ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಟಾಕ್ಸಿಕ್' ಚಿತ್ರದ 2ನೇ ಸಾಂಗ್ ರಿಲೀಸ್: ಯಶ್ - ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

'ರಾಕಿಂಗ್ ಸ್ಟಾರ್' ಯಶ್ ಹಾಗೂ ತಾರಾ ಸುತಾರಿಯಾ ಅಭಿನಯದ 'ಟಾಕ್ಸಿಕ್' ಸಿನಿಮಾದ 'ಮನಮೋಹಕ' ಪ್ರೇಮಗೀತೆ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. 'ತಬಾಹಿ' ಹಾಡಿನ ಯಶಸ್ಸಿನ ಬಳಿಕ ಮೂಡಿಬಂದಿರುವ ಈ ಮಧುರ ಗೀತೆಯು 'ರಾಯ' ಮತ್ತು 'ರಿಬೆಕಾ' ಪಾತ್ರಗಳ ಪ್ರೀತಿಯನ್ನು ತೋರಿಸಿದೆ.

'ರಾಕಿಂಗ್ ಸ್ಟಾರ್' ಯಶ್ ಅಭಿನಯದ, ಭಾರತೀಯ ಚಿತ್ರರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದ 2ನೇ ಹಾಡು ಬಿಡುಗಡೆಯಾಗಿದೆ. 'ತಬಾಹಿ' ಹಾಡಿನ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಯಶ್ ಮತ್ತು ತಾರಾ ಸುತಾರಿಯಾ ಜೋಡಿಯಾಗಿ ಕಾಣಿಸಿಕೊಂಡಿರುವ 'ಮನಮೋಹಕ' ಪ್ರೇಮಗೀತೆ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನಸೆಳೆದಿದೆ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ 'ತಬಾಹಿ' ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಸದ್ದು ಮಾಡಿತ್ತು. ಆದರೆ, ಇದೀಗ ಬಂದಿರುವ 'ಮನಮೋಹಕ' ಗೀತೆಯು ಮೃದು ಭಾವನೆಗಳು, ಪ್ರೀತಿಯ ಹಂಬಲ ಹಾಗೂ ಅಂತರಂಗದ ಒಲವನ್ನು ಸಾರುವ ಮೂಲಕ ಗಮನ ಸೆಳೆಯುತ್ತಿದೆ.

Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌! ಏನಿದು ಅಪ್‌ಡೇಟ್‌?

5 ಭಾಷೆಗಳಲ್ಲಿ 'ಪ್ಯಾನ್ ಇಂಡಿಯಾ' ಮೆರಗು

ಈ ಮಧುರ ಪ್ರೇಮಗೀತೆಗೆ ಖ್ಯಾತ ಸಂಗೀತ ಜೋಡಿ ತನಿಷ್ಕ್ ಬಾಗ್ಚಿ, ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ, ಗಾಯಕ ಸಿದ್ಧಾರ್ಥ್ ಬಸ್ರೂರ್ ಅವರು ಐದೂ ಭಾಷೆಗಳಲ್ಲಿ ಈ ಹಾಡಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ 'ಮನಮೋಹಕ' (ಸಾಹಿತ್ಯ: ಪ್ರಮೋದ್ ಮರವಂತೆ), ಹಿಂದಿಯಲ್ಲಿ 'ಮಧೋಷ್' (ಸಾಹಿತ್ಯ: ಅರ್ಸ್ಲಾನ್ ನಿಜಾಮಿ, ಸೈಯದ್ ಮುರಾದ್ ಗಿಲಾನಿ), ತೆಲುಗಿನಲ್ಲಿ 'ಮನಸಾಗದೆ' (ಸಾಹಿತ್ಯ: ರಾಮಜೋಗಯ್ಯ ಶಾಸ್ತ್ರಿ), ತಮಿಳಿನಲ್ಲಿ 'ತಡುಮಾರುದೆಯ್ಯ್' (ಸಾಹಿತ್ಯ: ವಿಘ್ನೇಶ್ ಶಿವನ್), ಮಲಯಾಳಂನಲ್ಲಿ 'ಮಧುಮೋಹಿನಿ' (ಸಾಹಿತ್ಯ: ರಾಜೀವ್ ಗೋವಿಂದನ್) ಎಂದು ಈ ಹಾಡುಗಳು ಮೂಡಿಬಂದಿವೆ.

ರಾಯ ಮತ್ತು ರಿಬೆಕಾ ಪಾತ್ರಗಳ ಭಾವನಾತ್ಮಕ ಪಯಣ

ಹಾಡಿನ ಬಗ್ಗೆ ಮಾತನಾಡಿದ ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ, "ಈ ಹಾಡು ಸಿನಿಮಾದ 'ರಾಯ' ಮತ್ತು 'ರಿಬೆಕಾ' ಪಾತ್ರಗಳ ಭಾವನಾತ್ಮಕ ಪಯಣ, ಪ್ರೀತಿಯ ತಮಾಷೆಯ ಸೂಕ್ಷ್ಮತೆಗಳನ್ನು ಸುಂದರವಾಗಿ ಸೆರೆಹಿಡಿದಿದೆ. 'ಟಾಕ್ಸಿಕ್' ನಂತಹ ದೈತ್ಯ ಸಿನಿಮಾಗೆ ಕೆಲಸ ಮಾಡಿರುವುದು ಅತ್ಯಂತ ವಿಶೇಷ"ಎಂದಿದ್ದಾರೆ.

Toxic: ʼಟಾಕ್ಸಿಕ್‌ʼ ಚಿತ್ರದ 'ಲೇಡೀಸ್ ಆ್ಯಂಡ್‌ ಲೇಡೀಸ್' ಟೀಸರ್‌ ಟೀಕೆಗೆ ಖಡಕ್‌ ಉತ್ತರ ಕೊಟ್ಟ ಬೆನೆಡಿಕ್ಟ್ ಗ್ಯಾರೆಟ್

ಹಿನ್ನೆಲೆ ಗಾಯಕ ಸಿದ್ಧಾರ್ಥ್ ಬಸ್ರೂರ್ ಮಾತನಾಡಿ, "ಮನಮೋಹಕ ಕೇವಲ ವಿರಹದ ಬಗ್ಗೆ ಮಾತ್ರವಲ್ಲ, ಇಬ್ಬರ ನಡುವೆ ಹೇಳಲಾಗದೆ ಉಳಿದ ಪ್ರತಿಯೊಂದರ ಬಗ್ಗೆಯೂ ಇದೆ. ಈ ಹಾಡಿನಲ್ಲಿ ಹಂಬಲ ಮತ್ತು ಅಸಹಾಯಕತೆಯ ಭಾವ ಹರಿಯುತ್ತದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.

ಆಗಸ್ಟ್ 26ಕ್ಕೆ 'ಟಾಕ್ಸಿಕ್' ರಿಲೀಸ್

ಗೀತು ಮೋಹನ್‌ದಾಸ್ ಮತ್ತು ಯಶ್ ಕಥೆ ಬರೆದು, ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗಿದೆ. ಕೆವಿಎನ್‌ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಆಗಸ್ಟ್ 26 ರಂದು ಪ್ರಪಂಚದಾದ್ಯಂತ ತೆರೆಗೆ ಬರಲಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಸೇರಿದಂತೆ ಬೃಹತ್ ತಾರಾಗಣವೇ ನಟಿಸಿದೆ.