ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

City Lights Movie: ʻದುನಿಯಾʼ ವಿಜಯ್‌ಗೆ ‌ʻಹ್ಯಾಟ್ರಿಕ್‌ ಡೈರೆಕ್ಟರ್ʼ ಪಟ್ಟ; ಹಿಟ್‌ ಸಿನಿಮಾ ಕೊಟ್ಟ ಅಪ್ಪನಿಗೆ ಥ್ಯಾಂಕ್ಸ್‌ ಹೇಳಿದ ಮಗಳು ಮೋನಿಷಾ!

City Lights Movie: ʻದುನಿಯಾʼ ವಿಜಯ್‌ ನಿರ್ದೇಶನದ ʻಸಿಟಿ ಲೈಟ್ಸ್ʼ‌ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ನಟಿಸಿದ್ದಾರೆ. ಈ ಗೆಲುವಿನಿಂದ ವಿಜಯ್‌ಗೆ ಹ್ಯಾಟ್ರಿಕ್ ನಿರ್ದೇಶಕನ ಪಟ್ಟ ಸಿಕ್ಕಿದೆ.

ನಟ, ನಿರ್ದೇಶಕ ‘ದುನಿಯಾ’ ವಿಜಯ್ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿನಯ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಪುತ್ರಿ ಮೋನಿಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ, ಬಿಡುಗಡೆಯಾದ ದಿನದಿಂದಲೂ ಉತ್ತಮ ವಿಮರ್ಶೆ ಪಡೆದುಕೊಂಡು ಯಶಸ್ವಿಯಾಗಿ ಮೂರನೇ ವಾರಕ್ಕೆ ಕಾಲಿಡುತ್ತಿದೆ.

ತಮ್ಮ ಚೊಚ್ಚಲ ಚಿತ್ರದಲ್ಲೇ ಮೋನಿಷಾ ನಟನೆಯ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದರೆ, ಮತ್ತೊಂದೆಡೆ ವಿನಯ್ ರಾಜ್‌ಕುಮಾರ್ ಕ್ಲಾಸ್ ಮಾತ್ರವಲ್ಲದೆ ಮಾಸ್ ಪಾತ್ರಗಳಿಗೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ನಿರ್ದೇಶಕರಾಗಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ದುನಿಯಾ ವಿಜಯ್ ಅವರಿಗೆ ‘ಹ್ಯಾಟ್ರಿಕ್ ಡೈರೆಕ್ಟರ್’ ಎಂಬ ಹಿರಿಮೆ ಸಂದಿದೆ.

ಅಪ್ಪನಿಗೆ ಧನ್ಯವಾದ ಹೇಳಿದ ಮಗಳು

ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸಕ್ಸಸ್ ಮೀಟ್‌ನಲ್ಲಿ ಪಾಲ್ಗೊಂಡ ಇಡೀ ಚಿತ್ರತಂಡ ತಮ್ಮ ಸಂಭ್ರಮ ಹಾಗೂ ಭಾವನೆಗಳನ್ನು ಹಂಚಿಕೊಂಡಿತು. ಸದಾ ಬೆಂಬಲವಾಗಿ ನಿಂತ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ನಟಿ ಮೋನಿಷಾ ಭಾವುಕರಾಗಿ ಮಾತನಾಡಿದರು. "ನನ್ನ ತಂದೆ ಎಂದಿಗೂ ಮುಖಸ್ತುತಿ ಮಾಡಿದವರಲ್ಲ; ನಾನು ಚೆನ್ನಾಗಿ ನಟಿಸಿದ್ದೇನೆ ಎಂದು ನೇರವಾಗಿ ಹೊಗಳಿದ್ದೇ ಇಲ್ಲ. ಆದರೆ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಸಕ್ಸಸ್‌ನ ಉತ್ತುಂಗದಲ್ಲಿದ್ದಾಗಲೂ ನನಗೋಸ್ಕರ ಕಥೆ ಮಾಡಿ ಈ ಚಿತ್ರವನ್ನು ನಿರ್ದೇಶಿಸಿದರು. ಈ ಅದ್ಭುತ ಅವಕಾಶಕ್ಕೆ ಥ್ಯಾಂಕ್ಯೂ ಅಪ್ಪ" ಎಂದು ವೇದಿಕೆಯಲ್ಲಿ ಕೃತಜ್ಞತೆ ಅರ್ಪಿಸಿದರು.

Citylights Movie Review: ಮೆಜೆಸ್ಟಿಕ್‌ ಒಳಗಿನ ಅಪರಿಚಿತ ಲೋಕದ ಸತ್ಯ ದರ್ಶನ ಮಾಡಿಸುವ ‌ʻದುನಿಯಾʼ ವಿಜಯ್

ಸಿನಿಮಾ ಗೆದ್ದ ಖುಷಿಯಲ್ಲಿ ವಿನಯ್

ಇನ್ನು ನಾಯಕ ನಟ ವಿನಯ್ ರಾಜ್‌ಕುಮಾರ್ ಮಾತನಾಡಿ, "ನನಗಿಂತಲೂ ಹೆಚ್ಚಾಗಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದ ನಿರ್ದೇಶಕ ವಿಜಯ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಅಭಿಮಾನಿಗಳು ಸದಾ ನನ್ನ ಮೇಲೆ ವಿಶ್ವಾಸ ಇಟ್ಟು ಪ್ರೋತ್ಸಾಹಿಸುತ್ತಿದ್ದರು, ಈಗ ಅವರ ಕಣ್ಣಿನಲ್ಲಿ ಈ ಗೆಲುವಿನ ಹೆಮ್ಮೆಯನ್ನು ನೋಡಿದಾಗ ನಿಜಕ್ಕೂ ಧನ್ಯತಾಭಾವ ಮೂಡುತ್ತಿದೆ. ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ ಪ್ರೇಕ್ಷಕರು ಪ್ರತಿಯೊಂದು ಪಾತ್ರವನ್ನೂ ಪ್ರೀತಿಸುತ್ತಿರುವುದು ಖುಷಿ ತಂದಿದೆ. ಇದು ಕೇವಲ ನಮ್ಮಿಬ್ಬರ ಗೆಲುವಲ್ಲ, ತೆರೆಯ ಹಿಂದೆ-ಮುಂದೆ ದುಡಿದ ಪ್ರತಿಯೊಬ್ಬ ತಂತ್ರಜ್ಞರ ಹಾಗೂ ಚಿತ್ರವನ್ನು ಕೈಹಿಡಿದ ಕನ್ನಡಿಗರ ಗೆಲುವು" ಎಂದು ಸಂತಸ ವ್ಯಕ್ತಪಡಿಸಿದರು.

ನನ್ನ ಮಗಳಿಗೆ ಕನ್ನಡಿಗರ ಪ್ರೀತಿ ಸಿಕ್ಕಿದೆ

ʻಸಿಟಿ ಲೈಟ್ಸ್‌ʼ ಗೆಲುವಿನಿಂದ ಮೂಕವಿಸ್ಮಿತರಾದ ನಿರ್ದೇಶಕ ʻದುನಿಯಾʼ ವಿಜಯ್ ಮಾತನಾಡಿ, ದೊಡ್ಮನೆ ಕುಟುಂಬಕ್ಕೆ ಹಾಗೂ ಪ್ರೇಕ್ಷಕ ಮಹಾಪ್ರಭುಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿದರು. "ನಾನು 'ದುನಿಯಾ' ಸಿನಿಮಾ ಮಾಡಿದಾಗ ನನ್ನ ಹಿನ್ನೆಲೆ ನೋಡದೆ ಕನ್ನಡಿಗರು ದೇವರಂತೆ ಬಂದು ಕೈಹಿಡಿದು ಬೆಳೆಸಿದರು. ಇಂದು ನನ್ನ ಮಗಳಿಗೂ ಅದೇ ಪ್ರೀತಿ, ಆಶೀರ್ವಾದವನ್ನು ಧಾರೆಯೆರೆದಿದ್ದಾರೆ. ದೊಡ್ಮನೆಯಿಂದ ವಿನಯ್ ಅವರನ್ನು ಕರೆದುಕೊಂಡು ಬಂದು ಸಿನಿಮಾ ಮಾಡುವಾಗ ಮನಸ್ಸಿನಲ್ಲಿ ಸ್ವಲ್ಪ ಭಯ, ಜವಾಬ್ದಾರಿ ಇತ್ತು. ಆದರೆ ಇಂದು ಎಲ್ಲಾ ನಾಯಕರ ಅಭಿಮಾನಿಗಳು ಒಗ್ಗಟ್ಟಾಗಿ ‘ಸಿಟಿ ಲೈಟ್ಸ್’ ಚಿತ್ರವನ್ನು ನೋಡಿ ವಿನಯ್ ಹಾಗೂ ಮೋನಿಷಾಗೆ ಹಾರೈಸಿದ್ದಾರೆ. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ಶಿವರಾಜ್‌ಕುಮಾರ್, ಗೀತಕ್ಕ ಹಾಗೂ ಇಡೀ ದೊಡ್ಮನೆ ಕುಟುಂಬಕ್ಕೆ ನನ್ನ ನಮನಗಳು" ಎಂದು ಹೇಳಿದರು.

ರಾಜ್ಯಾದ್ಯಂತ ವಿಜಯಯಾತ್ರೆ

ಪ್ರೇಕ್ಷಕರ ಪ್ರೀತಿಯನ್ನು ಕಣ್ತುಂಬಿಕೊಳ್ಳಲು ಹಾಗೂ ನೇರವಾಗಿ ಧನ್ಯವಾದ ತಿಳಿಸಲು ಚಿತ್ರತಂಡ ಇದೀಗ ರಾಜ್ಯಾದ್ಯಂತ ಭರ್ಜರಿ ವಿಜಯ ಯಾತ್ರೆಗೆ ಸಜ್ಜಾಗಿದೆ. ಸೆಪ್ಟೆಂಬರ್ 30ರಿಂದ ವಿಜಯ ಯಾತ್ರೆ ಆರಂಭವಾಗಲಿದ್ದು, ತಂಡವು ರಾಜ್ಯದ ಪ್ರಮುಖ ಜಿಲ್ಲೆಗಳ ಥಿಯೇಟರ್‌ಗಳಿಗೆ ಭೇಟಿ ನೀಡಿ ಅಭಿಮಾನಿಗಳನ್ನು ಮುಖಾಮುಖಿಯಾಗಿ ಭೇಟಿಯಾಗಿ ಸಂಭ್ರಮಿಸಲಿದೆ.