ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕನ್ನಡದಲ್ಲೂ ಬರಲಿದೆ ವಿಜಯ್ ಸೇತುಪತಿ - ರಾಜ್ ಬಿ. ಶೆಟ್ಟಿ ನಟನೆಯ ‘ಪಾಕೆಟ್ ನಾವೆಲ್’: ಜನವರಿ 14ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ

ʻಪಾಕೆಟ್‌ ನಾವೆಲ್‌ʼ ಸಿನಿಮಾದ ಮೂಲಕ ತಮಿಳಿನ ವಿಜಯ್ ಸೇತುಪತಿ ಹಾಗೂ ಕನ್ನಡದ ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ಒಂದಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರವು ಜನವರಿ 14ರಂದು ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ನಿರ್ದೇಶನದ ನಾಲ್ಕನೇ ಸಿನಿಮಾ ‘ಪಾಕೆಟ್ ನಾವೆಲ್’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬರುವ ಜನವರಿ 14ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ತಮಿಳಿನ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ, ಕನ್ನಡದ ಪ್ರತಿಭಾನ್ವಿತ ನಟ ರಾಜ್ ಬಿ. ಶೆಟ್ಟಿ ಹಾಗೂ ನಟಿ ಮಾಳವಿಕಾ ಮೋಹನನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

2019ರಲ್ಲಿ ತೆರೆಕಂಡು ಭಾರೀ ಮೆಚ್ಚುಗೆ ಗಳಿಸಿದ್ದ ‘ಸೂಪರ್ ಡಿಲಕ್ಸ್’ ಚಿತ್ರದ ಬಳಿಕ ವಿಜಯ್ ಸೇತುಪತಿ ಮತ್ತು ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಈ ಸಿನಿಮಾದ ಮೂಲಕ ಮತ್ತೊಮ್ಮೆ ಒಂದಾಗಿರುವುದು ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಉಳಿದಂತೆ, ನಟ ಕಿಶೋರ್ ಹಾಗೂ ದಿಲೀಪ್ ಸುಬ್ಬರಾಯನ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌

ಆರಂಭದಲ್ಲಿ ಈ ಸಿನಿಮಾ ಘೋಷಣೆಯಾದಾಗ ಕೇವಲ ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಚಿತ್ರತಂಡವು ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅದರಂತೆ ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ‘ಪಾಕೆಟ್ ನಾವೆಲ್’ ಏಕಕಾಲಕ್ಕೆ ತೆರೆಕಾಣಲಿದೆ. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿರುವುದು ರಾಜ್ ಬಿ. ಶೆಟ್ಟಿ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದ್ದು, ತಮ್ಮ ನೆಚ್ಚಿನ ನಟನನ್ನು ವಿಜಯ್ ಸೇತುಪತಿ ಜೊತೆ ತೆರೆಮೇಲೆ ಕಣ್ತುಂಬಿಕೊಳ್ಳಲು ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.

Kantara: Chapter -1: ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವಾ? ರಿಷಬ್‌ ಪತ್ನಿ ಪ್ರಗತಿ ಹೇಳಿದ್ದೇನು?

ಇಳಯರಾಜ ಜಾಗಕ್ಕೆ ಜಿವಿ ಎಂಟ್ರಿ

ಚಿತ್ರದ ಸಂಗೀತ ವಿಭಾಗದಲ್ಲೂ ಮಹತ್ವದ ಬದಲಾವಣೆಯಾಗಿದ್ದು, ಸಿನಿಮಾ ಘೋಷಣೆಯಾದ ಸಂದರ್ಭದಲ್ಲಿ ಮಾಂತ್ರಿಕ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಚಿತ್ರತಂಡವು ಖ್ಯಾತ ಸಂಗೀತ ನಿರ್ದೇಶಕ ಜಿ. ವಿ. ಪ್ರಕಾಶ್ ಕುಮಾರ್ ಅವರನ್ನು ಅಧಿಕೃತವಾಗಿ ತಂಡಕ್ಕೆ ಬರಮಾಡಿಕೊಂಡಿದೆ. ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರೊಂದಿಗೆ ಜಿ. ವಿ. ಪ್ರಕಾಶ್ ಕುಮಾರ್ ಕೆಲಸ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿರುವುದರಿಂದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಪೊಂಗಲ್‌ ಹಬ್ಬಕ್ಕೆ ಸಾಲು ಸಾಲು ಹಬ್ಬಗಳು

ಜನವರಿ 14ರಂದು ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ‘ಪಾಕೆಟ್ ನಾವೆಲ್’ ಚಿತ್ರವು ಅಧಿಕೃತವಾಗಿ ಪೊಂಗಲ್ ಮತ್ತು ಸಂಕ್ರಾಂತಿ ಹಬ್ಬದ ಬಾಕ್ಸ್ ಆಫೀಸ್ ರೇಸ್‌ಗೆ ಎಂಟ್ರಿ ಕೊಟ್ಟಿದೆ. ಇದೇ ದಿನದಂದು ನಟ ಅಜಿತ್ ಕುಮಾರ್ ಅವರ ರೇಸಿಂಗ್ ಸಾಕ್ಷ್ಯಚಿತ್ರ ‘ದಿ ಗ್ಲಾಡಿಯೇಟರ್ಸ್’, ನಿರ್ದೇಶಕ ಪಾ. ರಂಜಿತ್ ಅವರ ಮುಂದಿನ ಸಿನಿಮಾ ‘ವೆಟ್ಟುವಂ’ ಹಾಗೂ ವಿಜೆ ಸಿದ್ದು ಚೊಚ್ಚಲ ನಿರ್ದೇಶನದ ‘ದಯಂಗರಂ’ ಚಿತ್ರಗಳೂ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ಏರ್ಪಡಲಿದೆ.

ಇದರ ಜೊತೆಗೆ ಸುಂದರ್ ಸಿ ಮತ್ತು ವಿಶಾಲ್ ಕಾಂಬಿನೇಷನ್‌ನ ‘ಪುರುಷನ್’, ಶಿವಕಾರ್ತಿಕೇಯನ್ ಅವರ ‘ಸೇಯೋನ್’, ಕಮಲ್ ಹಾಸನ್ ನಟನೆಯ ‘ಇಂಡಿಯನ್ 3’, ಚಿಯಾನ್ ವಿಕ್ರಮ್ ಅವರ ‘ಪವರ್ ಹೌಸ್’ ಹಾಗೂ ಅರುಳ್‌ನಿಧಿ ಅವರ ‘ಡಿಮೊಂಟೆ ಕಾಲೋನಿ 3’ ಚಿತ್ರಗಳು ಕೂಡ ಇದೇ ಹಬ್ಬದ ಸೀಸನ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿರುವುದರಿಂದ ಸಿನಿಪ್ರೇಮಿಗಳಿಗೆ ಹಬ್ಬದೂಟ ಸಿಗಲಿದೆ.