆ ‘ಸಾಹುಕಾರ್‌’ ಹೆಸರು ಬಂದಿದ್ದು ಹೇಗೆ?

‘ಸಾಹುಕಾರ್‌’ ಜಾನಕಿ ಅವರ ಮೂಲ ಹೆಸರು ಶಂಕರಮಂಚಿ ಜಾನಕಿ. ಇವರು 1931ರ ಡಿಸೆಂಬರ್ 12ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ಆಕಾಶವಾಣಿ ನಾಟಕಗಳ ಮೂಲಕ ಕಲಾಕ್ಷೇತ್ರಕ್ಕೆ ಕಾಲಿಟ್ಟ ಇವರು, ತಮ್ಮ ಸ್ಪಷ್ಟ ವಾಕ್ಚಾತುರ್ಯ ಮತ್ತು ನಿರರ್ಗಳ ಉಚ್ಚಾರಣೆಯಿಂದ ಗಮನ ಸೆಳೆದರು. 1950ರಲ್ಲಿ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್‌) ಜೊತೆ ‘ಸಾಹುಕಾರ್‌’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಚಿತ್ರವೇ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ಅದೇ ಹೆಸರು ಅವರೊಂದಿಗೆ ಸೇರಿಕೊಂಡು ‘ಸಾಹುಕಾರ್‌’ ಜಾನಕಿ ಎಂದೇ ಚಿತ್ರರಂಗದಲ್ಲಿ ಚಿರಪರಿಚಿತರಾದರು. ಇವರ ಸಹೋದರಿ ಕೃಷ್ಣಕುಮಾರಿ ಕೂಡ ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟಿಯಾಗಿ ಮಿಂಚಿದ್ದರು.

ನಾಲ್ಕು ತಲೆಮಾರಿನ ನಟರೊಂದಿಗೆ 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯ

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಒಟ್ಟು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಇವರದ್ದು. ಇದರಲ್ಲಿ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಡಾ. ರಾಜ್‌ಕುಮಾರ್, ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಮುಂತಾದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ತಮ್ಮ ಕಾಲದ ಅಗ್ರತಾರೆಯಾಗಿ ಬೆಳಗಿದರು. ಬಹುಭಾಷಾ ಪ್ರಾವೀಣ್ಯತೆ ಹೊಂದಿದ್ದ ಇವರು, ಪರಭಾಷಾ ಚಿತ್ರಗಳಲ್ಲೂ ತಮ್ಮ ಪಾತ್ರಗಳಿಗೆ ತಾವೇ ಖುದ್ದು ಡಬ್ಬಿಂಗ್ ಮಾಡುತ್ತಿದ್ದುದು ವಿಶೇಷ. ನಾಯಕಿಯಾಗಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ವಿಶಿಷ್ಟ ಪೋಷಕ ಪಾತ್ರಗಳ ಮೂಲಕ ಸತತ ನಾಲ್ಕು ತಲೆಮಾರುಗಳ ನಟ-ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ನಟಿ ಸಮಂತಾ ಆರೋಗ್ಯವಾಗಿದ್ದಾರೆ: ಮ್ಯಾನೇಜರ್ ಮಹೇಂದ್ರ ಸ್ಪಷ್ಟನೆ

ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಗೌರವ

ಚಿತ್ರರಂಗ ಹಾಗೂ ಕಲಾಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ದೇಶದ ಪ್ರತಿಷ್ಠಿತ ನಾಗರಿಕ ಗೌರವವಾದ ‘ಪದ್ಮಶ್ರೀ’ ನೀಡಿ ಸತ್ಕರಿಸಿದೆ. ಇದರೊಂದಿಗೆ ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಸೇರಿದಂತೆ ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಸಂದಿವೆ.

ಪ್ರಸ್ತುತ ಚೆನ್ನೈನ ಆಳ್ವಾರ್‌ಪೇಟೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಜಾನಕಿ ಅವರು ಅಸ್ವಸ್ಥರಾಗಿರುವ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿರಿಯ ಚೇತನವು ಶೀಘ್ರ ಗುಣಮುಖರಾಗಲೆಂದು ಚಿತ್ರರಂಗ ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.