ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಿವರಾತ್ರಿ ಹಬ್ಬದ ಪ್ರಯುಕ್ತ 'ನಾಗಬಂಧಂ' ಟೀಸರ್ ರಿಲೀಸ್; ಟಾಲಿವುಡ್‌ ನಟ ಮಹೇಶ್‌ ಬಾಬು ಹೇಳಿದ್ದೇನು?

Nagabandham Movie Teaser Released: ಮಹಾ ಶಿವರಾತ್ರಿ ಪ್ರಯುಕ್ತ ನಾಗಬಂಧಂ ಸಿನಿಮಾ ಟೀಸರ್‌ ಬಿಡುಗಡೆಯಾಗಿದ್ದು, ಟಾಲಿವುಡ್ ನಟ ಮಹೇಶ್ ಬಾಬು ಈ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ವಿರಾಟ್ ಕರ್ಣ ನಾಯಕನಾಗಿ ನಟಿಸಿದ್ದು, ನಭಾ ನಟೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ನಾಮಾ ನಿರ್ದೇಶನದ ಈ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.

ಘೋಷಣೆ ಆದಾಗಿನಿಂದಲೂ ಭಾರೀ ನಿರೀಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ʻನಾಗಬಂಧಂʼ. ಸದ್ಯ ಈ ಚಿತ್ರದ ಟೀಸರ್ ಅನ್ನು ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು ಅನಾವರಣಗೊಳಿಸಿದ್ದಾರೆ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ಟೀಸರ್, ಹೊಸ ಸಂಚಲನ ಮೂಡಿಸಿದ್ದು, ಪ್ರೇಕ್ಷಕರನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ಯುವ ಭರವಸೆ ನೀಡಿದೆ.

ರಿಲೀಸ್‌ ಮಾಡಿದ ಮಹೇಶ್‌ ಬಾಬು ಹೇಳಿದ್ದೇನು?

ನಾಗಬಂಧಂ ಚಿತ್ರದ ಟೀಸರ್‌ ರಿಲೀಸ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಟ ಮಹೇಶ್ ಬಾಬು‌, "ಈ ನಾಗಬಂಧಂ ಪ್ರಪಂಚವು ಎಲ್ಲಾ ರೀತಿಯಲ್ಲಿಯೂ ಸಂಪೂರ್ಣವಾಗಿ ಆಕರ್ಷಕವಾಗಿದೆ. ಶೀಘ್ರದಲ್ಲೇ ಇದನ್ನು ಚಿತ್ರಮಂದಿರದಲ್ಲಿ ನೋಡಿ ಅನುಭವಿಸಲು ಎದುರು ನೋಡುತ್ತಿದ್ದೇನೆ.." ಎಂದು ಹೇಳಿದ್ದಾರೆ. ಬಿಗ್‌ ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಅಭಿಷೇಕ್ ನಾಮಾ ಅವರು ನಿರ್ದೇಶನ ಮಾಡಿದ್ದಾರೆ.

ಕರೆಂಟ್‌ ಬ್ಲ್ಯೂ ಸ್ಕರ್ಟ್ ಸೆಟ್‌ನಲ್ಲಿ ಮಿಂಚಿದ ನಟಿ ನಭಾ ನಟೇಶ್‌

‌ಹೇಗಿದೆ ಈ ಟೀಸರ್?

ಹಿಮಾಲಯದ ಹಿಮಚ್ಛಾದಿತ ಪರ್ವತಗಳ ಹಿನ್ನೆಲೆಯಲ್ಲಿ ಟೀಸರ್ ಆರಂಭವಾಗುತ್ತದೆ. ಕಾಲಕ್ಕಿಂತಲೂ ಹಳೆಯದಾದ ಮತ್ತು ಗುಪ್ತವಾಗಿರುವ ರಹಸ್ಯವೊಂದರ ಕಾವಲುಗಾರನ ಸುತ್ತ ಇದು ಸಾಗುತ್ತದೆ. ಅಬ್ದಾಲಿ ನೇತೃತ್ವದ ಐತಿಹಾಸಿಕ ಅಫ್ಘಾನ್ ಆಕ್ರಮಣದಿಂದ ಪ್ರೇರಿತವಾದ ಈ ಕಥೆಯು ಪುರಾಣ, ಇತಿಹಾಸ ಮತ್ತು ಆಧ್ಯಾತ್ಮಿಕ ಯುದ್ಧವನ್ನು ಸಮರ್ಥವಾಗಿ ಮಿಳಿತಗೊಳಿಸಿದೆ.

ಕಥೆಯ ಕೇಂದ್ರಬಿಂದು 'ನಾಗಬಂಧಂ ದೇವಾಲಯವಾಗಿದ್ದು, ದೈವಿಕ ಶಕ್ತಿಗಳಿಂದ ರಕ್ಷಿಸಲ್ಪಟ್ಟಿರುವ ಈ ಗುಪ್ತ ದೇವಾಲಯವು ಬ್ರಹ್ಮಾಂಡದ ಪ್ರಚಂಡ ಶಕ್ತಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಈ ಶಕ್ತಿಯು ಕೆಟ್ಟವರ ಕೈ ಸೇರಿದರೆ ಸಂಭವಿಸಬಹುದಾದ ವಿನಾಶವನ್ನು ತಡೆಯಲು ವಿಧಿಯು ಒಬ್ಬ ಯೋಧನನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದು ಚಿತ್ರದ ಕಥೆ. ಅದರ ಸುಳಿವನ್ನು ಟೀಸರ್‌ನಲ್ಲಿ ನೀಡಲಾಗಿದೆ.

ಮಹೇಶ್‌ ಬಾಬು ಹಂಚಿಕೊಂಡ ಟ್ವೀಟ್‌



Star Fashion 2025: ಅನಾರ್ಕಲಿ ಸಲ್ವಾರ್‌ ಸೂಟ್‌ನಲ್ಲಿ ಕಾಣಿಸಿಕೊಂಡ ನಭಾ ನಟೇಶ್‌

ಟೀಸರ್‌ನಲ್ಲಿ ಬರುವ ಈ ಸಾಲುಗಳು ಚಿತ್ರದ ಆತ್ಮವನ್ನು ಬಿಂಬಿಸುತ್ತವೆ. ಭಕ್ತಿ, ಯುದ್ಧ, ಧರ್ಮ ಮತ್ತು ವಿನಾಶದ ನಡುವಿನ ಹೋರಾಟವನ್ನು ಈ ಟೀಸರ್‌ ಧ್ವನಿಸುತ್ತದೆ. ನಿರ್ದೇಶಕ ಅಭಿಷೇಕ್ ನಾಮಾ ಅವರು ಕೇವಲ ದೃಶ್ಯಗಳ ಮೂಲಕವೇ ಕಥೆಯನ್ನು ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲದಿದ್ದರೂ, ಟೀಸರ್ ನೋಡುಗರನ್ನು ಆಕರ್ಷಿಸಿದೆ.

ಈ ಚಿತ್ರದಲ್ಲಿ ಹೀರೋ ಆಗಿ ವಿರಾಟ್ ಕರ್ಣ ಅವರು ಪಾತ್ರಕ್ಕಾಗಿ ಮಾಡಿಕೊಂಡಿರುವ ಶಾರೀರಿಕ ಬದಲಾವಣೆ ಬೆರಗುಗೊಳಿಸುವಂತಿದೆ. ವಿಶೇಷವಾಗಿ ಮೊಸಳೆಯ ಜೊತೆಗಿನ ಹೋರಾಟ ಮತ್ತು ಭಗವಾನ್ ಶಿವನ ಅವತಾರದಲ್ಲಿ ಅವರನ್ನು ನೋಡುವುದೇ ಈ ಟೀಸರ್‌ನ ಹೈಲೈಟ್.

ಭಾರಿ ನಿರೀಕ್ಷೆಯೊಂದಿಗೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಕಿಶೋರ್ ಅನ್ನಪುರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ಮಟ್ಟದಲ್ಲಿ ನಿರ್ಮಿಸಿದ್ದಾರೆ. ವಿಶ್ವದರ್ಜೆಯ ತಾಂತ್ರಿಕತೆ ಮತ್ತು ಅದ್ಧೂರಿ ಬಜೆಟ್‌ನೊಂದಿಗೆ 'ನಾಗಬಂಧಂ' ಸಿನಿಮಾ ಮೂಡಿಬಂದಿದೆಯಂತೆ. ಆಧ್ಯಾತ್ಮಿಕತೆಯ ಆಳ ಮತ್ತು ದೃಶ್ಯ ವೈಭವದ ಸಂಗಮವಾಗಿ ಪ್ರತಿ ಫ್ರೇಮ್ ಕೂಡ ಪ್ರೇಕ್ಷಕರ ಕಣ್ಮನ ಸೆಳೆಯುತ್ತಿದೆ.

ಸಿನಿಮಾಟೋಗ್ರಫಿಯನ್ನು ಸೌಂದರ್ ರಾಜನ್ ಎಸ್ ಮಾಡಿದ್ದಾರೆ. ಜುನೈದ್ ಕುಮಾರ್ ಅವರ ಹಿನ್ನೆಲೆ ಸಂಗೀತವು ರೋಮಾಂಚನವನ್ನು ಉಂಟುಮಾಡುತ್ತದೆ. ಅಶೋಕ್ ಕುಮಾರ್ ಕಲಾ ನಿರ್ದೇಶನ ಮತ್ತು ಅತ್ಯುನ್ನತ ವಿಎಫ್‌ಎಕ್ಸ್ ಈ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿವೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಅಭಿಷೇಕ್ ನಾಮಾ ಅವರದ್ದು. ಅಬೆ ಮತ್ತು ಜುನೈದ್ ಕುಮಾರ್ ಸಂಗೀತ ನೀಡಿದ್ದಾರೆ.

ಈ ಚಿತ್ರಕ್ಕೆ ನಭಾ ನಾಯಕಿ

ಸ್ಯಾಂಡಲ್‌ವುಡ್‌ ನಟಿ ನಭಾ ನಟೇಶ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ಮೆನನ್ ಕೂಡ ಚಿತ್ರದ ಮತ್ತೋರ್ವ ನಾಯಕಿ. ಮಹೇಶ್ ಮಂಜ್ರೇಕರ್, ಜಗಪತಿ ಬಾಬು, ರಿಷಬ್ ಸಾಹ್ನಿ, ಗರುಡ ರಾಮ್, ಮುರಳಿ ಶರ್ಮ, ಅವಿನಾಶ್ ಮತ್ತು ಅನಸೂಯ ಭಾರದ್ವಾಜ್ ‌ಮುಂತಾದ ಅನುಭವಿ ಕಲಾವಿದರು ಈ ಚಿತ್ರದಲ್ಲಿದ್ದಾರೆ.