ಮುಂಬೈ: ʼಕೆಜಿಎಫ್ʼ (KGF) ಸರಣಿ ಚಿತ್ರಗಳ ಮೂಲಕ ಜಾಗತಿಕ ಸಿನಿಪ್ರಿಯರನ್ನು ಸೆಳೆದ ಯಶ್ (Actor Yash) ಸದ್ಯ ತಮ್ಮ ಗಮನವನ್ನೆಲ್ಲ ʼಟಾಕ್ಸಿಕ್ʼ (Toxic)ನತ್ತ ಕೇಂದ್ರೀಕರಿಸಿದ್ದಾರೆ. ʼಕೆಜಿಎಫ್ʼನಲ್ಲಿ ಚಿನ್ನದ ಸಾಮ್ರಾಜ್ಯ ಕಟ್ಟಿಕೊಟ್ಟಿದ್ದ ರಾಕಿ ಭಾಯ್ ʼಟಾಕ್ಸಿಕ್ʼ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾದ ಕರಾಳ ಮುಖ ತೆರೆದಿಡಲಿದ್ದಾರೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ವಿಶೇಷವಾಗಿ ಸಿದ್ಧವಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸಿದ ಚಿತ್ರತಂಡ ಗೋವಾ, ಮುಂಬೈ ಬಳಿಕ ಇದೀಗ 4ನೇ ಹಂತದ ಚಿತ್ರೀಕರಣಕ್ಕಾಗಿ ಮತ್ತೆ ಮುಂಬೈಗೆ ಮರಳಿದೆ. ಯಶ್ ತಮ್ಮ ಪತ್ನಿ ಜತೆ ರಾಧಿಕಾ ಪಂಡಿತ್ (Radhika Pandit) ಜತೆ ಮುಂಬೈಗೆ ಬಂದಿಳಿದಿರುವ ವಿಡಿಯೊ ಸದ್ಯ ವೈರಲ್ ಆಗಿದೆ. ಯಶ್ ಹೊಸ ಲುಕ್‌ನಲ್ಲಿ ಕಂಡು ಬಂದಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು 'ಟಾಕ್ಸಿಕ್' ಚಿತ್ರವನ್ನು ಕಟ್ಟಿಕೊಡಲು ಯಶ್ ಆ್ಯಂಡ್ ಟೀಂ ಶ್ರಮಿಸುತ್ತಿದೆ. ಕನ್ನಡ ಜತೆಗೆ ಇಂಗ್ಲಿಷ್‌ನಲ್ಲೂ ಚಿತ್ರೀಕರಣ ನಡೆಯುತ್ತಿದ್ದು, ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂಗೆ ಡಬ್ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Toxic Movie: ಬದಲಾಯ್ತು ಸ್ಯಾಂಡಲ್‌ವುಡ್ ಖದರ್; ಹಾಲಿವುಡ್ ಶೈಲಿಯಲ್ಲಿ ಮೂಡಿ ಬರುತ್ತಿದೆ 'ಟಾಕ್ಸಿಕ್'
ವೈರಲ್ ಆಗುತ್ತಿರುವ ಯಶ್ ಅವರ ಪೋಸ್ಟ್ ಇಲ್ಲಿದೆ:
ಯಶ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ
ಭಾನುವಾರ ತನಕ ಬೆಂಗಳೂರಿನಲ್ಲಿದ್ದ ಯಶ್ ಸೋಮವಾರ (ಮಾ. 24) ಮುಂಬೈಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಗಡ್ಡ ಟ್ರಿಮ್ ಮಾಡಿ, ಹೊಸ ಹೇರ್ ಸ್ಟ್ರೈಲ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದು, ಅವರ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವಿಶೇಷ ಎಂದರೆ ಈ ಬಾರಿ ಯಶ್ ಅವರಿಗೆ ರಾಧಿಕಾ ಪಂಡಿತ್ ಕೂಡ ಸಾಥ್ ಕೊಟ್ಟಿದ್ದಾರೆ. ನೀಲಿ ಡ್ರೆಸ್‌ನಲ್ಲಿ ಕಂಗೊಳಿಸಿದ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಪತ್ನಿಯನ್ನು ಕಾರಿಗೆ ಹತ್ತಿಸಿದ ಯಶ್ ಬಳಿಕ ಅಭಿಮಾನಿಗಳತ್ತ ಕೈಬೀಸಿ ತೆರಳಿದ್ದಾರೆ.
ಡ್ರಗ್ಸ್ ಮಾಫಿಯಾದ ಕಥೆ
ʼಟಾಕ್ಸಿಕ್ʼ ಚಿತ್ರದ ಕಥೆಯ ಗುಟ್ಟನ್ನು ಇದುವರೆಗೆ ಸಿನಿಮಾ ತಂಡ ಬಿಟ್ಟುಕೊಟ್ಟಿಲ್ಲ. ಅದಾಗ್ಯೂ ಗೋವಾದಲ್ಲಿ ನಡೆಯುವ ಡ್ರಗ್ಸ್ ಮಾಫಿಯಾದ ಸುತ್ತ ಇದರ ಕಥೆ ಸಾಗುತ್ತದೆ ಎನ್ನಲಾಗಿದೆ. ಹಾಲಿವುಡ್ ನಟರು, ತಂತ್ರಜ್ಞರು ಕೂಡ ಈ ಚಿತ್ರಕ್ಕಾಗಿ ದುಡಿಯುತ್ತಿದ್ದಾರೆ. ಇತ್ತೀಚೆಗೆ ಮುಂಬೈಯಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಅತೀ ಮುಖ್ಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅದರಲ್ಲಿಯೂ ಚಿತ್ರದಲ್ಲಿ ಮೈನವಿರೇಳಿಸುವ ಭರಪೂರ ಆ್ಯಕ್ಷನ್ ದೃಶ್ಯಗಳಿವೆ ಎನ್ನಲಾಗಿದೆ. ಹಾಲಿವುಡ್ ರೇಂಜ್‌ನಲ್ಲಿ ತಯಾರಾಗುತ್ತಿರುವುದರಿಂದಲೇ ಇದು ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ರಿಲೀಸ್ ಡೇಟ್ ಅನೌನ್ಸ್ ಮಾಡಿದ ಚಿತ್ರತಂಡ
ಕೆಲವು ದಿನಗಳ ಹಿಂದೆಯಷ್ಟೇ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಯುಗಾದಿ ಪ್ರಯುಕ್ತ 2026ರ ಮಾ. 19ರಂದು ವಿಶ್ವಾದ್ಯಂತ ಇದು ತೆರೆಗೆ ಬರಲಿದೆ. ಅದಕ್ಕೂ ಮೊದಲು ರಿಲೀಸ್ ಆದ ಗ್ಲಿಂಪ್ಸ್ ಗಮನ ಸೆಳೆದಿದೆ. ರೆಟ್ರೋ ಶೈಲಿ ಮೂಡಿ ಬಂದಿದ್ದ ಗ್ಲಿಂಪ್ಸ್ ಈಗಾಗಲೇ ದಾಖಲೆಯ ವ್ಯೂವ್ಸ್ ಪಡೆದುಕೊಂಡಿದೆ. ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ನ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ನಯನತಾರಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.