ಕನ್ನಡ ಚಿತ್ರರಂಗದ ಗ್ರಾಫ್ ಅನ್ನು ಜಾಗತಿಕ ಮಟ್ಟದಲ್ಲಿ ಬದಲಾಯಿಸಿದ ನಿರ್ದೇಶಕ ಅಂದರೆ, ಅದು ಪ್ರಶಾಂತ್ ನೀಲ್! ತಮ್ಮ ‘ಕೆಜಿಎಫ್’ ಸರಣಿಯ ಮೂಲಕ ದೊಡ್ಡ ಗೆಲುವನ್ನ ನೀಡಿದರು ಪ್ರಶಾಂತ್. ಇದೀಗ ಅವರು ಪರಭಾಷೆಯಲ್ಲಿ ಟಾಪ್ ಡೈರೆಕ್ಟರ್ ಆಗಿದ್ದಾರೆ. ಪ್ರಭಾಸ್, ಎನ್‌ಟಿಆರ್ ಅವರಂತಹ ಕಲಾವಿದರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಅಂದಹಾಗೆ, ಕೆಜಿಎಫ್‌ಗೂ ಮುನ್ನವೇ ಪುನೀತ್ ರಾಜ್‌ಕುಮಾರ್ ಜೊತೆಗೆ ಒಂದು ಸಿನಿಮಾವನ್ನು ಪ್ರಶಾಂತ್ ನೀಲ್ ಮಾಡಬೇಕಿತ್ತು. ಅದು ಸಾಧ್ಯವಾಗಲೇ ಇಲ್ಲ. ಆ ಬಗ್ಗೆ ಈಗ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಹೇಳಿದ್ದೇನು?
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, ಅಪ್ಪುಗಾಗಿ ಮಾಡಬೇಕಿದ್ದ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದಾರೆ. ಪ್ರಶಾಂತ್ ನೀಲ್ ಅವರು ಪುನೀತ್ ರಾಜ್‌ಕುಮಾರ್ ಅವರಿಗಾಗಿ ಮಾಡಬೇಕಿದ್ದ ಆ ಸಿನಿಮಾದ ಹೆಸರು ‘ಆಹ್ವಾನ’. ಇದು ಪ್ರಶಾಂತ್ ನೀಲ್ ಅವರ ಶೈಲಿಯ ರಗಡ್ ಆಕ್ಷನ್ ಸಿನಿಮಾವಾಗಿರದೆ, ಒಂದು ಎಮೋಷನಲ್ ‘ಫ್ಯಾಮಿಲಿ ಡ್ರಾಮಾ’ ಆಗಿತ್ತು ಎಂಬುದು ವಿಶೇಷ.
ಅಪ್ಪುಗೆ ಆಹ್ವಾನ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ!
"ಆ ಕಥೆಯನ್ನು ನಾನು ಕೇವಲ ಪುನೀತ್ ಅವರಿಗಾಗಿಯೇ ಮಾಡಿದ್ದೆ. ಈಗ ಅವರ ಜೊತೆಯೇ ಆ ಕಥೆಯೂ ಹೊರಟುಹೋಯಿತು" ಎನ್ನುವ ಮೂಲಕ ‘ಆಹ್ವಾನ’ ಸಿನಿಮಾದ ಕಥೆಗೆ ಅಪ್ಪು ಬಿಟ್ಟರೆ ಬೇರೆ ಯಾರೂ ಸೂಕ್ತರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೂ ಈ ಬಗ್ಗೆ ಪ್ರಶಾಂತ್ ನೀಲ್ ಮಾತನಾಡಿದ್ದರು. "ನಾನು ಉಗ್ರಂ ಚಿತ್ರದ ನಂತರ ಪುನೀತ್ ಅವರಿಗಾಗಿ ‘ಆಹ್ವಾನ’ ಚಿತ್ರದ ಸ್ಕ್ರಿಪ್ಟ್ ಹಿಡಿದು ರೆಡಿಯಾಗುತ್ತಿದ್ದೆ. ಆದರೆ ಆ ಹೊತ್ತಿಗೆ ಅಪ್ಪು ಅವರು ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಿಂದ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. ಅದು ಸಾಧ್ಯವಾಗದ ಕಾರಣಕ್ಕೇ ನಾನು ಹೊಂಬಾಳೆ ಫಿಲ್ಮ್ಸ್ ಜೊತೆಗೆ ‘ಕೆಜಿಎಫ್’ ಸಿನಿಮಾ ಮಾಡಬೇಕಾಯಿತು" ಎಂದು ಹೇಳಿಕೊಂಡಿದ್ದರು.
ಪುನೀತ್ ಜೊತೆಗಿನ ಸಿನಿಮಾದ ಬಗ್ಗೆ ಪ್ರಶಾಂತ್ ನೀಲ್ ಮಾತು
ಎನ್‌ಟಿಆರ್ ಜೊತೆ ಡ್ರಾಗನ್ ಸಿನಿಮಾ
ಸದ್ಯ ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್‌ಟಿಆರ್ ಅವರಿಗಾಗಿ ‘ಡ್ರ್ಯಾಗನ್’ ಸಿನಿಮಾ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ 4 ನಿಮಿಷಗಳ ಭರ್ಜರಿ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇದರ ಮುಂದುವರಿದ ಭಾಗವಾಗಿ, ಮುಂದಿನ ದಿನಗಳಲ್ಲಿ ಬರೋಬ್ಬರಿ 9 ನಿಮಿಷಗಳ ಸುದೀರ್ಘ ಟ್ರೇಲರ್ ತರುವ ಆಲೋಚನೆಯಲ್ಲಿ ನೀಲ್ ಇದ್ದಾರೆ. ಈ ಮೂಲಕ ಸಿನಿಮಾದಲ್ಲಿ ಏನೆಲ್ಲಾ ದೃಶ್ಯವೈಭವ ಇರಲಿದೆ ಎಂಬುದನ್ನು ಪ್ರೇಕ್ಷಕರಿಗೆ ಸವಿಸ್ತಾರವಾಗಿ ತಲುಪಿಸಲು ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.