ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Narayana Movie Review: ನಗಿಸುತ್ತಲೇ ಜೀವನ ದರ್ಶನ ಮಾಡಿಸುವ ʼನಾರಾಯಣ ನಾರಾಯಣʼ; ಹೇಗಿದೆ ಈ ಚಿತ್ರ?

Narayana Narayana Movie: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ತೆರೆಕಂಡ ಚಿತ್ರಗಳಲ್ಲಿ ʼನಾರಾಯಣ ನಾರಾಯಣʼ ಕೂಡ ಒಂದು. ಹೊಸಬರ ತಂಡ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಹಾಸ್ಯದ ಮೂಲಕವೇ ಜೀವನ ಸತ್ಯ ದರ್ಶನ ಮಾಡಿಸಲು ಮುಂದಾದ ಚಿತ್ರತಂಡ ತನ್ನ ಪ್ರಯತ್ನದಲ್ಲಿ ಯಶಸ್ವಿ ಆಗಿದ್ಯಾ? ಹೇಗಿದೆ ಚಿತ್ರ? ಇಲ್ಲಿದೆ ವಿವರ.

ಹೇಗಿದೆ ʼನಾರಾಯಣ ನಾರಾಯಣʼ ಚಿತ್ರ? ವಿಮರ್ಶೆ ಓದಿ

ʼನಾರಾಯಣ ನಾರಾಯಣʼ ಚಿತ್ರದ ಪೋಸ್ಟರ್‌. -

Ramesh B Ramesh B Mar 21, 2025 6:10 PM

-ರಮೇಶ್‌ ಬಳ್ಳಮೂಲೆ

ಚಿತ್ರ: ʼನಾರಾಯಣ ನಾರಾಯಣ'
ನಿರ್ದೇಶನ: ಶ್ರೀಕಾಂತ್‌ ಕೆಂಚಪ್ಪ
ನಿರ್ಮಾಣ: ಕೃಷ್ಣಪ್ಪ ಪಿ. ಮತ್ತು ಮಂಜುನಾಥ್‌ ಕೆ.
ತಾರಾಗಣ: ಪವನ್‌, ಕೀರ್ತಿ ಕೃಷ್ಣ, ದರ್ಶನ್‌ ಸೂರ್ಯ, ಪುನೀತ್‌ ಬಿ.ಎ., ರಘು ಭಟ್‌, ಗುರು ಕಿರಣ್‌, ಶಶಿಕಾಂತ್‌ ಗಟ್ಟಿ, ಬಿಂಬಿಕಾ ರಾವ್‌ ಮತ್ತಿತರರು
ಅವಧಿ: 123 ನಿಮಿಷ (2 ಗಂಟೆ 3 ನಿಮಿಷ)

ಬೆಂಗಳೂರು: ಅದು ಸುತ್ತ ಬೆಟ್ಟ, ನದಿ, ಹೊಲಗಳಿಂದ ಕೂಡಿದ ನಾರಾಯಣಪುರ ಎಂಬ ಸುಂದರ ಗ್ರಾಮ. ಅಲ್ಲಿ ಹರಿಯುವ ತಣ್ಣಗಿನ ನದಿಯಂತೆಯೇ ಪ್ರಶಾಂತವಾಗಿ ಮಲಗಿರುವ ಊರು. ಅಲ್ಲಿನವರೂ ಅಷ್ಟೇ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಾರೆ. ಆಗ ಆ ಊರಿಗೆ 12 ವರ್ಷಗಳ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಮಾಂತ್ರಿಕ ಬರುತ್ತಾನೆ. ಆ ಊರಿನಲ್ಲಿ ರಹಸ್ಯವಾಗಿ ಹುದುಗಿರುವ ನಿಧಿಯನ್ನು ಹೊರತೆಗೆಯಲು ಪೂಜೆಗೆ ತಯಾರಿ ನಡೆಸುತ್ತಾನೆ. ಅಲ್ಲಿಂದ ನಾರಾಯಣಪುರವೆಂಬ ಊರಿನ ಶಾಂತಿ, ಸಮಾಧಾನವೇ ಇಲ್ಲದಾಗುತ್ತದೆ. ಜತೆಗೆ ಊರಿನಲ್ಲಿ ಸಾಕ್ಷಾತ್‌ ಭಗವಂತ ಕೃಷ್ಣ ಕಾಣಿಸಿಕೊಳ್ಳುತ್ತಾನೆ-ಇದು ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡಿರುವ ʼನಾರಾಯಣ ನಾರಾಯಣʼ ಕಾಮಿಡಿ ಚಿತ್ರದ ಒಂದು ಝಲಕ್‌. ಹಾಗಾದರೆ ಚಿತ್ರ ಹೇಗಿದೆ? ಕೃಷ್ಣ ಯಾಕೆ ಆ ಊರಿನಲ್ಲಿ ಪ್ರತ್ಯಕ್ಷನಾಗುತ್ತಾನೆ? ಚಿತ್ರದಲ್ಲಿ ಕಾಮಿಡಿ ವರ್ಕ್‌ಔಟ್‌ ಆಗಿದ್ಯಾ? ಪ್ಲಸ್‌-ಮೈನಸ್‌ ಏನು? ತಿಳಿದುಕೊಳ್ಳಲು ಮುಂದೆ ಓದಿ.

ಸಂಪೂರ್ಣ ಹೊಸಬರಿಂದಲೇ ತಯಾರಾದ ಚಿತ್ರ ʼನಾರಾಯಣ ನಾರಾಯಣʼ. ಶ್ರೀಕಾಂತ್‌ ಕೆಂಚಪ್ಪ ಮೊದಲ ಬಾರಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೃಷ್ಣಪ್ಪ ಪಿ. ಮತ್ತು ಮಂಜುನಾಥ್‌ ಕೆ. ಬಂಡವಾಳ ಹೂಡಿದ್ದಾರೆ. ತಾರಾಬಳಗದಲ್ಲಿ ರಂಗಭೂಮಿ ಹಿನ್ನೆಲೆಯ ಕಲಾವಿದರು ಸಾಥ್‌ ಕೊಟ್ಟಿದ್ದಾರೆ. ಹೀಗೆ ಹೊಸಬರಿಂದಲೇ ಕೂಡಿದ ಈ ಚಿತ್ರತಂಡ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ನಗಿಸುತ್ತಲೇ ಜೀವನಕ್ಕೆ ದೊಡ್ಡ ಸಂದೇಶ ನೀಡಲು ಮುಂದಾಗಿದೆ. ಆ ಕಾರ್ಯದಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದೆ.

ಕಥೆ ಏನು?

ನಾರಾಯಣಪುರದಲ್ಲಿ ಪೂಜಾರಿ, ಕೀರ್ತಿ, ಹಂಪ ಮತ್ತು ಭಟ್ಟ- ಸ್ನೇಹಿತರದ್ದೊಂದು ಗ್ಯಾಂಗ್.‌ ಈ ಊರಿನವರು ತಮ್ಮದೇ ಆದ ಪೊಲೀಸ್‌ ಠಾಣೆ, ಕೋರ್ಟ್‌ ನಿರ್ಮಿಸಿಕೊಂಡಿರುತ್ತಾರೆ. ಈ ಠಾಣೆಗೆ ಕೀರ್ತಿ ಪೊಲೀಸ್‌ ಆದರೆ, ಹಂಪ ಲಾಯರ್‌. ಭಟ್ಟ ಕುಕ್‌. ಪೂಜಾರಿ ಸಣ್ಣ ಪುಟ್ಟ ಜೋತಿಷ್ಯ ಹೇಳುತ್ತ ಹೊಟ್ಟೆ ಹೊರೆಯುತ್ತಿರುತ್ತಾನೆ. ಈ ಮಧ್ಯೆ ನಾಯಕಿ ಮಾಯಾಳ ಮೇಲೆ ಕೀರ್ತಿಗೆ ಪ್ರೀತಿ ಚಿಗುರುತ್ತದೆ. ಇತ್ತ ಊರಿನ ಗೌಡನ ಮಗನಿಗೂ ಮಾಯಾ ಎಂದರೆ ಇಷ್ಟ. ಇದು ಮುಂದೆ ಗೌಡ ಮತ್ತು ಕೀರ್ತಿ ಮಧ್ಯೆ ದ್ವೇಷ ಮೂಡಲು ಕಾರಣವಾಗುತ್ತದೆ.

ಇತ್ತ ಆ ಊರಿನಲ್ಲಿ ಹುದುಗಿರುವ ನಿಧಿಯನ್ನು ಹೊರ ತೆಗೆಯಬೇಕೆಂದು ಮಾಂತ್ರಿಕ ಆಗಮಿಸುತ್ತಾನೆ. ಅದಕ್ಕಾಗಿ ಗೌಡನ ನೆರವಿನಿಂದ ಪೂಜೆ ಮಾಡಲು ಸಿದ್ಧತೆಯಲ್ಲಿ ತೊಡಗುತ್ತಾನೆ. ಇದಕ್ಕೆ ಪೂಜಾರಿ ಮತ್ತು ಸ್ನೇಹಿತರ ಗ್ಯಾಂಗ್‌ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಈ ವೇಳೆ ಜೈಲಿನಲ್ಲಿ ಭಗವಾನ್‌ ಕೃಷ್ಣ ಪ್ರತ್ಯಕ್ಷನಾಗುತ್ತಾನೆ. ವಿಶೇಷ ಎಂದರೆ ಆತ ಕಾಣಿಸುವುದು ಪೂಜಾರಿ ಕಣ್ಣಿಗೆ ಮಾತ್ರ. ಆಗಾಗ ಪೂಜಾರಿಗೆ ಸಲಹೆ, ಮಾರ್ಗದರ್ಶನ ನೀಡುತ್ತಾನೆ.

ಇತ್ತ ಹಾಡಿನ ಕ್ಲ್ಯೂ ನೆರವಿನಿಂದ ನಿಧಿ ರಹಸ್ಯ ಶೋಧನೆಗೆ ಮುಂದಾಗುವ ಮೇಷ್ಟ್ರು ಕೊನೆಗೆ ಗತ್ಯಂತರವಿಲ್ಲದೆ ಮಾಂತ್ರಿಕ ನಡೆಸುವ ಪೂಜೆಗೆ ಬೆಂಬಲ ನೀಡುತ್ತಾರೆ. ಆಗ ಭಗವಾನ್‌ ಕೃಷ್ಣನ ರಹಸ್ಯ ಹೊರ ಬರುತ್ತದೆ. ಆತ ನಿಜವಾಗಿಯೂ ಕೃಷ್ಣನಲ್ಲ ಎಂಬ ಸತ್ಯ ತಿಳಿಯುತ್ತದೆ. ಆತನ ಕರುಣಾಜನಕ ಕಥೆಯೂ ಈ ವೇಳೆ ಅನಾವರಣಗೊಳ್ಳುತ್ತದೆ. ಹಾಗಾದರೆ ಆತನ ಹಿನ್ನೆಲೆ ಏನು? ಆತನ ಮಗ ಬಲಿಯಾಗಿದ್ದು ಹೇಗೆ? ಕೊನೆಗೆ ನಿಧಿ ಯಾರ ಪಾಲಾಗುತ್ತದೆ? ಮಾಯಾ ಯಾರಿಗೆ ಒಲಿಯುತ್ತಾಳೆ? ಮುಂತಾದ ಪ್ರಶ್ನೆಗೆ ಕೊನೆಯಲ್ಲಿ ಉತ್ತರ ಸಿಗುತ್ತದೆ.

ನಗಿಸುತ್ತಲೇ ಚಿಂತನೆಗೆ ಹಚ್ಚುತ್ತದೆ

ನಗಿಸುತ್ತಲೇ ನಿಮ್ಮನ್ನು ಚಿಂತನೆಗೆ ಹಚ್ಚುವ ಗುಣ ಈ ಚಿತ್ರಕ್ಕಿದೆ. ಚಿತ್ರದ ಮೊದಲಾರ್ಥ ಜಾಲಿ ಜಾಲಿ. ದ್ವಿತೀಯಾರ್ಧ ಗಂಭೀರವಾಗುತ್ತಾ ಹೋಗುತ್ತದೆ. ಅದರಲ್ಲಿಯೂ ಕ್ಲೈಮ್ಯಾಕ್ಸ್‌ ಭಾವನಾತ್ಮಕವಾಗಿ ನಿಮ್ಮನ್ನು ಹಿಡಿದಿಡುತ್ತದೆ. ನಿಧಿಯ ಆಸೆ ಹೇಗೆ ಮುಗ್ಧರ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಈ ಚಿತ್ರ ಪರಿಣಾಮಕಾರಿ ಕಟ್ಟಿಕೊಡುತ್ತದೆ. ನಿರ್ದೇಶಕರು ಕೃಷ್ಣನ ಪಾತ್ರಧಾರಿ ಮೂಲಕ ಜೀವನದ ಸತ್ಯದರ್ಶನ ಮಾಡಿಸಲು ಮುಂದಾಗಿರುವುದು ವಿಶೇಷ.

ಮೈನಸ್‌-ಪ್ಲಸ್‌ ಏನು?

ʼನಾರಾಯಣ ನಾರಾಯಣʼ ಹೊಸಬರ ಚಿತ್ರವಾಗಿರುವುದರಿಂದ ಒಂದಷ್ಟು ಕುಂದು-ಕೊರತೆ ಅಲ್ಲಲ್ಲಿ ಕಾಣ ಸಿಗುತ್ತದೆ. ಮುಂದೇನಾಗುತ್ತದೆ ಎನ್ನುವುದನ್ನು ಮೊದಲೇ ಊಹಿಸಬಹುದಾದ ಕಥೆ, ಬಿಗಿಯಿಲ್ಲದೆ ಚಿತ್ರಕಥೆ, ಕೆಲವೊಂದು ಕಡೆ ನಗು ತರಿಸದ ಹಾಸ್ಯ ದೃಶ್ಯ- ಹೀಗೆ ಚಿತ್ರ ಅಲ್ಲಲ್ಲಿ ನಿರಾಸೆ ಮೂಡಿಸುತ್ತದೆ. ನಿಧಿ ಆಸೆಗಾಗಿ ಕೆಲಸ ಬಿಟ್ಟು ಬರುವುದಾಗಿ ಹೇಳುವ ಸಾಫ್ಟ್‌ವೇರ್‌ ಎಂಜಿನಿಯರ್‌ನ ಮನಸ್ಸು ಕೃಷ್ಣನ ಒಂದೇ ಒಂದೇ ಡೈಲಾಗ್‌ನಿಂದ ಪರಿವರ್ತನೆಯಾಗುವುದು ಅಸಹಜ ಎನಿಸುತ್ತದೆ. ಅಲ್ಲದೆ ಫೈಟಿಂಗ್‌ ದೃಶ್ಯವೂ ಕೃತಕ ಎನಿಸುವಂತಿದೆ. ಅದು ಬಿಟ್ಟು ವಿಭಿನ್ನ ಕಥೆ, ಅನಗತ್ಯ ಎನಿಸದ ಸನ್ನಿವೇಶ, ಅಶ್ಲೀಲವಿಲ್ಲದೆ ಸಂಭಾಷಣೆ ಗಮನ ಸೆಳೆಯುತ್ತದೆ. ಹೊಸಬರಾದರೂ ಕಲಾವಿದರ ನಟನೆ ಅಚ್ಚುಕಟ್ಟಾಗಿದೆ. ಕ್ಯಾಮೆರಾ ವರ್ಕ್‌ ಕೂಡ ಗಮನ ಸೆಳೆಯುತ್ತದೆ.

ಈ ಸುದ್ದಿಯನ್ನೂ ಓದಿ: BAD Movie: ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ ‘BAD’ ಚಿತ್ರದ ಟೀಸರ್ ಔಟ್‌

ಅಭಿನಯ ಹೇಗಿದೆ?

ಮೊದಲೇ ಹೇಳಿದಂತೆ ಇದರಲ್ಲಿ ಅಭಿನಯಿಸಿದ ಬಹುತೇಕ ಎಲ್ಲರೂ ಚಿತ್ರರಂಗಕ್ಕೆ ಹೊಸಬರು. ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕೀರ್ತಿ ಕೃಷ್ಣ, ದರ್ಶನ್‌ ಸೂರ್ಯ, ಪುನೀತ್‌ ಬಿ.ಎ., ರಘು ಭಟ್‌, ಗುರು ಕಿರಣ್‌, ಶಶಿಕಾಂತ್‌ ಗಟ್ಟಿ ಮತ್ತಿತರರು ಕೊಟ್ಟ ಪಾತ್ರವನ್ನು ಚೊಕ್ಕವಾಗಿ ನಿಭಾಯಿಸಿದ್ದಾರೆ. ಗೌಡ ಆಗಿ ಅಬ್ಬರಿಸಿರುವ ರಘು ಭಟ್‌ ನಟನೆಯಲ್ಲಿ ಮಾಗಿದರೆ ಕನ್ನಡಕ್ಕೊಬ್ಬ ಉತ್ತಮ ವಿಲನ್‌ ಆಗುವ ಎಲ್ಲ ಸಾಧ್ಯತೆಗಳಿವೆ. ಇನ್ನು ನಾಯಕಿ ಬಿಂಬಿಕಾ ರಾವ್‌ಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ಆಗಾಗ ಬಂದು ಹೋಗುತ್ತಾರೆ.

ಗಮನ ಸೆಳೆಯುವ ಪವನ್‌

ಇನ್ನು ಚಿತ್ರದ ಬಿಗ್‌ ಸರ್‌ಪ್ರೈಸ್‌ ಎಂದರೆ ಮಜಾ ಟಾಕಿಸ್‌ ಖ್ಯಾತಿಯ ಪವನ್‌. ಇವರು ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಇವರ ಪಾತ್ರ ಕಾಣಿಸಿಕೊಳ್ಳುವುದೇ ದ್ವಿತೀಯಾರ್ಧದಲ್ಲಿ. ಆದರೆ ಇಡೀ ಚಿತ್ರವನ್ನೇ ಆವರಿಸಿಕೊಳ್ಳುತ್ತಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಅವರ ಭಾವನಾತ್ಮಕ ದೃಶ್ಯವನ್ನು ನೀವು ನೋಡಿಯೇ ಕಣ್ತುಂಬಿಕೊಳ್ಳಬೇಕು. ಆದರೆ ಅದ್ಯಾಕೋ ಕೃಷ್ಣನ ಮೇಕಪ್‌ ಸ್ವಲ್ಪ ಅತಿಯಾಯ್ತು, ಕೃತಕ ಎನಿಸುವಂತಿದೆ. ಹೀಗೆ ಸಣ್ಣ ಪುಟ್ಟ ಕೊರತೆ ಹೊರತು ಪಡಿಸಿ ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ʼನಾರಾಯಣ ನಾರಾಯಣʼ.