ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರತಂಡವು ಕೊನೆಗೂ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಅನ್ನು ಬಿಡುಗಡೆ ಮಾಡಿದೆ. ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ಅಭಿಮಾನಿಗಳ ನೆಚ್ಚಿನ ಗೀತೆಯಾಗಿದ್ದ ಈ ಹಾಡಿನ ವಿಡಿಯೋ ಝಲಕ್ ನೋಡಿ ಫ್ಯಾನ್ಸ್ ಸದ್ಯ ಥ್ರಿಲ್ ಆಗಿದ್ದಾರೆ. ಹಾಡಿನಲ್ಲಿ ನಟ ಯಶ್ ಇದೇ ಮೊದಲ ಬಾರಿಗೆ ಸಖತ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ನಟಿ ಕಿಯಾರಾ ಅಡ್ವಾಣಿ ಜೊತೆಗಿನ ಹಸಿಬಿಸಿ ಸೀನ್ಸ್‌ನಲ್ಲಿ ಮಿಂಚಿದ್ದಾರೆ.
ಕಿಕ್ಕೇರಿಸುವ ಯಶ್-ಕಿಯಾರಾ ಕೆಮಿಸ್ಟ್ರಿ
ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಯಾರಾ ಅಡ್ವಾಣಿ ಸಖತ್ ಆಪ್ತವಾಗಿ ಕಾಣಿಸಿಕೊಂಡಿರುವ 'ತಬಾಹಿ' ಹಾಡು, ಅವರ ನಡುವಿನ ಅತ್ಯುತ್ತಮ ಕೆಮಿಸ್ಟ್ರಿ ಮತ್ತು ಭಾವನಾತ್ಮಕ ಅಭಿನಯದ ಮೂಲಕ ಮರೆಯಲಾಗದ ಪ್ರೇಮಕಥೆಯನ್ನು ಜೀವಂತಗೊಳಿಸಿದೆ. ಎಲೆಕ್ಟ್ರಿಫೈಯಿಂಗ್ ಗಿಟಾರ್ ವ್ಯವಸ್ಥೆ ಮತ್ತು ಭವ್ಯವಾದ ಆರ್ಕೆಸ್ಟ್ರಾ ಮ್ಯೂಸಿಕ್‌ನೊಂದಿಗೆ ವಿಶಾಲವಾದ ಸಿನಿಮಾ ಕ್ಯಾನ್ವಾಸ್‌ನಲ್ಲಿ ಮೂಡಿಬಂದಿರುವ ಈ ಮ್ಯೂಸಿಕ್ ವಿಡಿಯೋ, 'ಟಾಕ್ಸಿಕ್' ಚಿತ್ರದ ಪ್ರಪಂಚಕ್ಕೆ ಒಂದು ರೋಮಾಂಚಕ ಮುನ್ನುಡಿಯಾಗಿದೆ ಎಂದೇ ಹೇಳಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿದ್ದ ಚಿತ್ರತಂಡ
ಹಾಡಿನ ಬಿಡುಗಡೆಗೆ ಮುನ್ನ ನಿರೀಕ್ಷೆಯನ್ನು ಹೆಚ್ಚಿಸಲು ಚಿತ್ರತಂಡವು ಜುಲೈ 7 ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಯಾರಾ ಅಡ್ವಾಣಿ ಅವರನ್ನು ಟ್ಯಾಗ್ ಮಾಡಿ, "ಕದ್ದ ಸಮಯದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ನಿಷೇಧಿತ ಪ್ರೀತಿಯನ್ನು ನೀವು ಏನೆಂದು ಕರೆಯುತ್ತೀರಿ?" ಎಂದು ಪೋಸ್ಟ್ ಮಾಡಿತ್ತು. ಇದಕ್ಕೆ ಕಿಯಾರಾ ಒಂದೇ ಪದದಲ್ಲಿ "ತಬಾಹಿ" ಎಂದು ಉತ್ತರಿಸಿದ್ದರು. ಅದರ ಬೆನ್ನಲ್ಲೇ ಜೀ ಮ್ಯೂಸಿಕ್ ಕಂಪನಿಯು ಅವರ ಉತ್ತರವನ್ನು ಉಲ್ಲೇಖಿಸಿ, "ಸ್ಟೇ ಟ್ಯೂನ್ಡ್..." ಎಂದು ಪ್ರತಿಕ್ರಿಯಿಸುವ ಮೂಲಕ ಅಧಿಕೃತ ಮ್ಯೂಸಿಕ್ ವಿಡಿಯೋ ಪ್ರೀಮಿಯರ್‌ಗೆ ವೇದಿಕೆ ಸಿದ್ಧಪಡಿಸಿತ್ತು.
5 ಭಾಷೆಗಳಲ್ಲಿ ಧೂಳೆಬ್ಬಿಸಿದ ಸಾಂಗ್
ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಸಂಯೋಜಿಸಿ, ಹಾಡಿರುವ ಮತ್ತು ಹಿಂದಿಯಲ್ಲಿ ರಾಜ್ ಶೇಖರ್ ಬರೆದಿರುವ 'ತಬಾಹಿ' ಹಾಡು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಕನ್ನಡದಲ್ಲಿ ಯೋಗರಾಜ್ ಭಟ್, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಘ್ನೇಶ್ ಶಿವನ್ ಮತ್ತು ಮಲಯಾಳಂನಲ್ಲಿ ರಫೀಕ್ ಅಹಮ್ಮದ್ ಅವರು ಬರೆದಿದ್ದಾರೆ. ಜೀ ಮ್ಯೂಸಿಕ್ ಕಂಪನಿಯು ದೇಶದಾದ್ಯಂತ ಈ ಹಾಡನ್ನು ರಿಲೀಸ್ ಮಾಡಿದೆ.
Toxic Movie: ಗೀತು ಮೋಹನ್‌ದಾಸ್ ಹುಟ್ಟುಹಬ್ಬ; ‘ಟಾಕ್ಸಿಕ್’ ಮೇಕಿಂಗ್ ವಿಡಿಯೋ ಔಟ್!
"ತಬಾಹಿ ಎಂಬುದು ಸಾಂಪ್ರದಾಯಿಕ ಅರ್ಥದ ಪ್ರೇಮಗೀತೆಯಲ್ಲ, ಇದು ಪ್ರೀತಿಯ ತೀವ್ರತೆ, ಶರಣಾಗತಿ ಮತ್ತು ಅನುಮತಿ ಕೇಳದ ಬೆಂಕಿಯಾಗಿದೆ. ಯಶ್ ಅವರು ತೆರೆಯ ಮೇಲೆ ಅಪರೂಪದ ನಂಬಿಕೆಯನ್ನು ತರುತ್ತಾರೆ, ಅದನ್ನು ನಾನು ಪ್ರತಿ ನೋಟ್‌ನಲ್ಲೂ ಮ್ಯಾಚ್ ಮಾಡಲು ಪ್ರಯತ್ನಿಸಿದ್ದೇನೆ" ಎಂದು ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೇಳಿಕೊಂಡಿದ್ದಾರೆ.
Kiara Advani: ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ಇಂದೇ ರಿಲೀಸ್!
ಆಗಸ್ಟ್ 26ಕ್ಕೆ ಭರ್ಜರಿ ಬಿಡುಗಡೆ
ಈ ಚಿತ್ರದಲ್ಲಿ ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಮುಂತಾದ ದೊಡ್ಡ ತಾರಾಗಣವೇ ಇದೆ. ಯಶ್ ಮತ್ತು ಗೀತು ಮೋಹನ್ ದಾಸ್ ಬರೆದು, ಗೀತು ಮೋಹನ್ ದಾಸ್ ನಿರ್ದೇಶಿಸಿರುವ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದ ಭಾಷೆಗಳಿಗೆ ಡಬ್ ಮಾಡಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ 'ಟಾಕ್ಸಿಕ್' ಚಿತ್ರವು ಆಗಸ್ಟ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.