ವಿನೋದ್ ಪ್ರಭಾಕರ್ ನಟನೆಯ 'ಬಲರಾಮನ ದಿನಗಳು' ಚಿತ್ರವು ಭಾರಿ ಸದ್ದು ಮಾಡುತ್ತಿದೆ. ಕೆ ಎಂ ಚೈತನ್ಯ ನಿರ್ದೇಶನದ ಈ ಸಿನಿಮಾವು ಘೋಷಣೆಯಾದ ದಿನದಿಂದಲೂ ನಿರೀಕ್ಷೆ ಮೂಡಿಸಿದೆ. 2026ರ ಸಾಲಿನ ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ 'ಬಲರಾಮನ ದಿನಗಳು' ಸೇರ್ಪಡೆಗೊಂಡಿದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಅಂದಹಾಗೆ, ಈ ಸಿನಿಮಾಗೆ ಸಂಗೀತ ನೀಡುತ್ತಿರುವುದು ಸಂತೋಷ್ ನಾರಾಯಣನ್.
ಕಬಾಲಿ ಮ್ಯೂಸಿಕ್ ಡೈರೆಕ್ಟರ್ ಮೇಲೆ ನಿರೀಕ್ಷೆ
ಕಬಾಲಿ, ಕಾಲಾ, ಕಲ್ಕಿ, ದಸರಾ, ಚಿತ್ತ, ಮಹಾನ್ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿ ಫೇಮಸ್ ಆಗಿರುವ ಮತ್ತು ತಮ್ಮದೇ ಒಂದು ಅಭಿಮಾನಿ ವರ್ಗವನ್ನು ಹೊಂದಿರುವ ಸಂತೋಷ್ ನಾರಾಯಣನ್ ಈಗ ಬಲರಾಮನ ದಿನಗಳು ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. ಇದು ಇವರ ಮೊದಲ ಪೂರ್ಣಪ್ರಮಾಣದ ಕನ್ನಡ ಸಿನಿಮಾವಾಗಿದೆ. ರಜನಿಕಾಂತ್ ಸೇರಿ ತಮಿಳಿನ ಖ್ಯಾತ ನಟರಿಗೆ ದೊಡ್ಡ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಸಂತೋಷ್ ನಾರಾಯಣನ್, 50 ಚಿತ್ರಗಳ ನಂತರ 51ನೇ ಚಿತ್ರಕ್ಕೆ ಕನ್ನಡಕ್ಕೆ ಬಂದಿದ್ಧಾರೆ.
ಸಂತೋಷ್ ನಾರಾಯಣನ್ ಏನ್ ಹೇಳಿದ್ದರು?
ಈ ಹಿಂದೆ ಬಲರಾಮನ ದಿನಗಳು ಸಿನಿಮಾ ತಂಡವು ಸಂತೋಷ್ ನಾರಾಯಣನ್ ಅವರನ್ನು ಕನ್ನಡಿಗರಿಗೆ ಪರಿಚಯಿಸುವ ಸಲುವಾಗಿ ಒಂದು ಕಾರ್ಯಕ್ರಮ ಮಾಡಿತ್ತು. ಆ ವೇಳೆ ಮಾತನಾಡಿದ್ದ ಅವರು, "ನನ್ನ ತಾಯಿಗೆ ಕನ್ನಡ ಮಾತನಾಡಲು ಬರುತ್ತದೆ. ನನಗೂ ಕೂಡ ಸ್ವಲ್ಪ ಕನ್ನಡ ಮಾತನಾಡಲು ಅಮ್ಮ ಹೇಳಿಕೊಟ್ಟಿದ್ದಾರೆ. ನಾನು ಆಗಾಗ ಬೆಂಗಳೂರಿಗೆ ಬರುತ್ತಿರುತ್ತೇನೆ. 'ಬಲರಾಮನ ದಿನಗಳು' ನನ್ನ 51ನೇ ಚಿತ್ರ ಹಾಗೂ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರ. ಈ ಹಿಂದೆ ನಾನು ರಘು ದೀಕ್ಷಿತ್ ಅವರ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಸೇರಿದಂತೆ ಒಂದಷ್ಟು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ.
'ಬಲರಾಮನ ದಿನಗಳು' ಚಿತ್ರದ ಮೊದಲ ಹಾಡು
ಅಂದಹಾಗೆ, ʻಬಲರಾಮನ ದಿನಗಳುʼ ಸಿನಿಮಾದ ಸಂಗೀತ ಸಂಯೋಜನೆ ಮುಗಿಸಿರುವ ಸಂತೋಷ್ ನಾರಾಯಣನ್ ಅವರು ಡಿಸೆಂಬರ್‌ನಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬಲರಾಮನ ದಿನಗಳು ಚಿತ್ರತಂಡ ಡಿಸೆಂಬರ್‌ನಲ್ಲಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದೆ.
ಪದ್ಮಾವತಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಬಲರಾಮನ ದಿನಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 80ರ ದಶಕದ ಕಥೆ ಇರುವ ಈ ಚಿತ್ರಕ್ಕೆ ವೇಣು ಛಾಯಾಗ್ರಹಣವಿದ್ದು, ವಿನೋದ್ ಪ್ರಭಾಕರ್ ಜೊತೆಗೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ʻಆ ದಿನಗಳುʼ ಚಿತ್ರದ ಪಾತ್ರಗಳು ಇಲ್ಲೂ ಮುಂದುವರೆದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವರು ಈ ಚಿತ್ರದಲ್ಲಿದೆ ಕಾಣಿಸಿಕೊಂಡಿದ್ದಾರೆ. 2026ರ ಫೆಬ್ರವರಿಯಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.