ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಬಾಸ್’ ಸಿನಿಮಾವು ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿದೆ. ಆದರೆ ಈಗ ಕೊನೇ ಕ್ಷಣದಲ್ಲಿ ʻಬಾಸ್ʼ ಚಿತ್ರತಂಡಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ನಟ ದರ್ಶನ್ ಶ್ರೀನಿವಾಸ್ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರು ಚಿತ್ರದ ಪ್ರದರ್ಶನ ಮತ್ತು ಬಿಡುಗಡೆಗೆ ತುರ್ತು ತಡೆ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ (MFA No. 4257/2026) ಸಲ್ಲಿಸಿದ್ದಾರೆ.
ಮಧ್ಯಂತರ ತಡೆಯಾಜ್ಞೆ ತೆರವಾಗಿತ್ತು!
ಇತ್ತೀಚೆಗಷ್ಟೇ ಬೆಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ʻಬಾಸ್ʼ ಚಿತ್ರದ ಬಿಡುಗಡೆಗೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿತ್ತು. ಸಿವಿಲ್ ಕೋರ್ಟ್‌ನಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದ ಚಿತ್ರತಂಡ, ಜೂನ್ 19ರಂದು ಅದ್ಧೂರಿಯಾಗಿ ಚಿತ್ರವನ್ನು ಚಿತ್ರಮಂದಿರಗಳಿಗೆ ತರುವುದಾಗಿ ಅಧಿಕೃತವಾಗಿ ಘೋಷಿಸಿ, ಬಿಡುಗಡೆಯ ಪೂರ್ವಸಿದ್ಧತೆ ಹಾಗೂ ಅಡ್ವಾನ್ಸ್ ಬುಕ್ಕಿಂಗ್ ಪ್ರಕ್ರಿಯೆಗಳಲ್ಲೂ ತೊಡಗಿತ್ತು.
ಮಧ್ಯಂತರ ತಡೆಯಾಜ್ಞೆ ನೀಡಬೇಕು ದರ್ಶನ್ ದಂಪತಿ
ಆದರೆ, ಈಗ ಕೆಳ ನ್ಯಾಯಾಲಯದ (ಸಿವಿಲ್ ಕೋರ್ಟ್) ಆದೇಶವನ್ನು ಪ್ರಶ್ನಿಸಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದಲ್ಲಿನ ಕಥಾವಸ್ತು, ನೈಜ ಘಟನೆಗಳ ತಿರುಚುವಿಕೆ, ಪಾತ್ರಗಳ ನಿರೂಪಣೆ ಹಾಗೂ ತಮ್ಮ ವೈಯಕ್ತಿಕ ಜೀವನಕ್ಕೆ ಧಕ್ಕೆ ತರುವಂತಹ ವಿವಾದಿತ ಅಂಶಗಳನ್ನು ಅರ್ಜಿಯಲ್ಲಿ ಪ್ರಮುಖವಾಗಿ ಆಕ್ಷೇಪಿಸಲಾಗಿದೆ. ಚಿತ್ರ ಬಿಡುಗಡೆಯಾದರೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇರುವುದರಿಂದ, ತಕ್ಷಣವೇ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸಿನಿಮಾ ರಿಲೀಸ್‌ಗೆ ಮೂರು ದಿನ ಬಾಕಿ?
ʻಬಾಸ್ʼ ಚಿತ್ರದ ಬಿಡುಗಡೆಗೆ ಕೇವಲ 3 ದಿನಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಹಠಾತ್ ಬೆಳವಣಿಗೆಯು ಚಿತ್ರತಂಡದಲ್ಲಿ ತಲ್ಲಣ ಮೂಡಿಸಿದೆ. ಚಿತ್ರದ ಮೇಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ನಿರ್ಮಾಪಕರು ಹಾಗೂ ವಿತರಕರು ಹೈಕೋರ್ಟ್‌ನ ಮುಂದಿನ ಆದೇಶದತ್ತ ಕಣ್ಣಿಟ್ಟಿದ್ದಾರೆ. ಬುಧವಾರ (ಜೂನ್ 17) ಅಥವಾ ಗುರುವಾರ (ಜೂನ್ 18) ಹೈಕೋರ್ಟ್ ಈ ಅರ್ಜಿಯ ತುರ್ತು ವಿಚಾರಣೆ ನಡೆಸುವ ಸಾಧ್ಯತೆಯಿದ್ದು, ನ್ಯಾಯಾಲಯವು ಚಿತ್ರದ ಬಿಡುಗಡೆಗೆ ಸಂಪೂರ್ಣ ಬ್ರೇಕ್ ಹಾಕುತ್ತದೆಯೇ ಅಥವಾ ಕೆಲವು ದೃಶ್ಯಗಳ ಕತ್ತರಿಯೊಂದಿಗೆ ಪ್ರದರ್ಶನಕ್ಕೆ ಅನುಮತಿ ನೀಡುತ್ತದೆಯೇ ಎಂಬ ಕುತೂಹಲ ಮೂಡಿದೆ.