ಗ್ವಾಲಿಯರ್, ಅ.18: : ಮಧ್ಯಪ್ರದೇಶದ ಗ್ವಾಲಿಯರ್ ನಗರದ ಶೀತಲಾ ಮಾತಾ ದೇವಾಲಯದ ಬಳಿ ಜಮಾಯಿಸಿದ್ದ ಭಕ್ತರ ಮೇಲೆ ನಿಯಂತ್ರಣ ತಪ್ಪಿದ ಟ್ರಕ್ ಹರಿದು ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ರಾತ್ರಿ ಸುಮಾರು 1:30ರ ಸುಮಾರಿಗೆ ನಡೆದಿದೆ. ಭತ್ತ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು, ಭಾರಿ ವಾಹನಗಳಿಗೆ ಪ್ರವೇಶ ನಿರ್ಬಂಧವಿರುವ ಕಡಿದಾದ ಇಳಿಜಾರಿನಲ್ಲಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದೆ.
"ಶೀತಲಾಮಾತಾ ಮಂದಿರದ ಬಳಿ, ಭತ್ತ ತುಂಬಿದ್ದ ಟ್ರಕ್ ಒಂದರ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾಯುತ್ತಿದ್ದ ಭಕ್ತರಿಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ" ಎಂದು ಗ್ವಾಲಿಯರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಧರಮ್ವೀರ್ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಗಾಯಗೊಂಡವರ ಪೈಕಿ ನಾಲ್ಕರಿಂದ ಐದು ಮಂದಿಯ ಸ್ಥಿತಿ ಗಂಭೀರವಾಗಿದೆ.
ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಪಘಾತದ ಕುರಿತು ಮಾಹಿತಿ ಪಡೆದ ನಂತರ ಪರಿಹಾರ ಕಾರ್ಯಾಚರಣೆಗಾಗಿ ಆಂಬ್ಯುಲೆನ್ಸ್ಗಳು ಹಾಗೂ ಇತರ ವಾಹನಗಳನ್ನು ಕಳುಹಿಸಲಾಯಿತು ಎಂದು ತಿಳಿಸಿದರು.
ನವರಾತ್ರಿಯ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಕಲಾಗಿದ್ದ ತಡೆಗೋಡೆಗಳು ಮತ್ತು ಪೊಲೀಸ್ ತಪಾಸಣಾ ಕೇಂದ್ರವನ್ನು ದಾಟಿ ಟ್ರಕ್ ಹೇಗೆ ಒಳಗೆ ಪ್ರವೇಶಿಸಿತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಚೌಹಾಣ್ ತಿಳಿಸಿದರು.
"ನವರಾತ್ರಿಯ ಸಮಯದಲ್ಲಿ ಆ ರಸ್ತೆಯಲ್ಲಿ ತಡೆಗೋಡೆ ಮತ್ತು ಪೊಲೀಸ್ ತಪಾಸಣಾ ಕೇಂದ್ರವಿದ್ದವು. ಹೀಗಿರುವಾಗ ವಾಹನವು ಹೇಗೆ ಒಳಗೆ ಪ್ರವೇಶಿಸಿತು ಎಂಬುದು ತನಿಖೆಯ ವಿಷಯವಾಗಿದೆ. ಟ್ರಕ್ನಲ್ಲಿ ಏನಾದರೂ ಯಾಂತ್ರಿಕ ದೋಷ ಉಂಟಾಗಿದೆಯೇ ಮತ್ತು ಅದು ಹೇಗೆ ಎಡಕ್ಕೆ ತಿರುಗಿತು ಎಂಬುದನ್ನು ಪತ್ತೆಹಚ್ಚಲು, ನಾವು ಆರ್ಟಿಒ (RTO) ತಂಡವೊಂದನ್ನು ಕಳುಹಿಸಿದ್ದೇವೆ" ಎಂದು ಅವರು ಹೇಳಿದರು.