ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಟಾಕ್ಸಿಕ್' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾರೀ ಅನಾಹುತವೊಂದು ಸಂಭವಿಸಿದೆ. ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಈ ಅದ್ಧೂರಿ ಸಮಾರಂಭದಲ್ಲಿ ಸೌಂಡ್ ಸಿಸ್ಟಮ್ ಕಂಬ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಿಕ್ಕಿರಿದು ತುಂಬಿದ್ದ ಮಲ್ಲಾರೆಡ್ಡಿ ವಿವಿ ಮೈದಾನ
ನಟ ಯಶ್ ಅವರನ್ನು ಕಣ್ತುಂಬಿಕೊಳ್ಳಲು ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಮೈದಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಹರಿದುಬಂದಿದ್ದರು. ಯಶ್ ವೇದಿಕೆ ಪ್ರವೇಶಿಸುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಅವರನ್ನು ಹತ್ತಿರದಿಂದ ನೋಡುವ ಅತ್ಯುತ್ಸಾಹದಲ್ಲಿ ಕೆಲ ಯುವಕರು ಆವರಣದಲ್ಲಿದ್ದ ಬೃಹತ್ ಫ್ಲಡ್‌ಲೈಟ್ ಹಾಗೂ ಸೌಂಡ್‌ಬಾಕ್ಸ್ ಅಳವಡಿಸಿದ್ದ ಕಂಬಗಳ ಮೇಲೆ ಹತ್ತಿ ನಿಂತಿದ್ದರು.
ಕ್ಷಣಾರ್ಧದಲ್ಲಿ ಕುಸಿದ ಸೌಂಡ್‌ಬಾಕ್ಸ್
ಯುವಕರು ಸೌಂಡ್‌ಬಾಕ್ಸ್ ಸಿಸ್ಟಮ್ ಮೇಲೆ ನಿಂತಿದ್ದರಿಂದ, ಸಮತೋಲನ ತಪ್ಪಿ ಅದು ಏಕಾಏಕಿ ನೆಲಕ್ಕುರುಳಿದೆ. ಕಂಬದ ಮೇಲಿದ್ದ ವಿದ್ಯಾರ್ಥಿಗಳ ಸಮೇತ ಸೌಂಡ್‌ಬಾಕ್ಸ್‌ಗಳು ಕೆಳಗೆ ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳಿಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಓರ್ವ ಯುವತಿ ಆತಂಕದಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ತೀವ್ರ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.
ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು
ಘಟನೆ ನೋಡಿ ಗಾಬರಿಯಾದ ಯಶ್
ವೇದಿಕೆಯಲ್ಲಿ ಮಾತನಾಡುತ್ತಿದ್ದ ಯಶ್ ಈ ದುರ್ಘಟನೆಯನ್ನು ಕಣ್ಣಾರೆ ಕಂಡು ತೀವ್ರ ಗಾಬರಿಗೊಂಡರು. ತಕ್ಷಣವೇ ತಮ್ಮ ಭಾಷಣವನ್ನು ನಿಲ್ಲಿಸಿದ ಅವರು, "ಓಯ್, ಯಾರಿಗೂ ಏನು ಆಗಿಲ್ವಾ? ಪ್ಲೀಸ್ ಎಲ್ಲರೂ ಕೇರ್‌ಫುಲ್ ಆಗಿರಿ..." ಎಂದು ಆತಂಕ ವ್ಯಕ್ತಪಡಿಸಿದರು. ಕೂಡಲೇ ಗಾಯಾಳುಗಳಿಗೆ ನೆರವಾಗುವಂತೆ ಭದ್ರತಾ ಸಿಬ್ಬಂದಿ ಹಾಗೂ ಆಯೋಜಕರಿಗೆ ಸೂಚಿಸಿದ ಯಶ್, ಪರಿಸ್ಥಿತಿ ತಿಳಿಯಾದ ಬಳಿಕವೇ ಕಾರ್ಯಕ್ರಮ ಮುಂದುವರಿಸಿದರು.
ಆಸ್ಪತ್ರೆಗೆ ಗಾಯಾಳುಗಳ ದಾಖಲು
ಕೂಡಲೇ ಎಚ್ಚೆತ್ತ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಶಾಸಕ ಮಲ್ಲಾರೆಡ್ಡಿ ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘಟನೆ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.