ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಚ್ಚರ! ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ವಿರುದ್ಧ ನೆಗೆಟಿವ್‌ ಕ್ಯಾಂಪೇನ್‌ ಮಾಡುವಂತಿಲ್ಲ; ನ್ಯಾಯಾಲಯ ನೀಡಿದ ಆದೇಶದಲ್ಲಿ ಏನಿದೆ?

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಅಪಪ್ರಚಾರ ನಡೆಸುವುದನ್ನು ನಿರ್ಬಂಧಿಸಿ ಬೆಂಗಳೂರು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್, ಸೆಪ್ಟೆಂಬರ್ 28ರವರೆಗೆ ಸುಳ್ಳು ಮತ್ತು ಮಾನಹಾನಿಕರ ಪೋಸ್ಟ್‌ಗಳನ್ನು ನಿಷೇಧಿಸಿದೆ.

`ರಾಕಿಂಗ್ ಸ್ಟಾರ್'ಯಶ್ ಅಭಿನಯದ, ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ವಿರುದ್ಧ ಸುಳ್ಳು, ಅವಹೇಳನಕಾರಿ ಮತ್ತು ದುರುದ್ದೇಶಪೂರಿತ ಅಪಪ್ರಚಾರ ನಡೆಸುವುದನ್ನು ತಡೆಯಲು ಬೆಂಗಳೂರಿನ ನ್ಯಾಯಾಲಯ ಕ್ರಮ ಕೈಗೊಂಡಿದೆ. ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ನಕಾರಾತ್ಮಕ ಕ್ಯಾಂಪೇನ್ ಹಾಗೂ ಮಾನಹಾನಿಕರ ವಿಷಯಗಳನ್ನು ಹಂಚಿಕೊಳ್ಳುವುದನ್ನು ನಿರ್ಬಂಧಿಸಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸಶನ್ಸ್ ನ್ಯಾಯಾಲಯವು ಅಪರಿಚಿತ ವ್ಯಕ್ತಿಗಳ ವಿರುದ್ಧ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ.

ಸೆಪ್ಟೆಂಬರ್ 28ರವರೆಗೆ ಈ ಆದೇಶ ಜಾರಿಗೆ

ಈ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ನಿರ್ಬಂಧ ವಿಧಿಸಿದೆ. ಅರ್ಜಿದಾರರು ಸಲ್ಲಿಸಿದ ಪ್ರಾಥಮಿಕ ಸಾಕ್ಷ್ಯಾಧಾರಗಳು ಬಲವಾಗಿದ್ದು, ಅನುಕೂಲತೆಯ ಸಮತೋಲನ ಅವರ ಪರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಮಧ್ಯಂತರ ತಡೆಯಾಜ್ಞೆ ನೀಡದಿದ್ದರೆ ನಿರ್ಮಾಪಕರಿಗೆ ಸರಿಪಡಿಸಲಾಗದ ಹಾನಿಯಾಗುವ ಸಾಧ್ಯತೆಯಿದೆ ಎಂದು ಪರಿಗಣಿಸಿ, ಸೆಪ್ಟೆಂಬರ್ 28ರವರೆಗೆ ಈ ಆದೇಶವನ್ನು ಜಾರಿಯಲ್ಲಿರಿಸಲಾಗಿದೆ.

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ನ್ಯಾಯಾಲಯದ ಆದೇಶದಲ್ಲಿ ಏನಿದೆ?

"ಅರ್ಜಿದಾರರು ಹಾಜರುಪಡಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅವರ ಪರವಾಗಿ ಮೇಲ್ನೋಟಕ್ಕೆ ಬಲವಾದ ಸಾಕ್ಷ್ಯಾಧಾರಗಳು ಇರುವುದು ಕಂಡುಬಂದಿದೆ ಹಾಗೂ ಅನುಕೂಲತೆಯ ಸಮತೋಲನವೂ ಅರ್ಜಿದಾರರ ಪರವಾಗಿದೆ. ಒಂದು ವೇಳೆ ಈ ಮಧ್ಯಂತರ ತಡೆಯಾಜ್ಞೆ ನೀಡದಿದ್ದರೆ, ದಾವೆ ಹೂಡಿದ ಉದ್ದೇಶವೇ ವಿಫಲವಾಗಬಹುದು ಮತ್ತು ಅನಗತ್ಯ ಪ್ರಕ್ರಿಯೆಗಳು ಹೆಚ್ಚಾಗಬಹುದು. ಆದ್ದರಿಂದ 'ಟಾಕ್ಸಿಕ್' ಚಿತ್ರ ಬಿಡುಗಡೆಗೆ ಮುಂಚಿತವಾಗಿ ಅಥವಾ ನಂತರ ಯಾವುದೇ ಮಾಧ್ಯಮಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಹಾಗೂ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು, ಪೋಸ್ಟ್ ಮಾಡುವುದು, ಸ್ಟ್ರೀಮ್ ಮಾಡುವುದು ಅಥವಾ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುವುದನ್ನು ನಿರ್ಬಂಧಿಸಿ ಪ್ರತಿವಾದಿಗಳ ವಿರುದ್ಧ ಎಕ್ಸ್-ಪಾರ್ಟೆ ಮಧ್ಯಂತರ ತಡೆಯಾಜ್ಞೆ ಹೊರಡಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಿದೆ.

Yash: ಕೊನೆಗೂ ತೆಲಂಗಾಣದಲ್ಲಿ 'ಟಾಕ್ಸಿಕ್‌' ಟಿಕೆಟ್ ಬುಕಿಂಗ್ ಆರಂಭ; ಚಿತ್ರತಂಡಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಯಮಗಳೇನು ಗೊತ್ತಾ?

ಅಪರಿಚಿತ ವ್ಯಕ್ತಿಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ಕೋರಿ ನಿರ್ಮಾಪಕರು ಸಿವಿಲ್ ಪ್ರೊಸೀಜರ್ ಕೋಡ್‌ನ (CPC) ಆರ್ಡರ್ 39 ನಿಯಮ 1 ಮತ್ತು 2ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ 'ಮೀರಾ ಅಜಿತ್ vs ಜಾನ್ ಡೋ @ ಅಶೋಕ್ ಕುಮಾರ್' ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಹತ್ವದ ತೀರ್ಪನ್ನು ನ್ಯಾಯಾಲಯ ಉಲ್ಲೇಖಿಸಿದೆ. ಅರ್ಜಿದಾರರಿಗೆ ನೈಜ ಬೆದರಿಕೆ ಹಾಗೂ ಹಾನಿಯ ಭೀತಿ ಇದ್ದಾಗ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಇಂತಹ ತಡೆಯಾಜ್ಞೆ ನೀಡಬಹುದು ಎಂಬ ಕಾನೂನು ಅಂಶವನ್ನು ಇಲ್ಲಿ ಪುರಸ್ಕರಿಸಲಾಗಿದೆ.

ಪ್ರಾಮಾಣಿಕ ವಿಮರ್ಶೆಗಳಿಗೆ ಯಾವುದೇ ಅಡ್ಡಿ ಇಲ್ಲ!

ಈ ಆದೇಶವು ಚಿತ್ರದ ಕುರಿತ ಪ್ರಾಮಾಣಿಕ ವಿಮರ್ಶೆಗಳು ಹಾಗೂ ನ್ಯಾಯಯುತ ಟೀಕೆಗಳಿಗೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೇವಲ ದುರುದ್ದೇಶಪೂರಿತ, ಮಾನಹಾನಿಕರ ಹಾಗೂ ಸುಳ್ಳು ಸುದ್ದಿಗಳನ್ನು ತಡೆಯುವ ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಈ ರಕ್ಷಣೆ ನೀಡಲಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದರೆ ಆದೇಶ ತಾನಾಗಿಯೇ ರದ್ದಾಗಲಿದೆ. ಜೊತೆಗೆ CPC ಆರ್ಡರ್ 39 ನಿಯಮ 3ಎ ಪ್ರಕಾರ ಮುಂದಿನ 30 ದಿನಗಳ ಒಳಗಾಗಿ ಅರ್ಜಿಯನ್ನು ಇತ್ಯರ್ಥಪಡಿಸಲು ನ್ಯಾಯಾಲಯ ಕ್ರಮ ಕೈಗೊಳ್ಳಲಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್‌ನ ವೆಂಕಟ್‌ ಕೆ ನಾರಾಯಣ್‌ ಅವರು ಹಣ ಹಾಕಿದ್ದಾರೆ.