ಎಚ್.ಆನಂದರಾಮ ಶಾಸ್ತ್ರಿ
ಅಮ್ಮಾ, ಜಾನಕಿ ಅಮ್ಮಾ, ನಿಮ್ಮ ಕೋಕಿಲ ಕಂಠ ದಿಂದುಕ್ಕಿ ಹರಿದ ಗಾನಸುಧೆಯನ್ನುಂಡು ಬೆಳೆದ ವನು ನಾನಮ್ಮಾ. ಜಗವೆಂದರೇನೆಂದು ತಿಳಿಯದ ವಯಸ್ಸಿನ ನನಗೆ ಗೀತ-ಸಂಗೀತದ ಸೊಬಗನ್ನು ಶ್ರುತಪಡಿಸಿ, ಜೀವನದರಿವೆಂಬ ಸಂಗೀತಾಧ್ಯ ಯನಕ್ಕೆ ನನಗೆ ಶ್ರುತಿಯಾಗಿ ನನ್ನ ಬಾಳನ್ನು ಬಂಧುರ ಗೊಳಿಸಿರುವ ಆತ್ಮ ಬಂಧು ನೀವು. ಜೀವನ ವ್ಯವಹಾರಗಳ ಜೊತೆಯ, ಮೈಯೆಲ್ಲ ಕಿವಿಯಾಗಿ ನಿಮ್ಮ ಹಾಡುಗಾರಿಕೆ ಆಲಿಸುತ್ತ, ಮೈಯೆಲ್ಲ ಹೃದಯವಾಗಿ ನಿಮ್ಮ ಮಧುರಗಾನದ ಸೊಗವನ್ನನು ಭವಿಸುತ್ತ ಬೆಳೆದವನು ನಾನು.
ನನ್ನ ಕೀರಲು ಕಂಠದಲ್ಲಿ ಅತ್ಯುತ್ಸಾಹದಿಂದ ನಿಮ್ಮ ಗಾಯನದ ಸಾಲುಗಳನ್ನು ಗುನುಗಿ, ಕೇಳಿದವರು ತಮಾಷೆ ಮಾಡಿದಾಗ ಒಂದು ರೀತಿ ಪುಳಕಗೊಂಡು, ಅದೇ ವೇಳೆ, ಅವರು ನಿಮ್ಮ ಬಗ್ಗೆ ಮೆಚ್ಚುಗೆಯ ಮಾತಾಡಿದಾಗ, ಅವರೂ ನಿಮ್ಮ ಹಾಡುಗಳನ್ನು ಗುನುಗತೊಡಗಿದಾಗ, ‘ಅಮ್ಮಾ, ನನ್ನಮ್ಮಾ’ ಎಂದು ನಿಮ್ಮೊಳಿತು ಹಾರೈಸಿ ಈ ನನ್ನ ಅದೃಷ್ಟಶಾಲಿ ಕಿವಿಗಳ ಮೇಲ್ಗಡೆ ಲಟಿಕೆ ಮುರಿದವನು ನಾನು! ಅಮ್ಮಾ, ನನ್ನ ಹೃದಯದ ವೀಣೆ ಮೀಟಿ ಹರಸಿದ ಸ್ವರಧಾರಿಣಿ ನೀವು.
ಇದನ್ನೂ ಓದಿ: S Janaki: ದಕ್ಷಿಣ ಭಾರತದ ಗಾನ ಕೋಗಿಲೆ ಎಸ್ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?
ನನ್ನೊಳಗಿನ ಸಂಗೀತದಾಸೆ ತಂತಿಯ ತಾನವಾದ ನಾದವಾಹಿನಿ ನೀವು. ನನ್ನ ಮನದ ಮಂದಿರದೆ ನೆಲಸಿಹ ಕಲೆವಾಣಿ ನೀವು. ನಿಮ್ಮ ಗಾಯನದ ಹೊಸ ಹೊಸ ಭಾವ, ಕುಣಿಸುತ ಜೀವ, ಮರೆಸುತ ನೋವ, ವಾತ್ಸಲ್ಯವ ತುಂಬಿ, ಅಗೋ ಮರದ ಮೇಲಿರುವ ಆ ಕೋಗಿಲೆಯ ಹಾಡನ್ನೂ ನನ್ನ ಪಾಲಿಗೆ ಮಂಕುಗೊಳಿಸಿದೆಯೆಂದರೆ ನಂಬುವಿರಾ? ಬರೆದಿರಿ ನೀವು ನಿಮ್ಮ ಹೆಸರ ನನ್ನ ಹೃದಯ ಪುಟದಲಿ, ಬಂದು ನಿಂತಿರಿ ಹೇಮಪುತ್ಥಳಿಯಾಗಿ ನನ್ನ ಮನದ ಗುಡಿಯಲಿ.
ಅಮ್ಮಾ, ಸಕಲ ಜಾನಪದರೊಲವಿನ ಜಾನಕಮ್ಮಾ, ಬಾನಲ್ಲು ನೀವೇ, ಭುವಿಯಲ್ಲು ನೀವೇ, ಎಲ್ಲೂ ನೀವೇ, ಸಂಗೀತದೊಲವಿನ ನನ್ನಲ್ಲೂ ನೀವೇ. ಆಕಾಶದೀಪವು ನೀವು; ಊಹೂ, ಆಕಾಶ ತಾರೆಯು ನೀವು. ನಿಮ್ಮ ಗಾಯನ ಕೇಳಿದಾಗ ಸಂತೋಷವೇನು! ‘ಆನಂದ’ ರಾಮನೇ ನಾನು!
ಅಮ್ಮಾ, ನಿಮಗೆ ಗೊತ್ತೆ? ನಿಮ್ಮ ಹಾಡುಗಳ ಮೇಲಣ ಪ್ರೀತಿಯಿಂದ, ನಿಮ್ಮ ಮೇಲಣ ಅಭಿಮಾನ ದಿಂದ ಅದೆಷ್ಟೋ ತಾಯಿತಂದೆಯರು ತಮ್ಮ ಮಕ್ಕಳಿಗೆ ‘ಜಾನಕಿ’ ಎಂದು ಹೆಸರಿಟ್ಟಿದ್ದಾರೆ!
ನಿಮಗೆ ಗೊತ್ತೆ? ಇಂದಿಗೂ ಅನೇಕ ಕಡೆಗಳಲ್ಲಿ ಮದುವೆ ಮಂಟಪದಲ್ಲಿ ನಿಮ್ಮ, ’ಮಂಗಳದಾ ಈ ಸುದಿನ ಮಧುರವಾಗಲಿ, ಹಾಡಿನ ರೆಕಾರ್ಡನ್ನು ಮೇಲಿಂದ ಮೇಲೆ ಹಾಕುತ್ತಾರೆ! ಪ್ರತಿ ಯುಗಾದಿ ಯಂದು ರೇಡಿಯೋದ ಕನ್ನಡವಾಹಿನಿಗಳಲ್ಲಿ ನಿಮ್ಮ ’ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡು ಪ್ರಸಾರವಾಗದಿದ್ದರೆ ಅದು ವಾಹಿನಿಯೇ ಅಲ್ಲ! ಅಂದು ಆ ಹಾಡು ನಮ್ಮ ಕಿವಿಗೆ ಬೀಳದಿದ್ದರೆ ಅದು ಯುಗಾದಿಯೇ ಅಲ್ಲ! ನಿಮ್ಮ ಗಾಯನದಲ್ಲಿನ ಆ ಸ್ವರಶುದ್ಧಿ, ಭಾಷಾ ಶುದ್ಧಿ, ಉಚ್ಚಾರಶುದ್ಧಿ, ಆ ತನ್ಮಯತೆ, ಓಹ್! ಅದೊಂದು ತಪಸ್ಸಿನ ಫಲ.
ಇಂಥ ತಪೋನಿಧಿಯಾದ ನೀವು ಶುಭ್ರ ಶ್ವೇತವಸನಧಾರಿಯಾದ ತಪೋಧನರಾಗಿದ್ದಾಗ್ಯೂ, ನನ್ನ ಪಾಲಿಗೆ ನೀವು ಗಾಯನ ಸರಸ್ವತಿಯೇ. ಈ ಗಾಯನ ಸರಸ್ವತಿಗೆ ಕಿರೀಟ ಪ್ರಾಯವಾಗಿದೆ ಅದೋ, ಆ ಸದ್ಗುಣಶೀಲ, ಆ ಹಸನ್ಮುಖ, ಆ ವಾತ್ಸಲ್ಯಭಾವ, ಆ ವಿನಯವಂತಿಕೆ, ಆ ನಿಷ್ಕಪಟ, ಮುಗ್ಧಮನ, ಆ ಭಕ್ತಿಸ್ರೋತ. ಅಮ್ಮಾ, ನೀವು ದೈವಸಮಾನ!
ಸಂಗೀತವು ದೈವಿಕವೆಂಬುದು ಸತ್ಯ. ನೀವೇ ನಿದರ್ಶನ. ಇಬ್ಬರು ತಾಯಂದಿರನ್ನು ಪಡೆದಿರುವ ಭಾಗ್ಯವಂತ ನಾನಮ್ಮಾ. ನನ್ನ ‘ಹಡೆದ’ ತಾಯಿ- ದೇವರ ಜೊತೆಗೆ ನಾನು ‘ಪಡೆದ’ ತಾಯಿದೇವರು ನೀವು. ’ತಾಯೆ ಬಾರ, ಭಾವಸಿರಿಯ ತೋರ, ಎನ್ನೆದೆ ಮಿಡಿದ ಮಾತೆಯೇ’ ಎಂದು ಅನವರತ ಹಂಬಲಿಸುವವನು ನಾನು.
ನಾನು ನಿಮ್ಮ ಕರುಳ ಕಂದನಲ್ಲದಿದ್ದರೇನಂತೆ, ನೀವು ನಿಮ್ಮ ಸಿರಿಕಂಠ ದಿಂದುಣಬಡಿಸುತ್ತಿರುವ ಗಾನಸುಧೆಯನ್ನು ಯಥೇಚ್ಛ ಸವಿಯುತ್ತಿರುವ ನಿಮ್ಮ ಕೊರಳ ಕಂದ ನಾನು. ನನ್ನ ಹೃದಯದಿಂದ ಬಂದ ನುಡಿಗಳಿವು. ಅಮ್ಮಾ, ನಾನು ಪುಣ್ಯವಂತ. ಅಮ್ಮಾ, ನಿಮ್ಮ ಹಾಡಿನ ದೋಣಿ ಸಾಗಲಿ, ಮುಂದೆ ಹೋಗಲಿ, ನಮ್ಮನ್ನೆಲ್ಲ ಹೀಗೇ ಸಂಗೀತಸ್ವರ್ಗದ ತೀರಕ್ಕೆ ಕೊಂಡೊಯ್ದು ಸೇರಿಸುತ್ತಲೇ ಇರಲಿ.