ಜೈಪುರ, ಸೆ.1: 300 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ. ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ಘಟನೆ ನಡೆದಿದೆ. ಗಾಳಿಪಟವನ್ನು ಬೆನ್ನಟ್ಟುತ್ತಿದ್ದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದು, ಸುಮಾರು 50 ರಿಂದ 55 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ. ಬಾಲಕನನ್ನು ಭಾನು ಎಂದು ಗುರುತಿಸಲಾಗಿದೆ. ಕೂಡಲೇ ಬಾಲಕನ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ತೀವ್ರ ರಕ್ಷಣಾ ಕಾರ್ಯಾಚರಣೆಯ ನಂತರ, ಬಾಲಕ ಭಾನುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು (borewell rescue).
ಅಲ್ವಾರ್ ಜಿಲ್ಲೆಯ ರಾಮಗಢ ಪ್ರದೇಶದ ಬುಟೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೀಶ್ರಾಮ್ ಎಂಬುವವರ ಪುತ್ರ ಭಾನು ಗಾಳಿಪಟವನ್ನು ತರಲು ಹೊಲದ ಕಡೆಗೆ ಓಡುತ್ತಿದ್ದಾಗ ಇದ್ದಕ್ಕಿದ್ದಂತೆ ತೆರೆದ ಕೊಳವೆಬಾವಿಗೆ ಬಿದ್ದನು. ಬಾಲಕ ಗಾಳಿಪಟ ಹಾರಿಸುತ್ತಿದ್ದಾಗ ಅದು ತುಂಡರಿಸಿ ಹೊಲದಲ್ಲಿ ಬಿದ್ದಿದೆ. ಹೀಗಾಗಿ ಬಾಲಕ ಗಾಳಿಪಟ ತರಲು ಓಡಿದ್ದಾನೆ. ಈ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ.
ಆ ಹೊಲದಲ್ಲಿ ಬಹಳ ದಿನಗಳಿಂದ ಬಳಕೆಯಾಗದ ಹಳೆಯ ಕೊಳವೆಬಾವಿ ಇತ್ತು. ಅದರ ಮೇಲೆ ಕಲ್ಲನ್ನು ಇಡಲಾಗಿತ್ತು. ಆದರೆ, ಅದು ಸ್ವಲ್ಪ ಸರಿದಿತ್ತು. ಹೊಲದ ಕಡೆಗೆ ಬಹಳ ಸಮಯದಿಂದ ಯಾರೂ ಹೋಗುತ್ತಿರಲಿಲ್ಲ. ಹೀಗಾಗಿ ಕೊಳವೆಬಾವಿ ತೆರೆದಿರುವುದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ತುಂಡರಿಸಿ ಬಿದ್ದ ಗಾಳಿಪಟವನ್ನು ತರಲು ಓಡುತ್ತಿದ್ದಾಗ ಭಾನು ಕೊಳವೆ ಬಾವಿಯೊಳಗೆ ಬಿದ್ದನು. ಸುಮಾರು 50 ರಿಂದ 55 ಅಡಿ ಕೆಳಗೆ ಸಿಕ್ಕಿಹಾಕಿಕೊಂಡನು. ಕೊಳವೆಬಾವಿ ಸುಮಾರು 300 ಅಡಿ ಆಳದಲ್ಲಿತ್ತು.
ಉಜ್ಜಯಿನಿ ದುರಂತ: ಫಲಿಸಲಿಲ್ಲ ಪ್ರಾರ್ಥನೆ, ಬೋರ್‌ವೆಲ್‌ಗೆ ಬಿದ್ದ ಬಾಲಕ ಸಾವು
ಈ ಘಟನೆ ಗ್ರಾಮದಲ್ಲಿ ಭೀತಿಯನ್ನುಂಟುಮಾಡಿತು. ಮಗು ಕೊಳವೆಬಾವಿಯಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದ ನಂತರ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಎರಡು ಜೆಸಿಬಿ ಯಂತ್ರಗಳನ್ನು ತರಿಸಿ, ಬೋರ್‌ವೆಲ್ ಪಕ್ಕದಲ್ಲಿ ಅಗೆಯುವ ಕೆಲಸ ಆರಂಭಿಸಲಾಯಿತು. ಬಾಲಕ ಸಿಕ್ಕಿಹಾಕಿಕೊಂಡ ಸ್ಥಳಕ್ಕೆ ಹೋಗಲು ಮಾರ್ಗ ಕಲ್ಪಿಸಲಾಯಿತು. ಸ್ಥಳದಲ್ಲಿ ರಕ್ಷಣಾ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಸಹ ವ್ಯವಸ್ಥೆ ಮಾಡಲಾಯಿತು. ಭಾನು ಸುರಕ್ಷಿತವಾಗಿದ್ದು, ಬೋರ್‌ವೆಲ್ ಒಳಗಿನಿಂದ ಅವನ ಧ್ವನಿ ಕೇಳಿಬರುತ್ತಿದೆ ಎಂದು ತಿಳಿದು ರಕ್ಷಣಾ ತಂಡಕ್ಕೆ ದೊಡ್ಡ ಸಮಾಧಾನವಾಯಿತು.
ರಾಮಗಢ ಶಾಸಕ ಸುಖವಂತ್ ಸಿಂಗ್ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಮಗುವನ್ನು ಸುರಕ್ಷಿತವಾಗಿ ಹೊರತರಲು ಅಗತ್ಯವಾದ ಸಂಪನ್ಮೂಲಗಳನ್ನು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದರು.
ರಕ್ಷಣಾ ಕಾರ್ಯಾಚರಣೆಯ ನಂತರ, ಭಾನುವನ್ನು ಕೊನೆಗೂ ಬೋರ್‌ವೆಲ್‌ನಿಂದ ಸುರಕ್ಷಿತವಾಗಿ ಹೊರತರಲಾಯಿತು. ಈ ಬೆಳವಣಿಗೆಯಿಂದ ಸ್ಥಳದಲ್ಲಿ ಆತಂಕದಿಂದ ಕಾಯುತ್ತಿದ್ದ ಅವನ ಕುಟುಂಬ ನೆಮ್ಮದಿಯ ನಿಟ್ಟುಸಿರುಬಿಟ್ಟಿತು. ಕಾರ್ಯಾಚರಣೆ ಮುಂದುವರಿದಂತೆ ಗ್ರಾಮಸ್ಥರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.