ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yuddhakaanda Review: ʼಯುದ್ಧಕಾಂಡʼ ಸಿನಿ ವಿಮರ್ಶೆ: ನ್ಯಾಯವಾದಿಯಾಗಿ ಗೆದ್ದ ಅಜೇಯ್ ರಾವ್

ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣ ಎಂದೇ ಪರಿಚಿತರಾದ ಅಜೇಯ್‌ ರಾವ್‌ ನಿರ್ಮಿಸಿ, ನಟಿಸಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಯುದ್ಧಕಾಂಡʼ ತೆರೆಕಂಡಿದೆ. ನಿರ್ದೇಶಕ ಪವನ್‌ ಭಟ್‌ ಈ ಚಿತ್ರದಲ್ಲಿ ಪ್ರಸ್ತುತ ಸಮಾಜ ಎದುರಿಸುತ್ತಿರವ ಗಂಭೀರ ಸಮಸ್ಯೆಯತ್ತ ಬೆಳಕು ಚೆಲ್ಲಿದ್ದಾರೆ. ಹಾಗಾದರೆ ಈ ಚಿತ್ರ ಹೇಗಿದೆ ಎನ್ನುವುದನ್ನು ತಿಳಿಯಲು ವಿಮರ್ಶೆ ಓದಿ.

'ಯುದ್ಧಕಾಂಡʼ ಸಿನಿ ವಿಮರ್ಶೆ: ನ್ಯಾಯವಾದಿಯಾಗಿ ಗೆದ್ದ ಅಜೇಯ್ ರಾವ್

ʼಯುದ್ಧಕಾಂಡʼ ಚಿತ್ರದ ಪೋಸ್ಟರ್‌.

Profile Ramesh B Apr 18, 2025 6:43 PM

-ಪ್ರಶಾಂತ್

ಚಿತ್ರ: ʼಯುದ್ಧಕಾಂಡʼ

ನಿರ್ದೇಶನ: ಪವನ್ ಭಟ್

ನಿರ್ಮಾಣ: ಅಜೇಯ್ ರಾವ್

ತಾರಾಗಣ: ಅಜೇಯ್ ರಾವ್, ಅರ್ಚನಾ ಜೋಯಿಸ್,‌ ಪ್ರಕಾಶ್ ಬೆಳವಾಡಿ ಮುಂತಾದವರು.

ಬೆಂಗಳೂರು: ಈ ಹಿಂದಿನ‌ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ಅಜೇಯ್ ರಾವ್ (Ajay Rao) ಈಗ ಕರಿ ಕೋಟು ತೊಟ್ಟು ವಕೀಲರಾಗಿ ಮಿಂಚಿದ್ದಾರೆ (Yuddhakaanda Review). ಯುದ್ಧಕಾಂಡ ಹೊಕ್ಕು ಪಾಂಚಜನ್ಯ ಮೊಳಗಿಸಿದ್ದು, ಅನ್ಯಾಯಕ್ಕೊಳಗಾದ ಮಹಿಳೆಯರ ಪರ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ಆತ ಅಜೇಯ್. ಬಡತನದಲ್ಲಿಯೇ ಬೆಳೆದು ಎಲ್‌ಎಲ್‌ಬಿ ಮುಗಿಸಿ ವಕೀಲನಾಗಿ ವೃತ್ತಿ ಆರಂಭಿಸುತ್ತಾನೆ. ದೊಡ್ಡ ಕೇಸ್‌‌ನಲ್ಲಿ ವಾದ ಮಾಡಿ ಗೆಲ್ಲಬೇಕು ಎಂದುಕೊಂಡ ಅಜೇಯ್‌ಗೆ ಸಿಗೋದು ಮಾತ್ರ ಸಣ್ಣಪುಟ್ಟ ಕೇಸ್. ಹೀಗಿರುವಾಗಲೇ ಒಮ್ಮೆ ಅಜೇಯ್ ಕೋರ್ಟ್‌‌ನಿಂದ ಹೊರಬರುವಾಗ ಘಟನೆಯೊಂದು‌ ನಡೆಯುತ್ತದೆ. ಕೋರ್ಟ್ ಆವರಣದಲ್ಲಿ ಅನ್ಯಾಯಕೊಳಗಾದ ನಿವೇದಿತಾ ಎನ್ನುವ ಮಹಿಳೆ ಉಗ್ರಾವತಾರ ತಾಳಿರುತ್ತಾಳೆ. ಅಷ್ಟಕ್ಕೂ ಆಕೆಗೆ ಆದ ಅನ್ಯಾಯ ಏನು, ಆಕೆಯ ಪರವಾಗಿ ಅಜೇಯ್ ಹೇಗೆ ನ್ಯಾಯಾಂಗ ಹೋರಾಟ ಮಾಡಿ ನ್ಯಾಯ ದೊರಕಿಸುತ್ತಾನೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ರವಿಚಂದ್ರನ್ ಅಭಿನಯದ 'ಯುದ್ಧಕಾಂಡ' ನೋಡಿ ಖುಷಿಪಟ್ಟ ಸಿನಿಪ್ರಿಯರು ಅದೇ ನಿರೀಕ್ಷೆಯಲ್ಲಿ ಹೊಸ ಯುದ್ಧಕಾಂಡ ನೋಡಲು ಹೋದರೆ ಇಲ್ಲಿ ಬೇರೆಯೇ ಅನುಭವ ಸಿಗುತ್ತದೆ. ರವಿಮಾಮನ ವಾದದ ವೈಖರಿಯೇ ಬೇರೆ. ಅಜೇಯ್ ರಾವ್ ವಾದದ ಶೈಲಿಯೇ ಬೇರೆ.

ನಿರ್ದೇಶಕ ಪವನ್ ಭಟ್ ಒಳ್ಳೆಯ ಕಥೆ ಹೆಣೆದಿದ್ದಾರೆ. ಅನ್ಯಾಯಕ್ಕೊಳಗಾದ ಮಹಿಳೆಯರ ಪರ ಹೋರಾಡುವ ಅಗತ್ಯ ಖಂಡಿತವಾಗಿಯೂ ಇದೆ. ಆದರೆ ಪವನ್ 302 ಹಾಗೂ 84 ಸೆಕ್ಷನ್‌‌ನಷ್ಟೇ ಇಲ್ಲಿ ಉಲ್ಲೇಖಿಸಿ ಅದರ ಸುತ್ತಲೇ ಕಥೆ ಗಿರಕಿ ಹೊಡೆಯುವಂತೆ ಮಾಡಿದ್ದಾರೆ. ಭಾರತದಲ್ಲಿ ನಡೆದ ಘಟನೆಗಳು, ಅದರ ಕುರಿತಾಗಿ ನ್ಯಾಯಾಲಯದ ತೀರ್ಪಿನ ಉಲ್ಲೇಖಗಳನ್ನು ಇಲ್ಲಿ ಹೇಳಬಹುದಿತ್ತು.

ಈ ಸುದ್ದಿಯನ್ನೂ ಓದಿ: Narayana Narayana Movie Review: ನಗಿಸುತ್ತಲೇ ಜೀವನ ದರ್ಶನ ಮಾಡಿಸುವ ʼನಾರಾಯಣ ನಾರಾಯಣʼ; ಹೇಗಿದೆ ಈ ಚಿತ್ರ?

ಅಜೇಯ್ ರಾವ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ‌. ನಿವೇದಿತಾಳಾಗಿ ಅರ್ಚನಾ ಜೋಯಿಸ್ ಅದ್ಭುತವಾಗಿ ನಟಿಸಿದ್ದಾರೆ. ಕ್ರಿಮಿನಲ್ ಲಾಯರ್ ಆಗಿ ಪ್ರಕಾಶ್ ಬೆಳವಾಡಿ ಮೆಚ್ಚುಗೆಯಾಗುತ್ತಾರೆ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಳನ‌ ಪಾತ್ರ ಆಟಕ್ಕುಂಟು ಲೆಕ್ಕಲ್ಲಿಲ್ಲ ಎನ್ನುವಂತಾಗಿದೆ. ಛಾಯಾಗ್ರಹಣ ಓಕೆ. ಹಿನ್ನೆಲೆ ಸಂಗೀತ ಇನ್ನಷ್ಟು ಚೆನ್ನಾಗಿರಬೇಕಿತ್ತು. ಚಿತ್ರದ ಹಾಡುಗಳಿಗೂ ಒಂದಷ್ಟು ಹೆಚ್ಚಿನ ಒತ್ತು ನೀಡಬಹುದಿತ್ತು. ಒಟ್ಟಾರೆ ʼಯುದ್ಧಕಾಂಡʼ ಚಿತ್ರವನ್ನು ಪ್ರಚಲಿತ ಕಾಡುವ ಕಥಾ ವಸ್ತುವಿನೊಂದಿಗೆ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಸಾಮಾಜಿಕ ಪರಿಣಾಮ ಬೀರುವ ಚಿತ್ರವಾಗಿ ಇದು ಗಮನ ಸೆಳೆಯುತ್ತದೆ.