ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ, ನಟ ಜೈದ್ ಖಾನ್ ಅವರು ನಟ ಧನ್ವೀರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೈಲಿಗೆ ತೆರಳಿ ದರ್ಶನ್ ಅವರನ್ನು ಮುಖಾಮುಖಿ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೈದ್ ಖಾನ್, ದರ್ಶನ್ ರವಾನಿಸಿರುವ ಖಡಕ್ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡಿದ್ದಲ್ಲದೆ, ಧನ್ವೀರ್ ಮೇಲೆ ಗರಂ ಆದರು.
ಧನ್ವೀರ್ ವಿರುದ್ಧ ಖಂಡಿತವಾಗಿಯೂ ದೂರು ನೀಡುವುದಾಗಿ ದರ್ಶನ್ ಸರ್ ಹೇಳಿದ್ದಾರೆ ಎಂದು ತಿಳಿಸಿದ ಜೈದ್ ಖಾನ್, "ಯಾವುದೇ ಕಾರಣಕ್ಕೂ ಯಾರೂ ಪ್ರತಿಭಟನೆ ಮಾಡುವುದು ಬೇಡ, ಇಂಥ ಚಿಲ್ಲರೆ ವಿಷಯಗಳಿಗೆ ನನ್ನ ಅಭಿಮಾನಿಗಳು ರಸ್ತೆಗೆ ಇಳಿಯುವುದು ನನಗೆ ಇಷ್ಟವಿಲ್ಲ. ಅಭಿಮಾನಿಗಳು ನಮ್ಮ ಅನ್ನದಾತರು, ಅವರಿಗೆ ತೊಂದರೆಯಾಗಬಾರದು. ನಾನು ಯಾರಿಗೂ ದೂರು ನೀಡಿ ಅಂತಲೂ ಹೇಳಿಲ್ಲ" ಎಂದು ಹೇಳಿದ್ದಾರೆ. ಅಂದಹಾಗೆ, ಜೈದ್ ಬಗ್ಗೆ ಅವಾಚ್ಯ ಪದಬಳಕೆ ಮಾಡಿದ್ದಾರೆ ಎಂದು ಧನ್ವೀರ್ ಮೇಲೆ ದೂರು ನೀಡಲಾಗಿದೆ.
ವಿಜಯಲಕ್ಷ್ಮೀ ಅಕ್ಕ ಸರಿಯಾಗಿ ನಿದ್ದೆ ಕೂಡ ಮಾಡುತ್ತಿಲ್ಲ!
ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಪರವಾಗಿ ನಿಂತ ಜೈದ್ ಖಾನ್, ಧನ್ವೀರ್ ಅನಗತ್ಯವಾಗಿ ವಿಜಯಲಕ್ಷ್ಮೀ ಅವರ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. "ವಿಜಯಲಕ್ಷ್ಮೀ ಅಕ್ಕ ಎಷ್ಟು ನೋವು, ಸಂಕಟ ಅನುಭವಿಸುತ್ತಿದ್ದಾರೆ ಎಂಬುದು ನಮಗೆ ಹತ್ತಿರದಿಂದ ಗೊತ್ತು. ಕಳೆದ ಹಲವು ತಿಂಗಳುಗಳಿಂದ ಅವರಿಗೆ ನಿದ್ದೆಯೇ ಇಲ್ಲ. ಗಂಡ ಜೈಲಿನಲ್ಲಿ ಕಷ್ಟಪಡುತ್ತಿರುವಾಗ ಮನೆಯಲ್ಲಿ ಸಂಭ್ರಮಿಸುವುದು ಅಥವಾ ರುಚಿಯಾದ ಊಟ ಮಾಡುವುದು ಬೇಡವೆಂದು ಕೇವಲ ಅನ್ನ-ರಸಂ ತಿಂದು ದಿನ ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಒಬ್ಬ ಮಹಿಳೆಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ತಮ್ಮ ಕುಟುಂಬದ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವವರು, ವಿಜಯಲಕ್ಷ್ಮೀ ಅಕ್ಕ ಕೂಡ ಒಬ್ಬ ಮಹಿಳೆ ಎಂಬುದನ್ನು ಮರೆಯಬಾರದು" ಎಂದು ಧನ್ವೀರ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಯಾರು ಎಲ್ಲಿರಬೇಕೋ ಅಲ್ಲಿದ್ದಾರೆ
"ದರ್ಶನ್ ಸರ್ ಒಂದು ನಂಬಿಕೆ ಇಟ್ಟು ಧನ್ವೀರ್ಗೆ ಮನೆಯಲ್ಲಿ ಸ್ಥಾನ ಕೊಟ್ಟಿದ್ದೇ ತಪ್ಪಾಯ್ತಾ? ಇಷ್ಟು ದಿನ 'ಅಣ್ಣ ಅಣ್ಣ' ಎಂದು ಹೇಳಿಕೊಂಡು ಟಿಆರ್ಪಿ ಪಡೆದುಕೊಂಡಿದ್ದ ಧನ್ವೀರ್, ಈಗ ನಮ್ಮಂತಹವರ ಹೆಸರುಗಳನ್ನು ಎಳೆದು ತಂದು ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಕಾಲವೇ ಎಲ್ಲರ ಮುಖವಾಡವನ್ನು ಕಳಚುತ್ತದೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಯಾರು ಎಲ್ಲಿರಬೇಕೋ ಅಲ್ಲಿದ್ದಾರೆ. ನಾನು ಎಲ್ಲಿದ್ದೀನಿ, ಅವನು ಎಲ್ಲಿದ್ದಾನೆ" ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ದರ್ಶನ್ ಅಣ್ಣ & ವಿಜಿ ಅಕ್ಕನ ಬೆಂಬಲಕ್ಕೆ ನಾನಿದ್ದೇನೆ
ಕೊನೆಯದಾಗಿ, ತಾವು ಮೊದಲಿನಿಂದಲೂ ದರ್ಶನ್ ಅವರ ಕುಟುಂಬದ ಜೊತೆಗಿದ್ದು, ಮುಂದೆಯೂ ನೈತಿಕವಾಗಿ ಹಾಗೂ ಎಲ್ಲಾ ರೀತಿಯಲ್ಲೂ ಅವರ ಬೆನ್ನಿಗೆ ನಿಲ್ಲುವುದಾಗಿ ಜೈದ್ ಖಾನ್ ಸ್ಪಷ್ಟಪಡಿಸಿದರು. "ನಾನು ಮುಂಚೆಯಿಂದಲೂ ತೆರೆಮರೆಯಲ್ಲಿದ್ದು ಅವರಿಗೆ ಬೆಂಬಲವಾಗಿ ನಿಂತಿದ್ದೇನೆ. ಮುಂದೆಯೂ ದರ್ಶನ್ ಅಣ್ಣ ಮತ್ತು ವಿಜಿ ಅಕ್ಕನಿಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ಸದಾ ಸಿದ್ಧನಾಗಿರುತ್ತೇನೆ" ಎಂದು ಅವರು ತಿಳಿಸಿದರು.