ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಅದ್ದೂರಿ ಮದುವೆಗೆ ಆಗಲೇ ಸಕಲ ತಯಾರಿಗಳು ನಡೆದಿವೆ. ರಾಜಸ್ಥಾನದ ಉದಯಪುರದಲ್ಲಿ ಐಷಾರಾಮಿ ಹೋಟೆಲ್‌ವೊಂದರಲ್ಲಿ ಗುರುವಾರ (ಫೆ.26) ಬೆಳಗ್ಗೆ 8ರ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ವಿರೋಶ್ ಅಭಿಮಾನಿಗಳು ಆ ಗಳಿಗೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ವಿರೋಶ್ ಕಲ್ಯಾಣದ ಬಗ್ಗೆ ಇನ್ನಷ್ಟು ಅಪ್ಡೇಟ್‌ಗಳು ಸಿಗುತ್ತಿವೆ.
ಹೈದರಾಬಾದ್‌ನಲ್ಲಿ ಆರತಕ್ಷತೆ
ಫೆ.26ರಂದು ಉದಯಪುರದಲ್ಲಿ ಮದುವೆ ನಡೆದರೆ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಉದಯಪುರದಲ್ಲಿ ನಡೆಯುವ ಮದುವೆಗೆ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. 100 ಜನ ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಆದರೆ ಹೈದರಾಬಾದ್‌ನಲ್ಲಿ ಆಯೋಜಿಸಿರುವ ಆರತಕ್ಷತೆಗೆ ಭಾರತದ ವಿವಿಧ ಭಾಷೆಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಟಾಲಿವುಡ್‌ನ ಬಹುತೇಕರು ಅಂದು ಹಾಜರಿ ಹಾಕಲಿದ್ದಾರೆ.
Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್ ದೇವರಕೊಂಡ ಜೋಡಿ!
ಹೈದರಾಬಾದ್‌ನಲ್ಲಿ ನಡೆಯುವ ಮದುವೆ ಆರತಕ್ಷತೆ ಅತ್ಯಂತ ಸಖತ್ ಗ್ರ್ಯಾಂಡ್ ಆಗಿ ಇರಲಿದೆ ಎಂಬ ಟಾಕ್ ಇದೆ. ಇನ್ನು, ಈ ಮದುವೆಯು ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ನಡೆಯಲಿದೆ. ಹಾಗಾದರೆ, ಕೊಡಗಿನಲ್ಲಿ ಈ ಮದುವೆಯ ಸಂಭ್ರಮ ಇರುವುದಿಲ್ಲವೇ ಎಂಬ ಪ್ರಶ್ನೆ ಕೆಲವರದ್ದು. ಅದಕ್ಕೂ ಇಲ್ಲಿದೆ ಉತ್ತರ.
ವಿರಾಜಪೇಟೆಯಲ್ಲಿ ಮತ್ತೊಂದು ಆರತಕ್ಷತೆ
ಹೌದು, ರಶ್ಮಿಕಾ ಅವರು ಕೊಡಗು ಜಿಲ್ಲೆ ವಿರಾಜಪೇಟೆಯ ಕದಲೂರು ಗ್ರಾಮದವರು. ರಶ್ಮಿಕಾ ಕುಟುಂಬಕ್ಕೆ ವಿರಾಜಪೇಟೆಯ ಸುತ್ತ-ಮುತ್ತ ಸಾಕಷ್ಟು ಸಂಬಂಧಿಕರಿದ್ದಾರೆ. ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಆ ಭಾಗದ ಪ್ರಭಾವಿ ಉದ್ಯಮಿಯು ಹೌದು. ಅಲ್ಲದೆ, ವಿರಾಜಪೇಟೆಯಲ್ಲಿ ಅವರ ಒಡೆತನದ ಐಷಾರಾಮಿ ಕಲ್ಯಾಣ ಮಂಟಪವಿದೆ. ಹಾಗಾಗಿ, ಇದೇ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ರಶ್ಮಿಕಾ ಮತ್ತು ವಿಜಯ್ ಅವರಿಗೆ ಮತ್ತೊಂದು ಆರತಕ್ಷತೆಯನ್ನು ಮಾಡುವ ಪ್ಲ್ಯಾನ್ ಇದೆಯಂತೆ.
ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ, ಅಂದು ಸಂಬಂಧಿಕರು ಮತ್ತು ಕೊಡಗು ಭಾಗದ ಅವರ ಗೆಳೆಯರು, ಹಿತೈಷಿಗಳಿಗಾಗಿ ಎಂದೇ ಈ ಆರತಕ್ಷತೆ ಅಥವಾ ಔತಣಕೂಟವನ್ನು ಆಯೋಜಿಸಲು ಮದನ್ ಮಂದಣ್ಣ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.