ಇಡೀ ದೇಶವೇ ಮಾರ್ಚ್ 19ರಂದು ಧುರಂಧರ್ 2 ಸಿನಿಮಾದ ಗುಂಗಿನಲ್ಲಿತ್ತು. ಧುರಂಧರ್ 2 ಎದುರು ಬರಲಾಗದೇ ಒಂದಷ್ಟು ಸಿನಿಮಾಗಳು ಪೋಸ್ಟ್‌ಪೋನ್ ಆಗಿದ್ದವು. ಆದರೆ ಮಾರ್ಚ್ 19ರಂದೇ ತೆರೆಕಂಡು ಈ ವರ್ಷದ ಟಾಪ್ ತಮಿಳು ಸಿನಿಮಾಗಳಲ್ಲಿ ಒಂದಾಗಿದೆ ʻಯೂತ್ʼ ಚಿತ್ರ! ಇದರ ಹೀರೋ ಕಮ್ ನಿರ್ದೇಶಕ ಕೆನ್ ಕರುಣಾಸ್‌ಗೆ ಬರೀ 24 ವರ್ಷ. ತಮ್ಮ ಮೊದಲ ಯತ್ನದಲ್ಲೇ ದೊಡ್ಡದೊಂದು ಹಿಟ್ ಸಿನಿಮಾವನ್ನು ಸಿನಿಪ್ರಿಯರ ಮಡಿಲಿಗೆ ಹಾಕಿದ್ದಾರೆ ಕೆನ್.
ಯಾರು ಈ ಕೆನ್ ಕರುಣಾಸ್!
24 ವರ್ಷದ ಈ ಕೆನ್ ಕರುಣಾಸ್! ಸದ್ಯ ಕಾಲಿವುಡ್‌ನ ಸೆನ್ಸೇಷನ್! ತಮ್ಮ ಮೊದಲ 'ಯೂತ್' ಚಿತ್ರವನ್ನ ನಿರ್ದೇಶಿಸಿ, ನಟಿಸಿ, ಅದನ್ನು ಯಶಸ್ವಿಗೊಳಿಸುವ ಮೂಲಕ ತಾವೊಬ್ಬ ಸಮರ್ಥ ನಿರ್ದೇಶಕ ಎಂದು ಸಾಬೀತುಪಡಿಸಿದ್ದಾರೆ. ಯಶಸ್ವಿ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಕೆನ್ ತಂದೆ ಕರುಣಾಸ್ ಖ್ಯಾತ ನಟ ಮತ್ತು ರಾಜಕಾರಣಿ, ತಾಯಿ ಗ್ರೇಸ್ ಗಾಯಕಿ ಮತ್ತು ಕಿರುತೆರೆ ನಟಿ. 'ನೆಪೋ ಕಿಡ್' ಎಂಬ ಪಟ್ಟ ಹೊತ್ತಿದ್ದರೂ, ಕೆನ್‌ಗೆ ಯಾವುದೂ ಸುಲಭವಾಗಿ ದಕ್ಕಲಿಲ್ಲ. 12ನೇ ವಯಸ್ಸಿನಲ್ಲಿ ಬಾಲನಟನಾಗಿ 'ರಗಳೈಪುರಂ' ಚಿತ್ರದ ಮೂಲಕ ಆರಂಭವಾದ ಕೆನ್ ವೃತ್ತಿ ಬದುಕು ಸಕ್ಸಸ್ ಆಗಿದ್ದು ಅಸುರನ್ ಮೂಲಕ. ನಿರ್ದೇಶಕ ವೆಟ್ರಿಮಾರನ್ ಅವರು ಕೆನ್ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ 'ಅಸುರನ್' ಚಿತ್ರದಲ್ಲಿ ಧನುಷ್ ಮಗ 'ಚಿದಂಬರಂ' ಪಾತ್ರ ನೀಡಿದರು. ಅದು ಕೆನ್‌ಗೆ ದೊಡ್ಡ ಹೆಸರು ತಂದುಕೊಟ್ಟಿತು.
ಅಲ್ಲಿಂದ ನಟ ಧನುಷ್ ಅವರ ಒಡನಾಟ ಶುರುವಾಯಿತು. ಅಸುರನ್‌ನಲ್ಲಿ ಕೆನ್ ನಟಿಸುವುದು ಧನುಷ್‌ಗೆ ಇಷ್ಟವಿರಲಿಲ್ಲ. ಪಾತ್ರಕ್ಕೆ ಹೊಂದುವುದಿಲ್ಲ ಎಂಬ ಆತಂಕ ಅವರಿಗೆ ಇತ್ತು. ಆದರೆ ಶೂಟಿಂಗ್‌ನ ಮೊದಲ ದಿನವೇ ಕೆನ್ ನಟನೆ ನೋಡಿ ತನ್ನ ನಿರ್ಧಾರ ತಪ್ಪು ಎಂದು ಧನುಷ್‌ಗೆ ಅರ್ಥವಾಗಿತ್ತು. ನಂತರ ಧನುಷ್ ಅವರ 'ತಿರುಚಿಟ್ರಾಂಬಲಂ', 'ವಾತಿ', ʻರಾಯನ್ʼ ಚಿತ್ರಗಳಲ್ಲಿ ಧನುಷ್ ಜೊತೆ ಸಹಾಯಕನಾಗಿ ಕೆಲಸ ಮಾಡಿ, ಚಿತ್ರ ನಿರ್ಮಾಣದ ಸೂಕ್ಷ್ಮಗಳನ್ನು ಕೆನ್ ಕಲಿತರು. ಆಗ ಶುರುವಾಗಿದ್ದೆ ಯೂತ್. ತಮ್ಮ 20ರ ಹರೆಯದಲ್ಲೇ 'ಯೂತ್' ಚಿತ್ರದ ಸ್ಕ್ರಿಪ್ಟ್ ಹಿಡಿದು ಹಲವು ನಿರ್ಮಾಣ ಸಂಸ್ಥೆಗಳ ಬಾಗಿಲು ತಟ್ಟಿದರೂ ಅವರಿಗೆ ತಿರಸ್ಕಾರವೇ ಸಿಕ್ಕಿತ್ತು ಕೊನೆಗೆ ಯುವ ನಿರ್ಮಾಪಕ ಕರುಪ್ಪಯ್ಯ ಅವರ ಬೆಂಬಲದೊಂದಿಗೆ ಯೂತ್ ಸಿನಿಮಾ ಆಗಿದೆ.
ಅಂದು 50 ರೂ. ಕೂಡ ಇರಲಿಲ್ಲ!
ನಿರ್ಮಾಪಕ ಕರುಪ್ಪಯ್ಯ ಜೊತೆ ಯೂತ್ ಸಿನಿಮಾ ಮಾಡುವುದು ಖಚಿತವಾಗಿತ್ತು. ಸರಿ, ಒಟ್ಟಿಗೆ ಸಿನಿಮಾ ಮಾಡುವು ಒಪ್ಪಂದವಾಗಿದೆ, ಅದೇ ಖುಷಿಗೆ ಒಂದು ಟೀ ಕುಡಿಯೋಣ ಅಂತ ಇಬ್ಬರು ಶಾಪ್‌ಗೆ ಹೋಗಿ ಟೀ ಕುಡಿದಿದ್ದಾರೆ. ಆದರೆ ಅದರ 50 ರೂ. ಕೊಡಲು ಕರುಪ್ಪಯ್ಯ ಖಾತೆಯಲ್ಲಿ 50 ರೂ. ಇರಲಿಲ್ಲವಂತೆ. ಆದರೂ ಸಿನಿಮಾ ಮಾಡುವ ಅದಮ್ಯ ಉತ್ಸಾಹ ಅವರಲ್ಲಿತ್ತು. ಆನಂತರ ಹಾಗೋ ಹೀಗೋ ಮಾಡಿ ಕಾಸು ಹೊಂದಿಸಿದ್ದಾರೆ. ಹಣವಿಲ್ಲದಿದ್ದರೂ ಕೆನ್ ಮೇಲೆ ನಂಬಿಕೆ ಇಟ್ಟು ಕರುಪ್ಪಯ್ಯ ಕೋಟ್ಯಂತರ ರೂಪಾಯಿ ಜೋಡಿಸಿ ಯೂತ್ ಸಿನಿಮಾ ಮಾಡಿದ್ದಾರೆ. ಇಂದು ಯೂತ್ ಚಿತ್ರವು ವಿಶ್ವಾದ್ಯಂತ 50 ಕೋಟಿ ರೂ. ಬಾಚಿಕೊಂಡಿದೆ. ಚಿತ್ರದ ಗೆಲುವಿನಲ್ಲಿ ಹಾಡುಗಳದ್ದು ದೊಡ್ಡ ಪಾಲು ಇದೆ. ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ಅವರು ಒಂದು ರೂಪಾಯಿ ಪಡೆಯದೇ ಈ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿರುವುದು ವಿಶೇಷ.
50 ಕೋಟಿ ರೂ. ಕಲೆಕ್ಷನ್ ಬಗ್ಗೆ ಪೋಸ್ಟ್
ಸದ್ಯ ಕೆನ್‌ಗೆ ದೊಡ್ಡದೊಂದು ಗೆಲುವು ಸಿಕ್ಕಿದೆ. ತಮ್ಮ ನಂಬಿಕೆ ಮೇಲೆ ಇಟ್ಟ ನಿರ್ಮಾಪಕರು, ಧನುಷ್, ವೆಟ್ರಿಮಾರನ್ ಮತ್ತು ಸ್ನೇಹಿತರ ನಂಬಿಕೆಯನ್ನು ಕೆನ್ ಉಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೊಳ್ಳೆಯ ಸಿನಿಮಾಗಳು ತೆರೆಗೆ ಬರಲಿದೆ ಎಂಬುದು ಸಿನಿಪ್ರಿಯರ ಹಾರೈಕೆ.