ಚೆನ್ನೈ, ನ. 8: ಉದಯೋನ್ಮಖ ನಟಿ ಗೌರಿ ಕಿಶನ್ (Gouri Kishan) ಬಗ್ಗೆ ಕೇಳಬಾರದ ಪ್ರಶ್ನೆ ಕೇಳಿ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಮಿಳು ಯೂಟ್ಯೂಬರ್ ಆರ್.ಎಸ್. ಕಾರ್ತಿಕ್ (R.S. Karthik) ಕೊನೆಗೂ ಕ್ಷಮೆ ಕೋರಿದ್ದಾರೆ. ಮಲಯಾಳಂ ಮೂಲದ ಬಹುಭಾಷಾ ನಟಿ ಗೌರಿ ಕಿಶನ್ ತೂಕದ ಬಗ್ಗೆ ಮಾತಾನಾಡಿ ವಿವಾದ ಹುಟ್ಟುಹಾಕಿದ್ದ ಕಾರ್ತಿಕ್ ಇದೀಗ ಕ್ಷಮೆ ಕೋರುವ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಫುಲ್ ಸ್ಟಾಪ್ ಇಡಲು ಮುಂದಾಗಿದ್ದಾರೆ. ಚೆನ್ನೈಯಲ್ಲಿ ʼಅದರ್ಸ್ʼ ತಮಿಳು ಚಿತ್ರದ (Others Tamil Movie) ಪ್ರಮೋಷನ್ ವೇಳೆ ನಡೆಸುತ್ತಿದ್ದ ಗೌರಿ ಕಿಶನ್ ತೂಕದ ಬಗ್ಗೆ ನಾಯಕ ಆದಿತ್ಯ ಮಾಧವನ್ ಬಳಿ ಕಾರ್ತಿಕ್ ಪ್ರಶ್ನೆ ಕೇಳಿದ್ದರು. ಕಾರ್ತಿಕ್ ಕೇಳಿದ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೆ ಗೌರಿ ಕೂಡ ಇದನ್ನು ವಿರೋಧಿಸಿ ಪೋಸ್ಟ್ ಶೇರ್ ಮಾಡಿದ್ದರು. ಇದೀಗ ಕಾರ್ತಿಕ್ ಮಂಡಿಯೂರಿದ್ದು, ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ಜತೆಗೆ ತಮ್ಮ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ಚಿತ್ರತಂಡ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕಾರ್ತಿಕ್ ನಟ ಆದಿತ್ಯ ಮಾಧವನ್ ಬಳಿ, ʼʼದೃಶ್ಯವೊಂದರಲ್ಲಿ ನೀವು ನಟಿ ಗೌರಿ ಅವರನ್ನು ಎತ್ತಿಕೊಳ್ಳುತ್ತೀರಿ. ಅವರು ಎಷ್ಟು ತೂಕ ಇದ್ದಾರೆ?ʼʼ ಎಂದು ಪ್ರಶ್ನಿಸುವ ಮೂಲಕ ಮುಜುಗರ ಉಂಟು ಮಾಡಿದ್ದರು.
ಈ ಸುದ್ದಿಯನ್ನೂ ಓದಿ: The Girlfriend Collection: ʼದಿ ಗರ್ಲ್‌ಫ್ರೆಂಡ್ʼ ಆಗಿ ಗಮನ ಸೆಳೆದ ರಶ್ಮಿಕಾ ಮಂದಣ್ಣ; ಮೊದಲ ದಿನ ಚಿತ್ರ ಗಳಿಸಿದ್ದೆಷ್ಟು?
ಸಿಡಿದೆದ್ದ ನಟಿ
ಕಾರ್ತಿಕ್ ಅವರ ಈ ಪ್ರಶ್ನೆ ಹಲವರಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇದು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಎಂದು ಕೆಲವರು ಕಿಡಿಕಾರಿದ್ದರು. ಅಲ್ಲದೆ ಸ್ವತಃ ಗೌರಿ ಕೂಡ ಕಾರ್ತಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಗೌರಿ, "ದೇಹದ ತೂಕದ ಬಗ್ಗೆ ಪ್ರಶ್ನೆ ಕೇಳುವುದೆಂದರೆ ಅದು ವ್ಯಕ್ತಿತ್ವವನ್ನು ಅಣಕಿಸಿದಂತೆ. ನೀವು ಒಬ್ಬ ನಟನಿಗೆ ಅದೇ ಪ್ರಶ್ನೆಯನ್ನು ಕೇಳುತ್ತೀರಾ? ನನ್ನ ಪಾತ್ರ ಅಥವಾ ಅದಕ್ಕೆ ಕೈಗೊಂಡ ಸಿದ್ಧತೆಯ ಬಗ್ಗೆ ಕೇಳದೆ ನನ್ನ ತೂಕದ ಬಗ್ಗೆ ಕೇಳಿದ್ದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಗೌರಿ ಕಿಶನ್ ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬೆಂಬಲ ಸಿಕ್ಕಿತ್ತು.
ಬೆಂಬಲಕ್ಕ ಧಾವಿಸಿದ ಸೆಲೆಬ್ರಿಟಿಗಳು
ಅನೇಕ ಕಲಾವಿದರು, ಸೆಲೆಬ್ರಿಟಿಗಳು ಗೌರಿ ಅವರಿಗೆ ಬೆಂಬಲ ಸೂಚಿಸಿ ಪೋಸ್ಟ್ ಹಂಚಿಕೊಂಡಿದ್ದರು. ಕಾಲಿವುಡ್‌ನ ರಾಧಿಕಾ ಶರತ್‌ಕುಮಾರ್, ಚಿನ್ಮಯಿ, ರಾ. ರಂಜಿತ್, ಖುಷ್ಬೂ, ಕವಿನ್ ಮತ್ತಿತರರು ಗೌರಿ ನೆರವಿಗೆ ಧಾವಿಸಿದ್ದರು. ಅದಾದ ಬಳಿಕ ಪ್ರತಿಕ್ರಿಯಿಸಿದ ಗೌರಿ ತಮ್ಮ ಬೆಂಬಲಕ್ಕೆ ಬಂದ ಎಲ್ಲರಿಗೂ ಧನ್ಯವಾದ ತಿಳಿಸಿ, ಯೂಟ್ಯೂಬರ್‌ನನ್ನು ಟೀಕಿಸದಂತೆ ಮನವಿ ಮಾಡಿದ್ದರು.
ಆರ್.ಎಸ್. ಕಾರ್ತಿಕ್ ಕ್ಷಮೆ ಕೋರಿದ ವಿಡಿಯೊ:
ಕಾರ್ತಿಕ್ ಹೇಳಿದ್ದೇನು?
ಇದೀಗ ಯೂಟ್ಯೂಬರ್ ಕಾರ್ತಿಕ್ ಕ್ಷಮೆ ಕೋರಿ ವಿಡಿಯೊ ಪೋಸ್ಟ್ ಮಾಡಿದ್ದಾರೆ. ʼʼಕೆಲವು ದಿನಗಳಿಂದ ಉಂಟಾದ ವಿವಾದದಿಂದ ನೊಂದಿದ್ದೇನೆ. ನಾನು ತಮಾಷೆಗಾಗಿ ಕೇಳಿದ ಪ್ರಶ್ನೆಯನ್ನು ಗೌರಿ ಕಿಶನ್ ಅಪಾರ್ಥ ಮಾಡಿಕೊಂಡಿದ್ದಾರೆ. ಬಾಡಿ ಶೇಮಿಂಗ್ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಒಂದುವೇಳೆ ನನ್ನಿಂದ ಅವರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಆ ಪ್ರಶ್ನೆ ಕೇಳುವ ಹಿಂದೆ ಬೇರೆ ಯಾವುದೇ ಉದ್ದೇಶವಿರಲಿಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಪ ಪಡಿಸುತ್ತೇನೆ. ಸಾರಿʼʼ ಎಂದು ಹೇಳಿದ್ದಾರೆ. ಆ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Rukmini Vasanth: ಕಾಂತಾರ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಚೀಟಿಂಗ್! ಸೈಬರ್ ವಂಚನೆ ಬಗ್ಗೆ ಕನಕವತಿ ಎಚ್ಚರಿಕೆ
2018ರಲ್ಲಿ ತೆರೆಕಂಡ ʼ96ʼ ತಮಿಳು ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ನಟಿ ಗೌರಿ ಇದುವರೆಗೆ ಮಲಯಾಳಂ, ತೆಲುಗು ಸಿನಿಮಾಗಳಲ್ಲಿ, ವೆಬ್ ಸೀರೀಸ್‌ಗಳಲ್ಲಿ ಅಭಿನಯಿಸಿದ್ದಾರೆ. ಅವರ ʼಅದರ್ಸ್ʼ ತಮಿಳು ಚಿತ್ರ ನವೆಂಬರ್ 7ರಂದು ತೆರೆಕಂಡಿದೆ.