ಕನ್ನಡ ಚಿತ್ರರಂಗದಲ್ಲಿ ಸದಾ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುವ ನಟ ಕೋಮಲ್ ಕುಮಾರ್ ಹಾಗೂ ನಟಿ ಸೋನಲ್ ಮೊಂಥೆರೋ ಕಾಂಬಿನೇಷನ್‌ನ `ರೋಲೆಕ್ಸ್' ಚಿತ್ರಕ್ಕೆ ಈಗ ಮತ್ತೊಂದು ಬಿಗ್ ಸ್ಟಾರ್ ಬಲ ಸಿಕ್ಕಿದೆ. ಹೌದು, ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ, 'ಮರಿ ಟೈಗರ್' ವಿನೋದ್ ಪ್ರಭಾಕರ್ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಅವರು ಮಾಡಿರದಂತಹ ವಿಭಿನ್ನ ಶೇಡ್‌ನ ಪಾತ್ರ ಇದಾಗಿದ್ದು, ಕೋಮಲ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪ್ರತಿಷ್ಠಿತ ಲಾಂಛನದಲ್ಲಿ ಅದ್ದೂರಿ ನಿರ್ಮಾಣ
'ಮಧು ಫಿಲಂ ಸರ್ಕ್ಯೂಟ್ಸ್' ಸಂಸ್ಥೆಯ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ಅವರು ಈ ಚಿತ್ರವನ್ನು ಕನ್ನಡದಲ್ಲಿ ಅತ್ಯಂತ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ನಿರ್ಮಾಪಕ ಮಧು ಮೋಹನಕೃಷ್ಣ ಅವರು ಪ್ರಸ್ತುತ ಆಂಧ್ರ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ʻಬಿಲ್ ಗೇಟ್ಸ್ʼ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಶ್ರೀನಿವಾಸ್ ಮಂಡ್ಯ ಅವರು ʻರೋಲೆಕ್ಸ್ʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕಾಗಿ ವಿನೋದ್ ಪ್ರಭಾಕರ್ ಅವರಿಗೆ ಚಿತ್ರತಂಡ ಧನ್ಯವಾದಗಳನ್ನು ಅರ್ಪಿಸಿದೆ.
ವಿಭಿನ್ನ ಗೆಟಪ್‌ನಲ್ಲಿ ಕೋಮಲ್
ಭರಪೂರ ಕಾಮಿಡಿಯೊಂದಿಗೆ ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕೋಮಲ್ ಕುಮಾರ್ ತಮ್ಮ ಎಂದಿನ ಶೈಲಿಗಿಂತ ತೀರಾ ಭಿನ್ನವಾದ, ವಿಭಿನ್ನ ಗೆಟಪ್ ಹಾಗೂ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಸೋನಲ್ ಮೊಂಥೆರೋ ನಾಯಕಿಯಾಗಿದ್ದು, ಇವರೊಂದಿಗೆ ಅಚ್ಯುತಕುಮಾರ್, ನವೀನ್ ಪಡೀಲ್, ಅರುಣಾ ಬಾಲರಾಜ್ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ
ʻರೋಲೆಕ್ಸ್ʼ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡುಗಳಿಗೆ ಡಾ. ವಿ. ನಾಗೇಂದ್ರಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಯೋಗಾನಂದ್ ಸಾಹಸ ನಿರ್ದೇಶನ ಹಾಗೂ ಕಲೈ-ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದೆ. ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.