ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೀ ಕನ್ನಡ ಕುಟುಂಬ ಅವಾರ್ಡ್ಸ್ 2026; ಕಿರುತೆರೆ ತಾರೆಗಳ ಜೊತೆ ಸ್ಯಾಂಡಲ್‌ವುಡ್ ದಿಗ್ಗಜರ ಸಮಾಗಮ, 3 ದಿನಗಳ ಅದ್ಧೂರಿ ಸಂಭ್ರಮ!

Zee Kannada Kutumba Awards 2026: ಜೀ ಕನ್ನಡ ವಾಹಿನಿಯ ಹೆಮ್ಮೆಯ ಜೀ ಕುಟುಂಬ ಅವಾರ್ಡ್‌ ಸಮಾರಂಭವು ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಪ್ರಸಾರವಾಗಲಿದೆ. ಕಿರುತೆರೆ ಮತ್ತು ಬೆಳ್ಳಿತೆರೆಯ ದಿಗ್ಗಜರು ಒಂದೇ ವೇದಿಕೆಯಲ್ಲಿ ಮೇಳೈಸಲಿದ್ದು, ಒಟ್ಟು 80 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕನ್ನಡ ಕಿರುತೆರೆ ವೀಕ್ಷಕರ ಬಹುನಿರೀಕ್ಷಿತ ಮನರಂಜನಾ ಹಬ್ಬ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ 2026’ ಮತ್ತಷ್ಟು ವೈಭವದೊಂದಿಗೆ ಮರಳಿದೆ. ಅಕ್ಟೋಬರ್ 30, 31 ಹಾಗೂ ನವೆಂಬರ್ 1ರವರೆಗೆ ಸತತ ಮೂರು ದಿನಗಳ ಕಾಲ ಪ್ರಸಾರವಾಗಲಿರುವ ಈ ಮಹೋತ್ಸವದಲ್ಲಿ ಕಿರುತೆರೆಯ ನಟ-ನಟಿಯರು ಹಾಗೂ ಚಂದನವನದ ಖ್ಯಾತ ತಾರೆಯರು ಒಂದೇ ವೇದಿಕೆಯಲ್ಲಿ ಮೇಳೈಸಲಿದ್ದಾರೆ.

ಮೂರೂ ದಿನಗಳ ಕಾಲ ಪ್ರತಿದಿನ ಸಂಜೆ 5.30ರಿಂದ 6.30ರವರೆಗೆ ವರ್ಣರಂಜಿತ ‘ರೆಡ್ ಕಾರ್ಪೆಟ್’ ಕಾರ್ಯಕ್ರಮ ಜರುಗಲಿದ್ದು, ತದನಂತರ ಸಂಜೆ 6.30ರಿಂದ ರಾತ್ರಿ 10.30ರವರೆಗೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾ ರಸದೌತಣ ಪ್ರಸಾರವಾಗಲಿದೆ.

80 ವಿಭಾಗಗಳಲ್ಲಿ ಪ್ರಶಸ್ತಿ ವಿತರಣೆ

ಈ ಬಾರಿಯ ಕುಟುಂಬ ಅವಾರ್ಡ್ಸ್‌ನಲ್ಲಿ ಒಟ್ಟು 80 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತಿದೆ. ನೆಚ್ಚಿನ ನಟ, ನೆಚ್ಚಿನ ನಟಿ, ನೆಚ್ಚಿನ ಜೋಡಿ, ಜನ ಮೆಚ್ಚಿದ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ನೆಚ್ಚಿನ ನಿರೂಪಕ ಸೇರಿದಂತೆ ಹಲವು ವಿಭಾಗಗಳಲ್ಲಿ ಮುಂಚೂಣಿ ಕಲಾವಿದರು ಮತ್ತು ತಂತ್ರಜ್ಞರ ಪ್ರತಿಭೆಯನ್ನು ಗೌರವಿಸಲಾಗುತ್ತಿದೆ. ಕೇವಲ ತೆರೆಯ ಮೇಲಿನ ತಾರೆಯರನ್ನಷ್ಟೇ ಅಲ್ಲದೆ, ತೆರೆಮರೆಯಲ್ಲಿ ಶ್ರಮಿಸುವ ನಿಸ್ವಾರ್ಥ ತಂತ್ರಜ್ಞರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ ಸಾಮಾನ್ಯ ಸಾಧಕರನ್ನೂ ಈ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ.

ಒಂದೇ ವೇದಿಕೆಯಲ್ಲಿ ಹಲವು ಸೆಲೆಬ್ರಿಟಿಗಳು

ಸ್ಯಾಂಡಲ್‌ವುಡ್‌ನ ತಾರಾ ಮೆರುಗು ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ರೋರಿಂಗ್ ಸ್ಟಾರ್ ಮುರಳಿ, ಶರಣ್, ಡಾರ್ಲಿಂಗ್ ಕೃಷ್ಣ, ಲವ್ಲೀ ಸ್ಟಾರ್ ಪ್ರೇಮ್, ಅಜಯ್ ರಾವ್, ಹಿರಿಯ ನಟಿಯರಾದ ತಾರಾ ಅನುರಾಧಾ, ಸುಧಾರಾಣಿ, ಖುಷ್ಬೂ, ನಟಿಯರಾದ ಆಶಿಕಾ ರಂಗನಾಥ್, ನಿಶ್ವಿಕಾ ನಾಯ್ಡು, ಅಮೂಲ್ಯ, ಅಮೃತಾ ಅಯ್ಯಂಗಾರ್, ಮೇಘನಾ ರಾಜ್ ಸರ್ಜಾ, ಅದಿತಿ ಪ್ರಭುದೇವ, ರೀಷ್ಮಾ ನಾಣಯ್ಯ, ಬೃಂದಾ ಆಚಾರ್ಯ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ ಪ್ರಕಾಶ್, ಸಂಜಿತ್ ಹೆಗ್ಡೆ, ನಿರ್ದೇಶಕರಾದ ಟಿ.ಎನ್. ಸೀತಾರಾಮ್, ತರುಣ್ ಸುಧೀರ್, ಪ್ರಕಾಶ್ ಬೆಳವಾಡಿ, ಹಾಸ್ಯನಟ ಚಿಕ್ಕಣ್ಣ, ತಾರಾ ದಂಪತಿಗಳಾದ ಸೋನಲ್ ಮೊಂತೆರೊ, ವಿಜಯ ರಾಘವೇಂದ್ರ ಸೇರಿದಂತೆ ಚಿತ್ರರಂಗದ ಗಣ್ಯರ ದಂಡೇ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದೆ.

ವೀಕ್ಷಕರಿಂದಲೇ ನೇರ ಮತದಾನ

ಪ್ರಶಸ್ತಿ ಪ್ರಕ್ರಿಯೆಯಲ್ಲಿ ಪ್ರೇಕ್ಷಕರನ್ನು ನೇರವಾಗಿ ತೊಡಗಿಸಿಕೊಳ್ಳುವ ಸಲುವಾಗಿ ವಾಹಿನಿಯು ರಾಜ್ಯದ ಸಮಸ್ತ 31 ಜಿಲ್ಲೆಗಳಲ್ಲಿ ವಿಶೇಷ ‘ಕ್ಯಾಂಟರ್ ಅಭಿಯಾನ’ವನ್ನು ಹಮ್ಮಿಕೊಂಡಿತ್ತು. ಈ ಸಂಚಾರಿ ವಾಹನದ ಮೂಲಕ ರಾಜ್ಯಾದ್ಯಂತ ಸಂಚರಿಸಿ, ಕೋಟ್ಯಂತರ ವೀಕ್ಷಕರು ತಮ್ಮ ನೆಚ್ಚಿನ ಕಲಾವಿದರಿಗೆ ಮತ ಚಲಾಯಿಸಲು ವೇದಿಕೆ ಕಲ್ಪಿಸಲಾಗಿತ್ತು.

ಕನ್ನಡ ಕಿರುತೆರೆಯಲ್ಲಿ ಹೊಸ ಮೈಲಿಗಲ್ಲು; ‘ಜಗದ್ಧಾತ್ರಿ’ ಧಾರಾವಾಹಿಯ ‘ಏಜೆಂಟ್ ಜೆಡಿ’ ಗೇಮ್ ಬಿಡುಗಡೆ ಮಾಡಿದ ಜೀ ಕನ್ನಡ

ಈ ಮೂಲಕ ವಾಹಿನಿ ಹಾಗೂ ಪ್ರೇಕ್ಷಕರ ನಡುವಿನ ಅವಿನಾಭಾವ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಾಗಿದೆ. ಈ ವರ್ಣರಂಜಿತ ವೇದಿಕೆಯನ್ನು ಜನಪ್ರಿಯ ನಿರೂಪಕರಾದ ಅಕುಲ್ ಬಾಲಾಜಿ, ಅನುಶ್ರೀ, ಕುರಿ ಪ್ರತಾಪ್ ಹಾಗೂ ಶ್ವೇತಾ ಚೆಂಗಪ್ಪ ತಮ್ಮ ಮಾತು ಮತ್ತು ಹಾಸ್ಯದ ಮೂಲಕ ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ.

ಮೂರು ದಿನ ಮನರಂಜನೆಯ ಹಬ್ಬ

ಕಾರ್ಯಕ್ರಮದ ಕುರಿತು ಮಾತನಾಡಿದ ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು, "ವೀಕ್ಷಕರು ತೋರುತ್ತಿರುವ ನಿರಂತರ ಪ್ರೀತಿ ಮತ್ತು ಬೆಂಬಲವೇ ವಾಹಿನಿಯ ಯಶಸ್ಸಿನ ಮೂಲ ಶಕ್ತಿ. ಇದು ಕೇವಲ ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ನಮ್ಮ ಕಲಾವಿದರ ಶ್ರಮ, ಸಾಧನೆ ಹಾಗೂ ಕನ್ನಡ ಮನರಂಜನಾ ಕ್ಷೇತ್ರದ ಬೆಳವಣಿಗೆಯನ್ನು ಪ್ರೇಕ್ಷಕರೊಂದಿಗೆ ಸೇರಿ ಆಚರಿಸುವ ಕುಟುಂಬೋತ್ಸವ. ಬೆಳ್ಳಿತೆರೆ ಹಾಗೂ ಕಿರುತೆರೆಯ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮೂರು ದಿನಗಳ ಕಾಲ ವೀಕ್ಷಕರಿಗೆ ಅವಿಸ್ಮರಣೀಯ ರಸದೌತಣ ನೀಡಲು ಸಜ್ಜಾಗಿದ್ದೇವೆ.." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ರಂಗುರಂಗಿನ ಕೌಟುಂಬಿಕ ಮನರಂಜನಾ ಹಬ್ಬ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.