ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆ.26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆಯಾದರು. ಈ ಮದುವೆಯು ಬಹಳ ಅದ್ದೂರಿಯಾಗಿ ಮತ್ತು ವ್ಯವಸ್ಥಿತವಾಗಿ ನಡೆದಿತ್ತು. ಕುಟುಂಬಸ್ಥರು, ಆಪ್ತರು, ಸ್ನೇಹಿತರು ಭಾಗಿಯಾಗಿ ವಿರೋಶ್ ವೆಡ್ಡಿಂಗ್ ಅನ್ನು ಯಶಸ್ವಿಯಾಗಿಸಿದ್ದರು. ಅಂದಹಾಗೆ, ಈ ವಿರೋಶ್ ವೆಡ್ಡಿಂಗ್‌ನ ಪ್ಲಾನಿಂಗ್ ಹೇಗಿತ್ತು ಎಂಬುದರ ಇಂಚಿಂಚೂ ಮಾಹಿತಿಯನ್ನು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ಅವರು ಹಂಚಿಕೊಂಡಿದ್ದಾರೆ. ಈ ಮದುವೆಯ ತೆರೆಮರೆಯ ಸುಂದರ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ
ಮದುವೆ ಬಗ್ಗೆ ಅವರಿಗಿದ್ದ ಸ್ಪಷ್ಟತೆ ಕಂಡಿತು
"ಈ ಮದುವೆ ಸಮಾರಂಭವು ಸೆಲೆಬ್ರಿಟಿಗಳನ್ನು ಮ್ಯಾನೇಜ್ ಮಾಡಿದಂತೆ ಎನಿಸಲಿಲ್ಲ, ಬದಲಿಗೆ ಒಂದು ಭಾವನಾತ್ಮಕ ಮತ್ತು ಆಪ್ತ ಪ್ರಯಾಣದ ಭಾಗವಾದಂತೆ ಭಾಸವಾಯಿತು. ಮದುವೆಯಲ್ಲಿ ಎದ್ದು ಕಾಣುತ್ತಿದ್ದುದು ಅವರ ಸಂಬಂಧದ ಪ್ರಾಮಾಣಿಕತೆ ಮತ್ತು ತಮ್ಮ ಜೀವನದ ದೊಡ್ಡ ದಿನದ ಬಗ್ಗೆ ಅವರಿಗಿದ್ದ ಸ್ಪಷ್ಟತೆ" ಎಂದು ಪ್ರಿಯಾ ಅವರು ವಿರೋಶ್ ಜೋಡಿಯನ್ನು ಹೊಗಳಿದ್ದಾರೆ.
Rashmika Mandanna: ಹನಿಮೂನ್ ಮೂಡ್ನಲ್ಲಿ ರಶ್ಮಿಕಾ-ವಿಜಯ್; ಕ್ಯೂಟ್ ಫೋಟೊ ವೈರಲ್
ಅದೆಲ್ಲವೂ ಅವರ ವ್ಯಕ್ತಿತ್ವಕ್ಕೆ ಪೂರಕವಾಗಿತ್ತು
"ಎಲ್ಲಾ ಮದುವೆಗಳಿಂದ ಹೊರಬಂದಾಗ ಮನಸ್ಸು ಇಷ್ಟೊಂದು ಭರ್ತಿಯಾದ ಅನುಭವ ನೀಡುವುದಿಲ್ಲ! ವಿಜಯ್ ಮತ್ತು ರಶ್ಮಿಕಾ ಜೊತೆಗಿದ್ದಾಗ, ಒಂದು ಹಂತದಲ್ಲಿ ನಾವು ಇಬ್ಬರು ಸೆಲೆಬ್ರಿಟಿಗಳ ಮದುವೆ ಮಾಡುತ್ತಿದ್ದೇವೆ ಎಂದು ಅನ್ನಿಸಲೇ ಇಲ್ಲ. ಬದಲಿಗೆ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿರುವ ಇಬ್ಬರು ಅದ್ಭುತ ಮನುಷ್ಯರಿಗೆ ಮದುವೆ ಮಾಡಿಸುತ್ತಿದ್ದೇವೆ ಎಂಬ ಭಾವ ಮೂಡಿತು. ತಮಗೆ ಏನು ಬೇಕು ಎಂಬ ಸ್ಪಷ್ಟ ಅರಿವಿದ್ದ ಸೃಜನಶೀಲ ಜೋಡಿ ಇವರು. ನಾವೆಲ್ಲರೂ ಕೇವಲ ಅವರ ಕನಸಿಗೆ ಜೀವ ತುಂಬಿದೆವಷ್ಟೇ. ಪ್ರತಿಯೊಂದು ಉಡುಪು, ಅಲಂಕಾರದ ವೈಖರಿ, ಆಭರಣಗಳ ಥೀಮ್.. ಎಲ್ಲವೂ ಅವರ ಆಲೋಚನೆಯೇ ಆಗಿತ್ತು ಮತ್ತು ಅದು ಅವರ ವ್ಯಕ್ತಿತ್ವಕ್ಕೆ ಪೂರಕವಾಗಿತ್ತು" ಎಂದು ಪ್ರಿಯಾ ಮಗಂತಿ ಹೇಳಿಕೊಂಡಿದ್ದಾರೆ.
ನಾನು ಕನಸು ಕಂಡಂತೆಯೇ ನಡೆಯಿತು
"ರಶ್ಮಿಕಾ ಮತ್ತು ವಿಜಯ್ ಮಧ್ಯದ ಪ್ರೀತಿ ಮತ್ತು ಕಾಳಜಿ ಸುತ್ತಮುತ್ತಲಿನ ಪ್ರತಿಯೊಬ್ಬರಿಗೂ ಹರಡುತ್ತಿತ್ತು ಎಂಬುದು ವಿಶೇಷ. ಈ ಪಯಣದಲ್ಲಿ ನಮ್ಮ ನಡುವಿನ ಸಂಬಂಧ ಕೇವಲ ವೃತ್ತಿಪರವಾಗುಳಿಯದೆ, ಅತ್ಯಂತ ಆಪ್ತವಾದ ಕುಟುಂಬದ ಬಂಧದಂತೆ ಬದಲಾಯಿತು. ಆ ಆತ್ಮೀಯತೆ ಎರಡೂ ಕಡೆಯಿಂದಲೂ ಸಹಜವಾಗಿತ್ತು. ವಿಜಯ್ ಮತ್ತು ರಶ್ಮಿಕಾ ಹೊರಗಿನಷ್ಟೇ ಒಳಗೂ ಸುಂದರ ವ್ಯಕ್ತಿತ್ವದವರು, ಅವರ ಕುಟುಂಬದವರೂ ಹಾಗೆಯೇ. ತನ್ನ ಮಗನ ಮದುವೆಯ ಬಗ್ಗೆ ಮನದಾಳದ ಕನಸು ಹೊತ್ತಿದ್ದ ವಿಜಯ್ ಅವರ ತಾಯಿ, ಪ್ರತಿಯೊಂದು ಸಣ್ಣ ವಿಷಯದಲ್ಲೂ ಅತೀವ ಆಸಕ್ತಿ ವಹಿಸಿದ್ದರು. ಮದುವೆಯ ಕೊನೆಯಲ್ಲಿ ಅವರು, ʻನಾನು ಕನಸು ಕಂಡಂತೆಯೇ ಮಗನ ಮದುವೆ ನಡೆದಿದೆʼ ಎಂದು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಸದಾ ಉಳಿಯುತ್ತದೆ" ಎಂದು ಪ್ರಿಯಾ ಮಗಂತಿ ತಿಳಿಸಿದ್ದಾರೆ.
ಕೊಡಗಿನಲ್ಲಿ ಅದ್ಭುತ ಸ್ವಾಗತ
"ರಶ್ಮಿಕಾ ಅವರ ಪೋಷಕರು ಈ ಪಯಣದ ಅವಿಭಾಜ್ಯ ಅಂಗ, ಅವರನ್ನು ನಾನು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರಿಸಿಕೊಳ್ಳುತ್ತೇನೆ. ಕೊಡಗಿನ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ನಾನು ಅಲ್ಲಿಗೆ ಹೋದಾಗ, ಅವರು ನಮ್ಮನ್ನು ಸ್ವಾಗತಿಸಿದ ರೀತಿ, ಸಂಪ್ರದಾಯಗಳನ್ನು ವಿವರಿಸಿದ ರೀತಿ ಅದ್ಭುತವಾಗಿತ್ತು. ಅದು ಎಂದಿಗೂ ಕೇವಲ ಕೆಲಸದ ಭೇಟಿ ಎನಿಸಲೇ ಇಲ್ಲ, ಅದು ವೈಯಕ್ತಿಕವಾಗಿತ್ತು. ಇನ್ನು ವಿಜಯ್ ಮತ್ತು ರಶ್ಮಿಕಾ ಅವರ ಒಡಹುಟ್ಟಿದವರ ಬಗ್ಗೆ ಹೇಳಲೇಬೇಕು. ಆನಂದ್ ದೇವರಕೊಂಡ ಅವರ ಸೌಜನ್ಯತೆ ಮತ್ತು ಶಿಮನ್ ಅವರ ಅಕ್ಕರೆಯು ತಕ್ಷಣವೇ ನಮ್ಮನ್ನು ಅವರೊಂದಿಗೆ ಕನೆಕ್ಟ್ ಮಾಡುವಂತಿತ್ತು" ಎಂದು ಪ್ರಿಯಾ ಮಗಂತಿ ಹೇಳಿಕೊಂಡಿದ್ದಾರೆ.
ಪ್ರಿಯಾ ಮಗಂತಿ ಪೋಸ್ಟ್
ನಿಮ್ಮ ಪ್ರಪಂಚವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ಹಾಗೆಯೇ ವಿಜಯ್ ಮತ್ತು ರಶ್ಮಿಕಾ ಅವರ ತಂಡದ ಸದಸ್ಯರು ನಮ್ಮನ್ನು ಮನೆಯವರಂತೆ ನೋಡಿಕೊಂಡರು. ಆ ಎಲ್ಲಾ ಸದಸ್ಯರಿಗೂ ಧನ್ಯವಾದಗಳು. ಈ ಮದುವೆಯ ಸಂಭ್ರಮ, ಪ್ಲಾನಿಂಗ್ ಸಮಯದಲ್ಲಿ ನಡೆದ ನಗುವಿನ ಕ್ಷಣಗಳು, ಆ ಆತ್ಮೀಯತೆ ಸದಾ ನನ್ನ ಹೃದಯದಲ್ಲಿ ಜೀವಂತವಾಗಿರುತ್ತದೆ. ನಿಮ್ಮಿಬ್ಬರ ಜೊತೆಗಿನ ನನ್ನ ಬಂಧವು ನಾವು ಪರಿಚಿತರಾಗಿರುವ ಸಮಯಕ್ಕಿಂತಲೂ ತುಂಬಾ ಹಳೆಯದು ಎನಿಸುತ್ತಿದೆ. ನಾವು ಪ್ಲಾನ್ ಮಾಡಿದ ಮದುವೆಗಳಲ್ಲಿ, ಕೇವಲ ಪ್ರೀತಿಯಿಂದಲೇ ತುಂಬಿದ್ದ ಅತ್ಯಂತ ಸುಂದರ ಮದುವೆ ಇದು ಎನ್ನಲು ನನಗೆ ಹೆಮ್ಮೆಯಿದೆ. ನಿಮ್ಮ ಪ್ರಪಂಚವನ್ನು ನನಗೆ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ವಿರೋಶ್" ಎಂದು ಪ್ರಿಯಾ ಮಗಂತಿ ತಿಳಿಸಿದ್ದಾರೆ.