ಬೆಂಗಳೂರು: ಸ್ಯಾಂಡಲ್‌ವುಡ್‌ನ ನಂದ ಕಿಶೋರ್ ನಿರ್ದೇಶನದ, ಮೋಹನ್‌ಲಾಲ್ ನಟನೆಯ 'ವೃಷಭ' (Vrusshabha) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ತೆಲುಗು ಹಾಗೂ ಮಲಯಾಳಂನಲ್ಲಿ ಒಂದೆ ಸಮಯಕ್ಕೆ 'ವೃಷಭ' ಸಿನಿಮಾ ನಿರ್ಮಾಣವಾಗಿದ್ದು ಇನ್ನುಳಿದ ಭಾಷೆಗಳಿಗೆ ಡಬ್ ಆಗಲಿದೆ. ವಿಶೇಷ ಎಂದರೆ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಕೂಡ ನಟಿಸಿದ್ದು ಮೋಹನ್‌ಲಾಲ್ ಮಗನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಖ್ಯಾತ ನಟನೊಬ್ಬರು ತನಗೆ ಈ ಚಿತ್ರದಲ್ಲಿ ಸಂಭಾವನೆ ಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು ನಟ ರಾಘವೇಂದ್ರ ಎಸ್. ಹೊಂಡದಕೇರಿ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅವರು ಇದೀಗ ಚಿತ್ರತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನಗೆ ಸಂಭಾವನೆ ಕೊಡದೆ ಮೋಸ ಮಾಡಲಾಗಿದೆ ಎಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರಾಘವೇಂದ್ರ ಈ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ʼʼನಾನು ಚಿತ್ರದಲ್ಲಿ ನಟಿಸಲು ಬಹಳ ಶ್ರಮ ಪಟ್ಟಿದ್ದೇನೆ. ಐದಾರು ಗಂಟೆ ಮೇಕಪ್ ಹಾಕಿಕೊಳ್ಳಬೇಕಿತ್ತು. ಆದರೆ ಕೊನೆಗೆ ಸಂಭಾವನೆ ಕೊಡದೇ ತನಗೆ ಮೋಸ ಮಾಡಿದ್ದಾರೆʼʼ ಎಂದು ವಿಡಿಯೊದಲ್ಲಿ ವಿವರಿಸಿದ್ದಾರೆ.
ʼʼಒಬ್ಬ ನಟನಾಗಿ ದುಡಿಸಿ ಈ ರೀತಿ ಮಾಡಿದರೆ ಬೇಸರವಾಗುತ್ತದೆ. ಮೇಕಪ್ ಮಾಡಿ ಕುಳಿತು ಕೊಳ್ಳುವುದು ಅಷ್ಟು ಸುಲಭದ ಕೆಲಸ ಅಲ್ಲ. ಇದನ್ನು ಹಾಕಿಕೊಳ್ಳಲು 6 ಗಂಟೆ ಸಮಯ ಬೇಕಿತ್ತು. ಅದನ್ನು ಬೆಳಗಿನ ಜಾವದವರೆಗೂ ಇಟ್ಟುಕೊಳ್ಳಬೇಕಿತ್ತು. ನಾನು ಕಷ್ಟ ಪಟ್ಟಿದ್ದೇನೆ. ಬಹಳ ದಿನಗಳಿಂದ ಈ ರೀತಿ ವಿಡಿಯೊ ಮಾಡಬೇಕು ಎಂದುಕೊಂಡಿದ್ದೆ. ಆದರೆ ಮನಸ್ಸು ಬರಲಿಲ್ಲ. ಈಗ ಮಾಡುತ್ತಿದ್ದೇನೆʼʼ ಎಂದು ರಾಘವೇಂದ್ರ ತಿಳಿಸಿದ್ದಾರೆ.
ನಟ ರಾಘವೇಂದ್ರ ಕನ್ನಡದ 'ಕ್ರಾಂತಿ', 'ಕಾಟೇರ' ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ʼಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಾ ಇದ್ದು ಈ ಬಗ್ಗೆ ಸಿನಿಮಾ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ʼವೃಷಭʼ ಬಹು ಕೋಟಿ ರೂ. ವೆಚ್ಚದ ಚಿತ್ರ ಆಗಿದ್ದು ಮಲೆಯಾಳಂ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿದೆ. ಜತೆಗೆ ಕನ್ನಡ, ತಮಿಳು, ಹಿಂದಿಯಲ್ಲೂ ರಿಲೀಸ್ ಆಗಲಿದೆ.
ಇದನ್ನು ಓದಿ:Vrusshabha Movie: ರಾಜನಾಗಿ ಖಡಕ್ ಎಂಟ್ರಿ ಕೊಟ್ಟ ಮೋಹನ್ ಲಾಲ್: ವೃಷಭ ಚಿತ್ರದ ಟೀಸರ್ ರಿಲೀಸ್
ಕನೆಕ್ಟ್ ಮೀಡಿಯಾ, ಬಾಲಾಜಿ ಟೆಲಿಫಿಲ್ಮ್ಸ್, ಅಭಿಷೇಕ್ ಎಸ್. ವ್ಯಾಸ್ ಸ್ಟುಡಿಯೋಸ್ ಜತೆಗೂಡಿ ಪ್ರಸ್ತುತಪಡಿಸುತ್ತಿರುವ ʼವೃಷಭʼ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಸಿ.ಕೆ. ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ನಿರ್ಮಿಸಿದ್ದಾರೆ. ನಂದ ಕಿಶೋರ್ ಕಥೆ ಬರೆದು 'ವೃಷಭ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟಿ ರಾಗಿಣಿ ದ್ವಿವೇದಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.