ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash: ʻಟಾಕ್ಸಿಕ್‌ʼ ಸಿನಿಮಾದ ತೆಲುಗು ರಾಜ್ಯಗಳ ಹಕ್ಕುಗಳು ಸೋಲ್ಡ್‌ಔಟ್; ದಾಖಲೆ ಮೊತ್ತಕ್ಕೆ ಟಾಲಿವುಡ್‌ ನಿರ್ಮಾಪಕನ ಪಾಲು!

Toxic movie Telugu rights: ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಟಾಕ್ಸಿಕ್‌ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣಾ ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆ ದಾಖಲೆಯ ಮೊತ್ತಕ್ಕೆ ಖರೀದಿಸಿದೆ.

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರ ಹೊಸ ಸಿನಿಮಾ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairytale for Grown-Ups) ಸಿನಿಮಾ ವಿತರಣಾ ಹಕ್ಕುಗಳ ವಿಚಾರದಲ್ಲೇ ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ.

ಹೌದು, ಟಾಕ್ಸಿಕ್‌ ಸಿನಿಮಾ ತೆಲುಗು ರಾಜ್ಯಗಳ ವಿತರಣಾ ಹಕ್ಕುಗಳನ್ನು ನಿರ್ಮಾಪಕ ದಿಲ್ ರಾಜು ಅವರ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆ ಪಡೆದುಕೊಂಡಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ವಿತರಣಾ ಹಕ್ಕುಗಳನ್ನು ಬರೋಬ್ಬರಿ 120 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ತೆಲುಗು ಮೂಲವಲ್ಲದ ಸಿನಿಮಾವೊಂದಕ್ಕೆ ಸಿಕ್ಕ ಅತಿ ದೊಡ್ಡ ಮೊತ್ತದ ಡೀಲ್ ಇದು ಹೇಳಲಾಗುತ್ತಿದೆ.

Yash Toxic teaser: ಯಶ್ ಟಾಕ್ಸಿಕ್‌ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹಕ್ಕುಗಳಿಗಾಗಿ ಮೂರು ಪ್ರಮುಖ ಸಂಸ್ಥೆಗಳು ಪೈಪೋಟಿ ನಡೆಸಿದ್ದವು, ಅಂತಿಮವಾಗಿ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆಗೆ ಹಕ್ಕುಗಳು ಸಿಕ್ಕಿವೆ. ತೆಲುಗು ರಾಜ್ಯಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೊಡ್ಡ ಪ್ರೇಕ್ಷಕ ಬಳಗ ಇದೆ. ಕೆಜಿಎಫ್ 2 ಸಿನಿಮಾ ಅಲ್ಲಿ ದೊಡ್ಡ ಗಳಿಕೆಯನ್ನು ಕಂಡಿತ್ತು. ಸದ್ಯ ತೆಲುಗು ಸಿನಿಪ್ರಿಯರು ಟಾಕ್ಸಿಕ್‌ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿರುವ 'ಟಾಕ್ಸಿಕ್' ಚಿತ್ರವು ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ನ ದಿಲ್ ರಾಜು ಹೇಳಿದ್ದೇನು?

"ಯಶ್ ಭಾರತೀಯ ಚಿತ್ರರಂಗದ ಒಬ್ಬ ಅಪ್ರತಿಮ ಶಕ್ತಿಯಾಗಿ ನಿಂತಿದ್ದಾರೆ. ಕೆಜಿಎಫ್-2 ನಂತರ ಅವರ ಮಾರುಕಟ್ಟೆ ವಿಶ್ವದಾದ್ಯಂತ ಇನ್ನಷ್ಟು ಗಟ್ಟಿಯಾಗಿದೆ. ಕೆಜಿಎಫ್-2 ನಂತರದ ಅವರ ಮುಂದಿನ ಚಿತ್ರಕ್ಕಾಗಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚುತ್ತಲೇ ಇತ್ತು. ನಾಲ್ಕು ವರ್ಷಗಳ ಕಾಯುವಿಕೆಯ ನಂತರ, ಈ ಚಿತ್ರದ ಮೇಲಿನ ನಿರೀಕ್ಷೆಗಳು ಜೋರಾಗಿವೆ. ಇಂತಹ ಪ್ರತಿಷ್ಠಿತ ಪ್ರಾಜೆಕ್ಟ್ ಅನ್ನು ನಾವು ವಿತರಣೆ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಯಶ್ ಅವರೊಂದಿಗೆ ಇನ್ನೂ ಅನೇಕ ಚಿತ್ರಗಳಲ್ಲಿ ಕೆಲಸ ಮಾಡುವ ಆಶಯ ಹೊಂದಿದ್ದೇವೆ" ಎಂದು ದಿಲ್ ರಾಜು ಹೇಳಿದ್ದಾರೆ.

'ಟಾಕ್ಸಿಕ್‌ʼ ಜತೆಗಿನ ಬಾಕ್ಸ್‌ ಆಫೀಸ್‌ ವಾರ್‌ ತಪ್ಪಿಸಲು 'ಧುರಂಧರ್ 2' ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ? ವೈರಲ್ ಪೋಸ್ಟ್‌ನ‌ ಅಸಲಿಯತ್ತೇನು?

ಯಶ್ ಮತ್ತು ಗೀತು ಮೋಹನ್ ದಾಸ್ ಜಂಟಿಯಾಗಿ ಸ್ಕ್ರಿಪ್ಟ್ ಬರೆದಿದ್ದು, ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್‌, ಹುಮಾ ಖುರೇಷಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ರಾಜೀವ್ ರವಿ ಕ್ಯಾಮೆರಾ ಕೈಚಳಕವಿದ್ದು, ರವಿ ಬಸ್ರೂರು ಸಂಗೀತ, ಉಜ್ವಲ್ ಕುಲಕರ್ಣಿ ಸಂಕಲನ ಮತ್ತು ಟಿ.ಪಿ. ಆಬಿದ್ ಅವರ ಪ್ರೊಡಕ್ಷನ್ ವಿನ್ಯಾಸವಿದೆ. ಸಾಹಸ ದೃಶ್ಯಗಳನ್ನು ಹಾಲಿವುಡ್ ಆಕ್ಷನ್ ನಿರ್ದೇಶಕ ಜೆ.ಜೆ. ಪೆರ್ರಿ (ಜಾನ್ ವಿಕ್ ಖ್ಯಾತಿ), ರಾಷ್ಟ್ರ ಪ್ರಶಸ್ತಿ ವಿಜೇತ ಅನ್ಬರಿವ್ ಮತ್ತು ಕೆಚಾ ಕಂಫಕ್ಡಿ ಅದ್ದೂರಿಯಾಗಿ ಸಂಯೋಜಿಸಿದ್ದಾರೆ.