ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 23 ದಿನಗಳಲ್ಲಿ ವಿಶ್ವಾದ್ಯಂತ 1,790.10 ಕೋಟಿ ಗಳಿಸುವ ಮೂಲಕ ಎಸ್. ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2: ದಿ ಕನ್‌ಕ್ಲೂಷನ್’ ಚಿತ್ರದ ದಾಖಲೆಯನ್ನು ಮುರಿದಿದೆ.
ಈ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ರಾಮಾಯಣ’ ಮೂರನೇ ಸ್ಥಾನಕ್ಕೇರಿದ್ದು, ಇದೀಗ ಎರಡನೇ ಸ್ಥಾನದಲ್ಲಿರುವ ‘ಧುರಂಧರ್ 2’ ಚಿತ್ರದ ದಾಖಲೆಯನ್ನು ಪುಡಿಗಟ್ಟಲು ಮುಂದಾಗಿದೆ.
23ನೇ ದಿನಕ್ಕೆ ಹೊಸ ದಾಖಲೆ
‘ಬಾಹುಬಲಿ 2’ ಚಿತ್ರದ ಒಟ್ಟು ಜೀವಿತಾವಧಿ ಗಳಿಕೆಯಾದ 1,788.06 ಕೋಟಿಯನ್ನು ‘ರಾಮಾಯಣ’ ಹಿಂದಿಕ್ಕಿದೆ. ನಾಲ್ಕನೇ ಶುಕ್ರವಾರದಂದು (23ನೇ ದಿನ) ಭಾರತದಲ್ಲಿ 8.45 ಕೋಟಿ ಗಳಿಕೆ ಮಾಡಿದ್ದರೆ, ವಿದೇಶಿ ಮಾರುಕಟ್ಟೆಯಿಂದ 5 ಕೋಟಿ ಸಂಗ್ರಹಿಸಿದೆ. ಗುರುವಾರದ 9.65 ಕೋಟಿ ಗಳಿಕೆಗೆ ಹೋಲಿಸಿದರೆ ದೇಶೀಯ ಗಳಿಕೆಯಲ್ಲಿ ಶೇ. 12.4 ರಷ್ಟು ಇಳಿಕೆ ಕಂಡುಬಂದಿದ್ದರೂ, ಚಿತ್ರದ ಒಟ್ಟಾರೆ ಓಟ ಭರ್ಜರಿಯಾಗಿದೆ.
ಈವರೆಗೂ 4.17 ಕೋಟಿ ಸೇಲ್!
ಇಲ್ಲಿಯವರೆಗೆ ʻರಾಮಾಯಣʼ ಚಿತ್ರದ ಭಾರತದ ಗಳಿಕೆ 1,195.10 ಕೋಟಿಗೆ ತಲುಪಿದೆ. ನಾಲ್ಕನೇ ಶುಕ್ರವಾರದಂದು ದೇಶಾದ್ಯಂತ ಐದು ಭಾಷೆಗಳಲ್ಲಿ ಒಟ್ಟು 6,584 ಪ್ರದರ್ಶನಗಳು ನಡೆದಿದ್ದು, ಹಿಂದಿ ಆವೃತ್ತಿ 4,976 ಪ್ರದರ್ಶನಗಳಿಂದ 5 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ಕನ್ನಡ ಆವೃತ್ತಿಯು 327 ಪ್ರದರ್ಶನಗಳಿಂದ 1.25 ಕೋಟಿ ಕಲೆಹಾಕುವ ಮೂಲಕ ಎರಡನೇ ಅತಿ ದೊಡ್ಡ ಕೊಡುಗೆ ನೀಡಿದೆ. ತಮಿಳು ಆವೃತ್ತಿ 627 ಪ್ರದರ್ಶನಗಳಿಂದ 1.05 ಕೋಟಿ, ಮಲಯಾಳಂ ಆವೃತ್ತಿ 516 ಪ್ರದರ್ಶನಗಳಿಂದ 1 ಕೋಟಿ ಹಾಗೂ ತೆಲುಗು ಆವೃತ್ತಿ 138 ಪ್ರದರ್ಶನಗಳಿಂದ 15 ಲಕ್ಷ ಸಂಗ್ರಹಿಸಿದೆ. 23ನೇ ದಿನದಂದು ಭಾರತದಲ್ಲಿ ಅಂದಾಜು 3,94,518 ಟಿಕೆಟ್‌ಗಳು ಮಾರಾಟವಾಗಿದ್ದು, ಒಟ್ಟು ಟಿಕೆಟ್ ಮಾರಾಟವು 4.17 ಕೋಟಿಗೆ ಏರಿದೆ.
ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 5 ಭಾರತೀಯ ಚಿತ್ರಗಳು
ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 5 ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 2016ರಲ್ಲಿ ಬಿಡುಗಡೆಯಾದ 'ದಂಗಲ್' ಚಿತ್ರವು 2,070.30 ಕೋಟಿ ಗಳಿಕೆಯೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ 2026ರ 'ಧುರಂಧರ್ 2: ದಿ ರಿವೆಂಜ್' (1,813.39 ಕೋಟಿ) ಇದ್ದರೆ, ಪ್ರಸ್ತುತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 2026ರ 'ರಾಮಾಯಣ' ಚಿತ್ರವು 1,790.10 ಕೋಟಿ ಗಳಿಸುವ ಮೂಲಕ ಮೂರನೇ ಸ್ಥಾನಕ್ಕೇರಿದೆ.
ಇನ್ನುಳಿದಂತೆ 2017ರ 'ಬಾಹುಬಲಿ 2: ದಿ ಕನ್‌ಕ್ಲೂಷನ್' (1,788.06 ಕೋಟಿ) ನಾಲ್ಕನೇ ಸ್ಥಾನದಲ್ಲಿದ್ದು, 2024ರಲ್ಲಿ ಬಿಡುಗಡೆಯಾದ 'ಪುಷ್ಪ 2: ದಿ ರೂಲ್' ಚಿತ್ರವು 1,742.10 ಕೋಟಿ ಗಳಿಕೆಯೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡಿದೆ.
Ramayana Movie : ಹಾಲಿವುಡ್ ದಿಗ್ಗಜರಿಗೆ ನೇರ ಪೈಪೋಟಿ; ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ರೇಸ್ನಲ್ಲಿ ‘ರಾಮಾಯಣ’
ಪ್ರಸ್ತುತ ಅಮೆರಿಕದಲ್ಲಿ ಸುದೀರ್ಘ ರಜಾದಿನಗಳು ಆರಂಭವಾಗಿರುವುದು ಚಿತ್ರಕ್ಕೆ ಮತ್ತಷ್ಟು ವರದಾನವಾಗಲಿದೆ. ಉತ್ತರ ಅಮೆರಿಕಾದಲ್ಲಿ ʻರಾಮಾಯಣʼ ಚಿತ್ರವು ಈಗಾಗಲೇ ಸುಮಾರು 29.20 ಮಿಲಿಯನ್ ಡಾಲರ್ ಗಳಿಸಿದೆ. ರಜಾದಿನಗಳ ಲಾಭ ಪಡೆದರೆ ‘ಧುರಂಧರ್ 2’ ಚಿತ್ರದ 1,813.39 ಕೋಟಿ ದಾಖಲೆಯನ್ನು ‘ರಾಮಾಯಣ’ ಶೀಘ್ರದಲ್ಲೇ ಮುರಿಯುವುದು ಖಚಿತವಾಗಿದೆ.
ʻರಾಮಾಯಣʼ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಅಭಿನಯಿಸಿದ್ದಾರೆ. ಡಿಎನ್‌ಇಜಿ (DNEG) ಮತ್ತು ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಹಯೋಗದೊಂದಿಗೆ ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ ಈ ಬೃಹತ್ ಚಿತ್ರವನ್ನು ನಿರ್ಮಿಸಿದೆ.ಈ ಚಿತ್ರದ ಎರಡನೇ ಭಾಗವು 2028ರ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.