ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುವ ರಾಜ್‌ಕುಮಾರ್ ನಟನೆಯ 3ನೇ ಚಿತ್ರಕ್ಕೆ ‘ಪವರ್‌ಮ್ಯಾನ್‌’ ಟೈಟಲ್‌; ಈ ಚಿತ್ರಕ್ಕಾಗಿ ಖಡಕ್‌ ಟೀಮ್‌ ರೆಡಿ ಮಾಡಿದ ತರುಣ್ ಸುಧೀರ್!

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಯುವ ರಾಜ್‌ಕುಮಾರ್‌ ನಟನೆಯ ʻಪವರ್‌ಮ್ಯಾನ್‌ʼ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಜಡೇಶ ಕೆ. ಹಂಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

ನಟ ಯುವ ರಾಜ್‌ಕುಮಾರ್ ತಮ್ಮ ವೃತ್ತಿಜೀವನದ ಮೂರನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಈ ಹೊಸ ಪ್ರಾಜೆಕ್ಟ್‌ ಅದ್ಧೂರಿಯಾಗಿ ಲಾಂಚ್ ಆಗಿದ್ದು, ಚಿತ್ರಕ್ಕೆ ‘ಪವರ್‌ಮ್ಯಾನ್‌’ ಎಂದು ಹೆಸರಿಡಲಾಗಿದೆ. ಈ ಹಿಂದೆ ‘ಯುವ’ ಹಾಗೂ ‘ಎಕ್ಕ’ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಯುವ ರಾಜ್‌ಕುಮಾರ್, ಈ ಬಾರಿ ಸಂಪೂರ್ಣ ವಿಭಿನ್ನ ಹಾಗೂ ಹೊಸ ಬಗೆಯ ಕಥಾಹಂದರದೊಂದಿಗೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ.

ಜಡೇಶ ಕೆ. ಹಂಪಿ ನಿರ್ದೇಶನ

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ, ‘ಜೆಂಟಲ್‌ಮನ್’, ‘ಗುರು ಶಿಷ್ಯರು’ ಹಾಗೂ ‘ಲ್ಯಾಂಡ್‌ಲಾರ್ಡ್’ ಸಿನಿಮಾಗಳ ಖ್ಯಾತಿಯ ಜಡೇಶ ಕೆ. ಹಂಪಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕ-ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ತಮ್ಮ ‘ತರುಣ್ ಕ್ರಿಯೇಟಿವ್ಸ್’ ಬ್ಯಾನರ್ ಅಡಿಯಲ್ಲಿ ಹಾಗೂ ‘ಜಗದೀಶ್ ಫಿಲ್ಮ್ಸ್’ ಮೂಲಕ ಜಗದೀಶ್ ಗೌಡ ಅವರು ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರತಿಭಾವಂತ ತಂತ್ರಜ್ಞರ ಈ ಬಲಿಷ್ಠ ಕಾಂಬಿನೇಷನ್ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

Yuvarajkumar: ಕೇದಾರನಾಥಕ್ಕೆ ತೆರಳಿ ಶಿವನ ದರ್ಶನ ಪಡೆದ ಯುವ ರಾಜಕುಮಾರ್; ಪೋಸ್ಟ್‌ನಲ್ಲಿ ಏನಿದೆ?

ಇದೊಂದು ಸೂಪರ್ ಹೀರೋ ಸಿನಿಮಾ

ಹಬ್ಬದ ವಿಶೇಷವಾಗಿ ಅನಾವರಣಗೊಂಡಿರುವ ‘ಪವರ್‌ಮ್ಯಾನ್‌’ ಫಸ್ಟ್ ಲುಕ್ ಪೋಸ್ಟರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಪೋಸ್ಟರ್ ವಿನ್ಯಾಸವನ್ನು ಗಮನಿಸಿದರೆ ಇದೊಂದು ಫ್ಯಾಂಟಸಿ ಮತ್ತು ಸೂಪರ್ ಹೀರೋ ಮಾದರಿಯ ಕಾನ್ಸೆಪ್ಟ್ ಆಧರಿತ ಸಿನಿಮಾ ಎಂಬ ಸುಳಿವು ಸಿಗುತ್ತಿದ್ದು, ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆಯುವ ಲಕ್ಷಣಗಳು ಕಾಣುತ್ತಿವೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಈ ಸಿನಿಮಾಕ್ಕೆ ನಾಯಕಿ ಯಾರು?

ಸದ್ಯ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಶೂಟಿಂಗ್ ಯಾವಾಗ ಪ್ರಾರಂಭವಾಗಲಿದೆ ಮತ್ತು ಯುವ ರಾಜ್‌ಕುಮಾರ್‌ಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಚಿತ್ರತಂಡ ಶೀಘ್ರದಲ್ಲೇ ನಾಯಕಿ, ತಾರಾಗಣ ಹಾಗೂ ಚಿತ್ರೀಕರಣದ ದಿನಾಂಕಗಳ ಕುರಿತಾದ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ಹಂಚಿಕೊಳ್ಳಲಿದೆ.