ನಿರ್ದೇಶಕ ಕೆ. ಎಂ. ಚೈತನ್ಯ ನಿರ್ದೇಶನದ, ʻಮರಿ ಟೈಗರ್ʼ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ ʻಬಲರಾಮನ ದಿನಗಳುʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಹಿಂದೆ ಎರಡು ಹಾಡುಗಳಿಂದ ಗಮನ ಸೆಳೆದಿದ್ದ ಈ ಚಿತ್ರವು, ಈಗ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದೆ. ಈ ಟೀಸರ್‌ನಲ್ಲಿ ವಿನೋದ್ ಪ್ರಭಾಕರ್ ಅವರ ಲುಕ್ ಎಲ್ಲರ ಗಮನಸೆಳೆದಿದೆ.
ರೆಟ್ರೋ ಕಾಲದ ಕಥೆಯನಲ್ಲಿ ಬಲರಾಮನ ದಿನಗಳು
"ಒಂದು ಸಿನಿಮಾದ ಮೂಲಕ ಪಡೆಯುವುದು ಅನುಭವವೇ ಅಲ್ಲ. ನನ್ನ ತಂದೆ ನೂರಾರು ಸಿನಿಮಾಗಳಲ್ಲಿ ನಟಿಸಿದರು. ನಿರ್ಮಿಸಿ, ನಿರ್ದೇಶನವನ್ನೂ ಮಾಡಿದವರು. ಆದರು ಕೂಡ ಸಿನಿಮಾ ಏನು ಎಂದು ಅರ್ಥವಾಗಿಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಈ ಚಿತ್ರದಲ್ಲಿ ಸಿಕ್ಕ ಅನುಭವವೇ ಅಂತಿಮ ಎಂದು ಹೇಳಲಾಗದು. ನಾವೆಲ್ಲರೂ ಸಿನಿಮಾ ವಿದ್ಯಾರ್ಥಿಗಳು. ಆದರೂ ಮಾದೇವ ಚಿತ್ರಕ್ಕೆ ಸಿಕ್ಕ ಯಶಸ್ಸು ಕಂಡ ಬಳಿಕ ಈ ಚಿತ್ರ ಅದರ ಎರಡು ಪಟ್ಟು ಗೆಲುವು ಕಾಣುವ ನಿರೀಕ್ಷೆ ಮೂಡಿಸಿದೆ" ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ಟೀಸರ್ ಹೇಗಿದೆ?
ಇದು 80ರ ದಶಕದ ಕಥೆಯನ್ನು ಹೇಳುವ ಚಿತ್ರವಾಗಿದ್ದು, ಟೀಸರ್ ಗಮನಿಸಿದಾಗ ಆ ದಿನಗಳು ಸಿನಿಮಾದ ಕಥೆಯೊಂದಿಗೆ ಸಂಬಂಧ ಇರುವುದು ಗೋಚರಿಸುತ್ತದೆ. ಈ ಸಿನಿಮಾವನ್ನು ಪದ್ಮಾವತಿ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಪದ್ಮಾವತಿ, "ನನ್ನ ಪುತ್ರ ಶ್ರೇಯಸ್ ಮತ್ತು ಆತನಿಗೆ ಸಹಕಾರಿಯಾಗಿ ನಿಂತ ಸೊಸೆಯ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ವಿನೋದ್ ಪ್ರಭಾಕರ್ ಮತ್ತು ನಿರ್ದೇಶಕ ಕೆ. ಎಂ. ಚೈತನ್ಯ ಈ ಸಿನಿಮಾಕ್ಕೆ ಶಕ್ತಿಯಾಗಿ ನಿಂತಿದ್ದಾರೆ" ಎನ್ನುವ ಪದ್ಮಾವತಿ, ನಿರ್ಮಾಣದ ಜತೆಗೆ ಈ ಚಿತ್ರದಲ್ಲೊಂದು ಪಾತ್ರವನ್ನು ಕೂಡ ಮಾಡಿರುವುದು ವಿಶೇಷ.
ಮೋನಪ್ಪ ರೈ ಎಂಬ ಪಾತ್ರವನ್ನು ನಟ ರಮೇಶ್ ಇಂದಿರಾ ನಿರ್ವಹಿಸಿದ್ದಾರೆ. ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ನಟ ವಿನಯ್ ಗೌಡ ಈ ಚಿತ್ರದಲ್ಲಿ 'ಕತ್ತಿ' ಹೆಸರಿನ ರೌಡಿಯ ಪಾತ್ರ ಮಾಡಿದರೆ, ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ರಜತ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಸಾಹಸ ಸನ್ನಿವೇಶದಲ್ಲಿ ನಟ ಡ್ರ್ಯಾಗನ್ ಮಂಜು ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ನಟಿಸಿದ್ದಾರೆ.
ಈ ಚಿತ್ರದ ಹಾಡುಗಳಿಗೆ ಸಂತೋಷ್ ನಾರಾಯಣನ್ ಅವರು ಸಂಗೀತ ನೀಡಿದ್ದು, ಕವಿರಾಜ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ಹಾಡುಗಳನ್ನು ಬರೆದಿದ್ದಾರೆ. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆದಿತ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ.