ನವದೆಹಲಿ, ಆ. 13: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯೋಜಿಸಲಾಗಿರುವ ಆಂಬ್ಯುಲೆನ್ಸ್‌ಗಳು (Ambulances) 10 ಕಿ.ಮೀ. ವ್ಯಾಪ್ತಿಯೊಳಗಿನ ಅಪಘಾತ ಸ್ಥಳಗಳಿಗೆ 10 ನಿಮಿಷಗಳೊಳಗೆ ತಲುಪಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಗಡುವು ನಿಗದಿಪಡಿಸಿದೆ. ತುರ್ತು ಪ್ರತಿಕ್ರಿಯೆಯಲ್ಲಿನ ವಿಳಂಬವನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಹೊಸ ನಿಯಮಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಿಗದಿತ ಸಮಯದೊಳಗೆ ತಲುಪಲು ವಿಫಲವಾದರೆ, ಪ್ರತಿ ಪ್ರಕರಣಕ್ಕೆ 10,000 ರುಪಾಯಿ ದಂಡ ವಿಧಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಆಂಬ್ಯುಲೆನ್ಸ್‌ಗಳು ಅಪಘಾತಕ್ಕೊಳಗಾದವರನ್ನು ಕರೆ ಸ್ವೀಕರಿಸಿದ 1 ಗಂಟೆಯೊಳಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. ಯಾವುದೇ ವೈಫಲ್ಯಕ್ಕೆ 10,000 ರುಪಾಯಿ ದಂಡ ವಿಧಿಸಲಾಗುತ್ತದೆ. ಈ ಮಾನದಂಡಗಳು ಎನ್ಎಚ್ಎಐ ಆರೈಕೆ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಆಂಬ್ಯುಲೆನ್ಸ್‌ಗಳು, ಕ್ರೇನ್‌ಗಳು ಹಾಗೂ ಗಸ್ತು ವಾಹನಗಳನ್ನು ಸುಧಾರಿಸುವ ಪ್ರಯತ್ನಗಳ ಭಾಗವಾಗಿದೆ.
ಅಪಘಾತದ ಸ್ಥಳವನ್ನು ಆಧರಿಸಿ, 10 ಕಿ.ಮೀ. ವ್ಯಾಪ್ತಿಯೊಳಗಿನ ಯಾವುದೇ ಅಪಘಾತ ಸ್ಥಳಕ್ಕೆ ತಲುಪಲು ಆಂಬ್ಯುಲೆನ್ಸ್ 10 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. 10 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿರುವ ಅಪಘಾತ ಸ್ಥಳಗಳಿಗೆ ತಲುಪಲು ಅನುಮತಿಸಲಾದ ಸಮಯವನ್ನು ಅದೇ ಅನುಪಾತದಲ್ಲಿ ಹೆಚ್ಚಿಸಲಾಗುತ್ತದೆ. ಇದನ್ನು ಜಿಪಿಎಸ್ ಡೇಟಾ/ಐಎಂಎಸ್ ಕೇರ್ ಡ್ಯಾಶ್‌ಬೋರ್ಡ್ ಮೂಲಕ ಪರಿಶೀಲಿಸಲಾಗುತ್ತದೆ ಎಂದು ಎನ್ಎಚ್ಎಐ ತಿಳಿಸಿದೆ.
ಪ್ರಾಣದ ಹಂಗು ತೊರೆದು 7 ತಿಂಗಳ ಮಗುವನ್ನು ಕಾಪಾಡಿದ ಆಂಬ್ಯುಲೆನ್ಸ್ ಸಿಬ್ಬಂದಿ!
ಎನ್ಎಚ್ಎಐ ಅಡಿಯಲ್ಲಿ ಸುಮಾರು 50,000 ಕಿ.ಮೀ. ಉದ್ದದ ಹೆದ್ದಾರಿಗಳಲ್ಲಿ ಸುಮಾರು 3,000 ಆಂಬ್ಯುಲೆನ್ಸ್‌ಗಳು, 1,000 ಗಸ್ತು ವಾಹನಗಳು ಮತ್ತು ಕ್ರೇನ್‌ಗಳಿವೆ. ಹೊಸ ಮಾನದಂಡಗಳ ಅಡಿಯಲ್ಲಿ, ಆಂಬ್ಯುಲೆನ್ಸ್ ಯಾವುದೇ ತುರ್ತು ಕರೆ ಸ್ವೀಕರಿಸದಿದ್ದರೂ 10,000 ರುಪಾಯಿ ದಂಡ ವಿಧಿಸಲಾಗುತ್ತದೆ. ಎಲ್ಲ ಉಪಕರಣಗಳು, ಔಷಧಗಳು ಮತ್ತು ಸಿಬ್ಬಂದಿಯನ್ನು ಒಪ್ಪಂದಗಳ ಪ್ರಕಾರ ಒದಗಿಸಬೇಕು. ವಿಫಲವಾದರೆ 10,000 ರುಪಾಯಿ ದಂಡ ವಿಧಿಸಲಾಗುವುದು ಎಂದು ಎನ್ಎಚ್ಎಐ ಹೇಳಿದೆ.
ಎನ್ಎಚ್ಎಐ ಆರೈಕೆ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆಂಬ್ಯುಲೆನ್ಸ್, ಕ್ರೇನ್ ಮತ್ತು ಗಸ್ತು ವಾಹನಗಳು ಸೇರಿ ಎಲ್ಲಾ ಆನ್-ರೋಡ್ ಘಟಕಗಳಲ್ಲಿ ಎಐಎಸ್-140 ಕಂಪ್ಲೈಂಟ್ ಜಿಪಿಎಸ್ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ 1033 ಸಹಾಯವಾಣಿಯನ್ನು ಸಹ ಪ್ರಾರಂಭಿಸಿದೆ.