ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಕ್ಸ್ ಆಫೀಸ್‌ನಲ್ಲಿ ʻರಾಮಾಯಣʼ ಅಬ್ಬರ; 1,384 ಕೋಟಿ ಗಳಿಸಿ 'ಧುರಂಧರ್ 2' ಚಿತ್ರವನ್ನು ಹಿಂದಿಕ್ಕಿದ ಯಶ್‌-ರಣಬೀರ್ ಸಿನಿಮಾ!

ನಿತೇಶ್ ತಿವಾರಿ ನಿರ್ದೇಶನದ ʻರಾಮಾಯಣʼ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆದಿದೆ. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆಯ ಈ ಚಿತ್ರ ಬಿಡುಗಡೆಯಾದ 11 ದಿನಗಳಲ್ಲಿ ವಿಶ್ವಾದ್ಯಂತ 1,384.50 ಕೋಟಿ ಗಳಿಸಿ ‘ಧುರಂಧರ್ 2’ ಚಿತ್ರದ 11ನೇ ದಿನದ ದಾಖಲೆಯನ್ನು ಅಳಿಸಿಹಾಕಿದೆ. ಭಾರತದಲ್ಲಿ 909 ಕೋಟಿ ಹಾಗೂ ವಿದೇಶದಲ್ಲಿ 475.50 ಕೋಟಿ ಸಂಗ್ರಹಿಸಿರುವ ಈ ಚಿತ್ರ ಹೊಸ ದಾಖಲೆ ಬರೆದಿದೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ರಾಮಾಯಣ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಮೊದಲ ವಾರಾಂತ್ಯಕ್ಕೆ ಹೋಲಿಸಿದರೆ ಎರಡನೇ ವಾರಾಂತ್ಯದಲ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತಷ್ಟು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ.

ಬಿಡುಗಡೆಯಾದ ಕೇವಲ 8ನೇ ದಿನಕ್ಕೆ ವಿಶ್ವಾದ್ಯಂತ 1,000 ಕೋಟಿ ಗಡಿ ದಾಟಿದ್ದ ಈ ಸಿನಿಮಾ, ಇದೀಗ 11ನೇ ದಿನದ ಅಂತ್ಯಕ್ಕೆ ಭಾರತದಲ್ಲಿಯೇ ಬರೋಬ್ಬರಿ 909 ಕೋಟಿ ಗಳಿಕೆ ಕಂಡಿದೆ.

ವಿಶ್ವಾದ್ಯಂತ 1384.50 ಕೋಟಿ ರೂ. ಗಳಿಕೆ

ಚಿತ್ರ ಬಿಡುಗಡೆಯಾದ 11ನೇ ದಿನದಂದು ದೇಶಾದ್ಯಂತ ನಡೆದ 23,573 ಪ್ರದರ್ಶನಗಳಿಂದ 75 ಕೋಟಿ ಕಲೆಕ್ಷನ್ ಆಗಿದೆ. ಇದರಲ್ಲಿ ಹಿಂದಿ ಆವೃತ್ತಿಯೊಂದೇ 18,536 ಪ್ರದರ್ಶನಗಳಿಂದ 55 ಕೋಟಿ ಗಳಿಸುವ ಮೂಲಕ ಸಿಂಹಪಾಲು ಪಡೆದುಕೊಂಡಿದೆ. ದಕ್ಷಿಣ ಭಾರತದ ಭಾಷೆಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡ ಆವೃತ್ತಿ 919 ಪ್ರದರ್ಶನಗಳಿಂದ 5.75 ಕೋಟಿ, ತಮಿಳು 1,146 ಪ್ರದರ್ಶನಗಳಿಂದ 5 ಕೋಟಿ, ಮಲಯಾಳಂ 5 ಕೋಟಿ ಹಾಗೂ ತೆಲುಗು ಆವೃತ್ತಿ 4.75 ಕೋಟಿ ಬಾಚಿಕೊಂಡಿದೆ. ಇನ್ನು 11ನೇ ದಿನ ವಿದೇಶದಲ್ಲಿ 40 ಕೋಟಿ ಸಂಗ್ರಹಿಸುವ ಮೂಲಕ ಚಿತ್ರದ ಒಟ್ಟು ಓವರ್‌ಸೀಸ್‌ ಗಳಿಕೆ 475.50 ಕೋಟಿಗೆ ತಲುಪಿದೆ. ಈ ಮೂಲಕ ‘ರಾಮಾಯಣ’ ಚಿತ್ರದ ಒಟ್ಟು ವಿಶ್ವಾದ್ಯಂತ ಕಲೆಕ್ಷನ್ 1,384.50 ಕೋಟಿಗೆ ಏರಿಕೆಯಾಗಿದೆ.

Ramayana Movie: ಯಶ್ ರಾವಣನ ಲುಕ್ ಬಗ್ಗೆ ಅನುಪಮ್ ಖೇರ್ ಹೇಳಿದ್ದೇನು?

ʻಧುರಂಧರ್‌ 2ʼ ದಾಖಲೆ ಮುರಿದ ʻರಾಮಾಯಣʼ

ಈ ಭರ್ಜರಿ ಗಳಿಕೆಯೊಂದಿಗೆ ‘ರಾಮಾಯಣ’ ಚಿತ್ರವು 11ನೇ ದಿನದ ಜಾಗತಿಕ ಗ್ರಾಸ್ ಕಲೆಕ್ಷನ್‌ನಲ್ಲಿ ‘ಧುರಂಧರ್ 2’ ಸಿನಿಮಾದ ದಾಖಲೆಯನ್ನು ಹಿಂದಿಕ್ಕಿದೆ. ‘ಧುರಂಧರ್ 2’ ಚಿತ್ರವು 11ನೇ ದಿನ ವಿದೇಶದಲ್ಲಿ 18 ಕೋಟಿ ಗಳಿಸಿ, ಒಟ್ಟು 341 ಕೋಟಿ ಸಾಗರೋತ್ತರ ಗಳಿಕೆಯೊಂದಿಗೆ ವಿಶ್ವಾದ್ಯಂತ 1,354.92 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಆದರೆ ‘ರಾಮಾಯಣ’ 11 ದಿನಗಳಲ್ಲೇ 1,384.50 ಕೋಟಿ ಗಳಿಸಿ ಈ ದಾಖಲೆಯನ್ನು ಅಳಿಸಿಹಾಕಿದೆ. ಆದಾಗ್ಯೂ, ‘ಧುರಂಧರ್ 2’ ಚಿತ್ರದ ಒಟ್ಟಾರೆ ಲೈಫ್‌ಟೈಮ್ ಗಳಿಕೆಯನ್ನು ಹಿಂದಿಕ್ಕಲು ‘ರಾಮಾಯಣ’ ಇನ್ನೂ ಕೆಲ ದಿನಗಳ ಕಾಲ ಉತ್ತಮ ಪ್ರದರ್ಶನ ಮುಂದುವರಿಸಬೇಕಿದೆ.

ಭಾರತೀಯ ಚಿತ್ರರಂಗದಲ್ಲಿ ಅತಿ ವೇಗವಾಗಿ 1,000 ಕೋಟಿ ಕ್ಲಬ್ ಸೇರಿದ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೂ ‘ರಾಮಾಯಣ’ ಪಾತ್ರವಾಗಿದೆ. ‘ಧುರಂಧರ್ 2’ ಮತ್ತು ‘ಪುಷ್ಪ 2’ ಚಿತ್ರಗಳು ಕೇವಲ 7 ದಿನಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರೆ, ‘ರಾಮಾಯಣ’ ಸಿನಿಮಾ 8 ದಿನಗಳಲ್ಲಿ 1,000 ಕೋಟಿ ರೂ. ಗಳಿಸಿ, 10-11 ದಿನ ತೆಗೆದುಕೊಂಡಿದ್ದ ‘ಬಾಹುಬಲಿ 2’ ಚಿತ್ರವನ್ನು ಹಿಂದಿಕ್ಕಿದೆ. ದಂಗಲ್, ಕೆಜಿಎಫ್ ಚಾಪ್ಟರ್ 2, ಆರ್‌ಆರ್‌ಆರ್, ಜವಾನ್, ಪಠಾಣ್, ಕಲ್ಕಿ 2898 ಎಡಿ ಹಾಗೂ ಧುರಂಧರ್ ಚಿತ್ರಗಳ ಪ್ರತಿಷ್ಠಿತ ಸಾಲಿಗೆ ಈಗ ‘ರಾಮಾಯಣ’ ಸೇರ್ಪಡೆಯಾಗಿದೆ.

ಈ ಸಾಧನೆಯೊಂದಿಗೆ ರಣಬೀರ್ ಕಪೂರ್ ತಮ್ಮ ವೃತ್ತಿಜೀವನದ ಮೊದಲ 1,000 ಕೋಟಿ ಸಿನಿಮಾವನ್ನು ತಮ್ಮದಾಗಿಸಿಕೊಂಡು, ತಮ್ಮದೇ ಹಿಂದಿನ ‘ಅನಿಮಲ್’ ಚಿತ್ರದ ದಾಖಲೆಯನ್ನು ಮುರಿದಿದ್ದಾರೆ. ಅತ್ತ ‘ಕೆಜಿಎಫ್ 2’ ಬಳಿಕ ಯಶ್ ಅವರಿಗೆ ಇದು ಎರಡನೇ 1,000 ಕೋಟಿ ಕ್ಲಬ್ ಸಿನಿಮಾವಾಗಿ ಹೊರಹೊಮ್ಮಿದೆ.

ನಮಿತ್ ಮಲ್ಹೋತ್ರಾ ಅವರ ಬೃಹತ್ ಬಜೆಟ್ ನಿರ್ಮಾಣದ ಜೊತೆಗೆ ಯಶ್ ಕೂಡ ಈ ಚಿತ್ರಕ್ಕೆ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ನಿತೇಶ್ ತಿವಾರಿ ಅವರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಪೌರಾಣಿಕ ದೃಶ್ಯಕಾವ್ಯದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರೊಂದಿಗೆ ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತಾ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಅಭಿನಯಿಸಿದ್ದು, ಚಿತ್ರವು ಮುಂದಿನ ದಿನಗಳಲ್ಲಿ ಇನ್ನಷ್ಟು ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆಯಿದೆ.