ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಜಮೀರ್‌ ಪುತ್ರ, ನಟ ಝೈದ್‌ ಖಾನ್‌

ರೇಣುಕಾಸ್ವಾಮಿ ಕೇಸ್‌ನಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್‌ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪತ್ನಿ ವಿಜಯಲಕ್ಷ್ಮಿ, ನಟ ಝೈದ್ ಖಾನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮಿ, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ನಟ ಝೈದ್ ಖಾನ್ ಇಂದು (ಸೆ.1) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.

ದರ್ಶನ್ ಅವರ ಆಪ್ತರಾಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ನಟ ಝೈದ್ ಖಾನ್ ಅವರು ಪತ್ನಿ ವಿಜಯಲಕ್ಷ್ಮಿ ಜೊತೆಯಲ್ಲಿ ಜೈಲಿಗೆ ಆಗಮಿಸಿದ್ದರು. ಈ ವೇಳೆ ನಟ ದರ್ಶನ್‌ಗಾಗಿ ಹಣ್ಣು-ಹಂಪಲುಗಳನ್ನು ತಂದಿದ್ದ ಝೈದ್ ಖಾನ್ ಹಾಗೂ ಇತರರು, ಜೈಲಿನಲ್ಲಿದ್ದ ದರ್ಶನ್‌ ಅವರ ಯೋಗಕ್ಷೇಮ ಮತ್ತು ಆರೋಗ್ಯದ ಕುರಿತು ವಿಚಾರಿಸಿದರು. ಜೈಲಿನಲ್ಲಿ ಝೈದ್‌ ಮತ್ತು ದರ್ಶನ್‌ ನಡುವೆ ಏನು ಮಾತುಕತೆ ಆಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಬಹಳ ದಿನಗಳ ನಂತರ ದರ್ಶನ್‌ ಕುಟುಂಬದೊಂದಿಗೆ ಝೈದ್‌ ಖಾನ್‌ ಕಾಣಿಸಿಕೊಂಡಿರುವುದು ಅಚ್ಚರಿ ಉಂಟು ಮಾಡಿದೆ.

ಹೈಕೋರ್ಟ್‌ನಲ್ಲಿ ದರ್ಶನ್‌ ಅರ್ಜಿ ವಿಚಾರಣೆ

ದರ್ಶನ್ ಪ್ರಕರಣದಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ಮಂಗಳವಾರ (ಸೆ.1) ಸಂಜೆ ನಡೆದಿದೆ. ವಿಚಾರಣೆ ವೇಳೆ ಅರ್ಜಿಯಲ್ಲಿ 'ದರ್ಶನ್ ಅಲಿಯಾಸ್ ಡಿ ಬಾಸ್' ಎಂದಿರುವುದನ್ನು ಗಮನಿಸಿದ ಹೈಕೋರ್ಟ್, "ದರ್ಶನ್ ಅಲಿಯಾಸ್ ಡಿ ಬಾಸ್ ಎಂದರೆ ಏನು?" ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು, ಪೊಲೀಸರು ದೋಷಾರೋಪ ಪಟ್ಟಿಯಲ್ಲೇ ಈ ರೀತಿ ನಮೂದಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಪರಿವೀಕ್ಷಣಾ ಅಧಿಕಾರಿಯು ಪ್ರದೋಷ್ ಒಳ್ಳೆಯ ವ್ಯಕ್ತಿ ಎಂದು ನೀಡಿರುವ ವರದಿಯ ಕುರಿತು ಪ್ರಶ್ನಿಸಿದ ನ್ಯಾಯಾಲಯ, "ಆ ವರದಿಯನ್ನು ರದ್ದುಪಡಿಸಿ, ಕೇವಲ ಪ್ರಮಾಣಪತ್ರವನ್ನಷ್ಟೇ ಪಡೆಯಬಹುದಿತ್ತಲ್ಲವೇ?" ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಪ್ರಾಸಿಕ್ಯೂಷನ್ ಕಡೆಯಿಂದ ಪರಿವೀಕ್ಷಣಾ ಅಧಿಕಾರಿಯ ವರದಿಯನ್ನು ಕೇಳಿರಲಿಲ್ಲ ಎಂದು ತಿಳಿಸಿದರು.

Bigg Boss kannada 13: ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

ಮತ್ತೊಂದೆಡೆ, ಪ್ರಕರಣದಲ್ಲಿ ಈಗಾಗಲೇ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದರೂ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಒಪ್ಪಿಕೊಂಡಿರುವುದು ನಿಯಮಬಾಹಿರ; ಬೇರೆ ಸಾಕ್ಷಿಗಳೇ ಇಲ್ಲದಿದ್ದಾಗ ಮಾತ್ರ ಇಂತಹ ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು. ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 2 ರಂದೇ ಪ್ರದೋಷ್ ವಿಚಾರಣೆಗೆ ಸಮನ್ಸ್ ನೀಡಿರುವ ಕಾರಣ, ಹೈಕೋರ್ಟ್ ಎರಡೂ ಕಡೆಯ ಸುದೀರ್ಘ ವಾದ-ಪ್ರತಿವಾದ ಆಲಿಸಿ ತನ್ನ ಆದೇಶವನ್ನು ಬುಧವಾರಕ್ಕೆ (ಸೆ.2) ಕಾಯ್ದಿರಿಸಿದೆ. ಹೈಕೋರ್ಟ್ ನೀಡಲಿರುವ ತೀರ್ಪಿನ ಆಧಾರದ ಮೇಲೆ ಪ್ರದೋಷ್ ಮಾಫಿ ಸಾಕ್ಷಿಯಾಗುವ ಭವಿಷ್ಯ ನಿರ್ಧಾರವಾಗಲಿದೆ.