ನವದೆಹಲಿ: ಬಾಲಿವುಡ್ ಕ್ಯೂಟ್ ಕಪಲ್ ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina Kaif) ಜೋಡಿ ಕೂಡ ಒಂದು. ಈ ಜೋಡಿಯು 2021 ರಲ್ಲಿ ವಿವಾಹವಾಗಿದ್ದು ಆಗಾಗ ತಮ್ಮ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ಸೆಪ್ಟೆಂಬರ್ 23 ರಂದು ಈ ದಂಪತಿ ತಾವು ಪೋಷಕರಾಗುವುದಾಗಿ ತಿಳಿಸಿ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ನಟಿ ಕತ್ರಿನಾ ಕೈಫ್ ಅವರು ನವೆಂಬರ್ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಇವರ ಬದುಕಲ್ಲಿ ಮೊದಲ ಮಗುವಿನ ಆಗಮನವಾಗಿದ್ದು ಈ ಸಂತಸದ ಕ್ಷಣಗಳ ಬಗ್ಗೆ ದಂಪತಿಗಳಿಬ್ಬರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಗಂಡು ಮಗುವಿನ ಜನನವಾಗಿದೆ. ಬಹುದಿನಗಳ ಕನಸು ನನಸಾಗಿದೆ ಎಂಬರ್ಥದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಅಭಿಮಾನಿಗಳು ದಂಪತಿಗಳಿಗೆ ಶುಭಕೋರಿದ್ದಾರೆ.
ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ವಯಸ್ಸಿ ನಲ್ಲಿ ಕತ್ರಿನಾ ವಿಕ್ಕಿಗಿಂತಲೂ ದೊಡ್ಡವರಾಗಿದ್ದರೂ ಅವರು ಪರಸ್ಪರ ಸಹಬಾಳ್ವೆಯುತ ಜೀವನ ನಡೆಸುವುದು ಅನೇಕರಿಗೆ ಸ್ಫೂರ್ತಿ ಎಂದೆ ಹೇಳಬಹುದು. ಪರಸ್ಪರ ಪ್ರೀತಿಸಿ, ಕುಟುಂಬದವರ ಸಮ್ಮತಿಯೊಂದಿಗೆ ಈ ಜೋಡಿ ವಿವಾಹವಾಗಿದ್ದರು.
ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಳೆದ ವರ್ಷವಷ್ಟೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅದಾಗಿ ಕೆಲವು ತಿಂಗಳ ಬಳಿಕ ಕತ್ರಿನಾ ಅವರು ಗರ್ಭಿಣಿಯಾಗಿದ್ದರು. ಅನಂತರ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಸೀಮಂತದ ಫೋಟೊ ಹಂಚಿಕೊಳ್ಳುವ ಮೂಲಕ ವಿಚಾರವನ್ನು ರಿವಿಲ್ ಮಾಡಿದ್ದರು. ಇದೀಗ ಈ ಜೋಡಿಗೆ ಮುದ್ದಾದ ಗಂಡು ಮಗು ಜನಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಅವರ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇದನ್ನು ಓದಿ:Gathavibhava Movie: ಸಿಂಪಲ್ ಸುನಿ ʼಗತವೈಭವʼ ದಲ್ಲಿ ದುಷ್ಯಂತ್ ಸಿನಿವೈಭವ
ಈ ದಂಪತಿಗಳು ತಮ್ಮ ಬದುಕಲ್ಲಿ ಮಗುವಿನ ಆಗಮನ ಆದ ಕುರಿತು ಶುಕ್ರವಾರದಂದು ಪೋಸ್ಟ್ ಹಂಚಿಕೊಂಡಿದ್ದಾರೆ. ನಮ್ಮ ಸಂತೋಷದ ಬಂಡಲ್ ಒಂದು ಬಂದಿದೆ. ನಮ್ಮ ದಾಂಪತ್ಯ ಜೀವನಕ್ಕೆ ಮಗುವಿನ ಆಗಮನವಾಗಿದೆ. ನಮಗೆ ಹಾರೈಸಿದ ವರಿಗೆ ಅಪಾರ ಕೃತಜ್ಞತೆಗಳು.. ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಬಾಲಿವುಡ್‌ನ ಆಪ್ತರಾದ ಕರಿನಾ ಕಪೂರ್,ಉಪಾಸನಾ ಕೊನ್ನಿಡೆಲಾ, ಪರಿಣಿತಿ ಚೋಪ್ರಾ, ಶ್ರೇಯಾ ಗೋಷಾಲ್ , ಪ್ರಿಯಾಂಕ ಚೋಪ್ರಾ ಮತ್ತು ಕತ್ರಿನಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.
ವಿಕಿ ಕೌಶಲ್ ಅವರ ಸಹೋದರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅವರು ನಾನು ಚಿಕ್ಕಪ್ಪನಾದೆ ಎಂದು ಬರೆದಿದ್ದು ಅವರ ಸ್ಟೋರಿ ಪೋಸ್ಟರ್ ಕೂಡ ವೈರಲ್ ಆಗುತ್ತಿದೆ. ವಿಕ್ಕಿ ಕೊನೆಯ ಬಾರಿಗೆ ಬ್ಲಾಕ್‌ಬಸ್ಟರ್ ಚಿತ್ರ 'ಛಾವಾ'ದಲ್ಲಿ ಕಾಣಿಸಿ ಕೊಂಡಿದ್ದರು. ಅವರು ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ & ವಾರ್' ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ ನಟಿಸುತ್ತಿದ್ದಾರೆ. ಕತ್ರಿನಾ ಕೈಫ್ ಕೊನೆಯ ಬಾರಿಗೆ 'ಮೆರ್ರಿ ಕ್ರಿಸ್‌ಮಸ್' ಚಿತ್ರದಲ್ಲಿ ವಿಜಯ್ ಸೇತುಪತಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಅದಾದ ಬಳಿಕ ಯಾವ ಸಿನಿಮಾವು ಮಾಡಲಿಲ್ಲ.