‘ರಾಮಾಯಣ: ಭಾಗ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ರಣಬೀರ್ ಕಪೂರ್ ಮತ್ತು ಯಶ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ, ಮೊದಲ ನಾಲ್ಕು ದಿನಗಳಲ್ಲೇ ವಿಶ್ವಾದ್ಯಂತ 500 ಕೋಟಿ ಕ್ಲಬ್ ಸೇರುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲೂ ಸದ್ದು ಮಾಡುತ್ತಿದೆ. ಆದರೆ, ಭಾರತೀಯ ಚಿತ್ರರಂಗದ ಇತ್ತೀಚಿನ ಬ್ಲಾಕ್ಬಸ್ಟರ್ ಚಿತ್ರಗಳಾದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಾಗೂ ‘ಧುರಂಧರ್ 2: ದಿ ರಿವೇಂಜ್’ ಸಿನಿಮಾಗಳ ದಾಖಲೆಗಳಿಗೆ ಹೋಲಿಸಿದರೆ, ‘ರಾಮಾಯಣ’ ಸೃಷ್ಟಿಸುತ್ತಿರುವ ಗಳಿಕೆಯ ವೇಗ ಸಾಕಷ್ಟು ಕುತೂಹಲಕಾರಿಯಾಗಿದೆ.
‘ಧುರಂಧರ್ 1’ಕ್ಕಿಂತ ರಾಮಾಯಣದ ಕಲೆಕ್ಷನ್ ಉತ್ತಮ
‘ಧುರಂಧರ್: ಪಾರ್ಟ್ 1’ ಚಿತ್ರಕ್ಕೆ ಹೋಲಿಸಿದರೆ ‘ರಾಮಾಯಣ’ ಆರಂಭಿಕ ದಿನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದೆ. 2025ರ ಡಿಸೆಂಬರ್ 5ರಂದು ಬಿಡುಗಡೆಯಾಗಿದ್ದ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’, ಭಾರತದಲ್ಲಿ ಮೊದಲ ದಿನ 28 ಕೋಟಿ ಗಳಿಸಿ ಸಾಧಾರಣ ಆರಂಭ ಪಡೆದಿತ್ತು. ನಂತರದ ದಿನಗಳಲ್ಲಿ ಉತ್ತಮ ಕಲೆಕ್ಷನ್ ದಾಖಲಿಸಿತು. ಎರಡನೇ ದಿನ 32 ಕೋಟಿ ಹಾಗೂ ಮೂರನೇ ದಿನ 43 ಕೋಟಿ ಸಂಗ್ರಹಿಸಿ, ಮೊದಲ ವಾರಾಂತ್ಯಕ್ಕೆ 103 ಕೋಟಿ ಗಳಿಸಿತ್ತು. ಮೊದಲ ವಾರದ ಅಂತ್ಯಕ್ಕೆ 207.25 ಕೋಟಿ ತಲುಪಿದ್ದ ಈ ಚಿತ್ರ, ಅಂತಿಮವಾಗಿ ವಿಶ್ವಾದ್ಯಂತ 1,307 ಕೋಟಿ ಕಲೆಕ್ಷನ್ ಮಾಡಿತ್ತು; ಅದರಲ್ಲಿ ಭಾರತದ ಗಳಿಕೆಯೇ 840.20 ಕೋಟಿಯಷ್ಟಿತ್ತು.
ನವೆಂಬರ್ 5ರಂದು ತೆರೆಕಂಡ ‘ರಾಮಾಯಣ: ಭಾಗ 1’ ಮೊದಲ ದಿನವೇ ಭಾರತದಲ್ಲಿ ಭರ್ಜರಿ 64.85 ಕೋಟಿ ಬಾಚಿಕೊಂಡಿದೆ. ನಂತರದ ದಿನಗಳಲ್ಲಿ ಕ್ರಮವಾಗಿ 48.05 ಕೋಟಿ, 69.80 ಕೋಟಿ ಹಾಗೂ 56.15 ಕೋಟಿ ಗಳಿಸುವ ಮೂಲಕ ಕೇವಲ ನಾಲ್ಕೇ ದಿನಗಳಲ್ಲಿ 238.85 ಕೋಟಿ (ಒಟ್ಟು ಗ್ರಾಸ್ ಕಲೆಕ್ಷನ್ 285.20 ಕೋಟಿ) ಗಳಿಸಿದೆ. ಈ ಮೂಲಕ ‘ಧುರಂಧರ್ 1’ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್ಗಿಂತ ಸಾಕಷ್ಟು ಮುಂದಿದೆ.
‘ಧುರಂಧರ್ 2’ ಗಳಿಕೆ ಮುಂದೆ ಮಂಕು
ಆದರೆ, ರಣವೀರ್ ಸಿಂಗ್ ಅವರ ‘ಧುರಂಧರ್ 2: ದಿ ರಿವೇಂಜ್’ ಚಿತ್ರದ ಪ್ರಚಂಡ ದಾಖಲೆಗಳನ್ನು ಸರಿಗಟ್ಟುವಲ್ಲಿ ‘ರಾಮಾಯಣ’ ಕೊಂಚ ಹಿನ್ನಡೆ ಅನುಭವಿಸಿದೆ. 2026ರ ಮಾರ್ಚ್ 19ರಂದು ಬಿಡುಗಡೆಯಾಗಿದ್ದ ‘ಧುರಂಧರ್ 2’, ಬಿಡುಗಡೆಗೂ ಮುನ್ನ ಮಾರ್ಚ್ 18ರಂದು ನಡೆದ ಪೇಯ್ಡ್ ಪ್ರೀಮಿಯರ್ಗಳ ಮೂಲಕವೇ 43 ಕೋಟಿ ಕಲೆಹಾಕಿ ಸಂಚಲನ ಮೂಡಿಸಿತ್ತು. ನಂತರ ಮೊದಲ ದಿನ ಬರೋಬ್ಬರಿ 102.55 ಕೋಟಿ, ಎರಡನೇ ದಿನ 80.72 ಕೋಟಿ, ಮೂರನೇ ದಿನ 113 ಕೋಟಿ ಹಾಗೂ ನಾಲ್ಕನೇ ದಿನ 114.85 ಕೋಟಿ ಗಳಿಸಿತ್ತು. ಪೇಯ್ಡ್ ಪ್ರೀಮಿಯರ್ ಹೊರತುಪಡಿಸಿಯೂ ಮೊದಲ ನಾಲ್ಕು ದಿನಗಳಲ್ಲೇ ಭಾರತದಲ್ಲಿ 411.12 ಕೋಟಿ (ಪ್ರೀಮಿಯರ್ ಸೇರಿ ₹454.12 ಕೋಟಿ) ಗಳಿಸಿತ್ತು.
ಅಂತಿಮವಾಗಿ ಭಾರತದಲ್ಲಿ 1,150 ಕೋಟಿ ನಿವ್ವಳ ಹಾಗೂ ವಿಶ್ವಾದ್ಯಂತ ಒಟ್ಟು 1,813 ಕೋಟಿ ಗಳಿಕೆ ದಾಖಲಿಸಿದ ‘ಧುರಂಧರ್ 2’ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಅಂಕಿ-ಅಂಶಗಳಿಗೆ ಹೋಲಿಸಿದರೆ ‘ರಾಮಾಯಣ’ ಮೊದಲ ದಿನ ಹಾಗೂ ವಾರಾಂತ್ಯದ ಗಳಿಕೆಯಲ್ಲಿ ‘ಧುರಂಧರ್ 2: ದಿ ರಿವೇಂಜ್’ ಚಿತ್ರಕ್ಕಿಂತ ಸಾಕಷ್ಟು ಹಿಂದಿದೆ.
ಸದ್ಯದ ಮಟ್ಟಿಗೆ ‘ರಾಮಾಯಣ: ಭಾಗ 1’ ಮೊದಲ ‘ಧುರಂಧರ್’ ಚಿತ್ರದ ಆರಂಭಿಕ ದಾಖಲೆಗಳನ್ನು ಸುಲಭವಾಗಿ ಹಿಂದಿಕ್ಕಿದ್ದರೂ, ‘ಧುರಂಧರ್ 2’ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಿಲ್ಲ. ಸದ್ಯ ಚಿತ್ರಮಂದಿರಗಳಲ್ಲಿ ‘ರಾಮಾಯಣ’ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲ ದಾಖಲೆಗಳು ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿದ್ದಾರೆ.