ಬೆಂಗಳೂರು: ಪಂಚರಂಗಿ ಯೂಟ್ಯೂಬ್ ಚಾನಲ್‌ನ ʼಮತ್ತೆ ಮೊದಲಿಂದʼ ಗೀತ ಗುಚ್ಛದ (Matte Modalinda Album) 4ನೇ ಹಾಗೂ ಕೊನೆಯ ಹಾಡು 'ನೀ ಹೋದ ಮೇಲೆ...' (ನೆನಪಿನ ಬಣ್ಣ ಹಸಿರು) ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಈ ಹಾಡನ್ನು ಅನಾವರಣ ಮಾಡಿದರು. ಯೋಗರಾಜ್ ಭಟ್ ಗೀತರಚನೆ ಮಾಡಿರುವ ವಿ. ಹರಿಕೃಷ್ಣ ಸಂಗೀತ ನೀಡಿರುವ ಹಾಗೂ ವಾಸುಕಿ ವೈಭವ್ ಹಾಡಿರುವ ಈ ಹಾಡಿನಲ್ಲಿ ಸಂಜನ್ ಕಜೆ ಹಾಗೂ ಅಂಜಲಿ ಗೌಡ ಅಭಿನಯಿಸಿದ್ದಾರೆ.
ʼಮತ್ತೆ ಮೊದಲಿಂದʼ ಗೀತಗುಚ್ಛದ ನಾಲ್ಕನೇ ಹಾಗೂ ಕೊನೆಯ ಹಾಡು ʼನೀ ಹೋದ ಮೇಲೆʼ (ನೆನಪಿನ ಬಣ್ಣ ಹಸಿರು) ಎಂಬ ಹಾಡನ್ನು ಬಿಡುಗಡೆ ಮಾಡಿಕೊಟ್ಟ ಜಯಂತ ಕಾಯ್ಕಿಣಿ ಅವರಿಗೆ ಧನ್ಯವಾದ. ʼಮತ್ತೆ ಮೊದಲಿಂದʼ ಗೀತಗುಚ್ಛದಲ್ಲಿ ನಾಲ್ಕು ಪ್ರೇಮಗೀತೆಗಳಿದ್ದು, ನಾಲ್ಕು ಹಾಡುಗಳನ್ನು ಬಿಳುಪು, ನೀಲಿ, ಕೆಂಪು ಹಾಗೂ ಹಸಿರು ನಾಲ್ಕು ಬಣ್ಣಗಳು ಪ್ರತಿನಿಧಿಸುತ್ತದೆ. ಎಲ್ಲಾ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನೇ ನಾಲ್ಕು ಹಾಡುಗಳನ್ನು ಬರೆದಿದ್ದೇನೆ. ನಾಲ್ಕು ಹಾಡುಗಳಿಗೂ ನಾಲ್ಕು ಹೆಸರಾಂತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕ - ಗಾಯಕಿಯರು ಹಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ʼನೀ ಹೋದ ಮೇಲೆʼ ಹಾಡನ್ನು ವಾಸುಕಿ ವೈಭವ್ ಸುಮಧುರವಾಗಿ ಹಾಡಿದ್ದು, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಹೆಸರಾಂತ ಆಯುರ್ವೇದ ವೈದ್ಯ ಗಿರಿಧರ ಕಜೆ ಅವರ ಕುಟುಂಬದ ಸದಸ್ಯ ಸಂಜನ್ ಕಜೆ ಹಾಗೂ ಅಂಜಲಿ ಗೌಡ ಅಭಿನಯಿಸಿದ್ದಾರೆ ಎಂದು ಯೋಗರಾಜ್ ಭಟ್ ತಿಳಿಸಿದರು.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಜಯಂತ ಕಾಯ್ಕಿಣಿ ಅವರು, ಪ್ರೇಮಗೀತೆಗಳಲ್ಲಿ ಜನಪ್ರಿಯವಾಗಿರುವುದು ಹೆಚ್ಚಾಗಿ ಪ್ರೀತಿ ಕೈ ಕೊಟ್ಟಾಗ ಬಂದಿರುವ ಗೀತೆಗಳು. ಅಂತಹ ಗೀತೆಗಳನ್ನು ಯೋಗರಾಜ್ ಭಟ್ ಅವರು ಬಹಳ ಚೆನ್ನಾಗಿ ಬರೆಯುತ್ತಾರೆ. ಅಂತಹ ಸಾಲಿಗೆ ಈ ಹಾಡು ಕೂಡ ಸೇರಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ, ವಾಸುಕಿ ವೈಭವ್ ಗಾಯಕ ಹಾಡಿಗೆ ಪೂರಕವಾಗಿದೆ. ಕಲಾವಿದರ ಅಭಿನಯ ಕೂಡ ಚೆನ್ನಾಗಿದೆ. ನಾಲ್ಕು ಹಾಡುಗಳನ್ನು ನಾಲ್ಕು ಬಣ್ಣಗಳು ಪ್ರತಿನಿಧಿಸಿರುವುದು ವಿಶೇಷ ಎಂದರು.
ಯೋಗರಾಜ್ ಭಟ್ ಅವರು ಬರೆದ ಹಾಡನ್ನು ಹಾಡುವುದಕ್ಕೆ ನನಗೆ ಬಹಳ ಖುಷಿಯಾಗುತ್ತದೆ. ಈ ಹಾಡು ಕೂಡ ಮಧುರವಾಗಿದೆ ಎಂದು ಗಾಯಕ ವಾಸುಕಿ ವೈಭವ್ ತಿಳಿಸಿದರು. ಯೋಗರಾಜ್ ಭಟ್ ಅವರ ಸಾಹಿತ್ಯದಲ್ಲಿ, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಹಾಗೂ ವಾಸುಕಿ ವೈಭವ್ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಅಭಿನಯಿಸಿದ್ದು ಬಹಳ ಸಂತೋಷವಾಗಿದೆ ಎಂದರು ನಟ ಸಂಜನ್ ಕಜೆ.
ಈ ಸುದ್ದಿಯನ್ನೂ ಓದಿ | Monsoon Nail Art 2025: ಈ ಸೀಸನ್‌ನಲ್ಲಿ ಟ್ರೆಂಡಿಯಾದ ಮಾನ್ಸೂನ್ ನೇಲ್ ಆರ್ಟ್‌ಗಳಿವು!
ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಹಾಡಿನ ಕುರಿತು ಮಾತನಾಡಿದರು. ಗಡ್ಡ ವಿಜಿ, ʼಬೆಂಗಳೂರು ಕೆಫೆʼ ಶಿವಾನಂದ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರೇಣುಕಾ ಯೋಗರಾಜ್ ಭಟ್, ಶ್ರೀನಿಧಿ ದರ್ಬೆ, ಶಿಲ್ಪ ಪ್ರಸನ್ನ ಅವರು ʼಮತ್ತೆ ಮೊದಲಿಂದʼ ಗೀತಗುಚ್ಛವನ್ನು ನಿರ್ಮಾಣ ಮಾಡಿದ್ದಾರೆ.