ಮುಂಬೈ, ಜೂ. 14: ಮಹಾರಾಷ್ಟ್ರದಲ್ಲಿ ಭಾನುವಾರ (ಜೂನ್ 14) ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಭಕ್ತರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವ್ಯಾನ್ ರಸ್ತೆ ಬದಿಯ ಬಾವಿಗೆ ಬಿದ್ದು ಕನಿಷ್ಠ 14 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸೋಲಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಬಾವಿಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ (Maharashtra News). ವಾಹನದಲ್ಲಿದ್ದ ಭಕ್ತರು ಸತಾರ ಜಿಲ್ಲೆಯ ಮಹಸ್ವದ್ ಸಿದ್ದನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಪಂಡಾರಪುರ ತಾಲೂಕಿನ ರಂಜಾನಿ ಗ್ರಾಮದ ನಿವಾಸಿಗಳಾದ ಇವರು ಮರಳುತ್ತಿದ್ದಾಗ ಮಲ್ಶಿರಾಸ್ ತಾಲೂಕಿನ ತಂಡುಲ್ವಾಡಿ ಗ್ರಾಮದಲ್ಲಿ ವಾಹನ ಅಪಘಾತಕ್ಕೀಡಾಗಿದೆ. ʼʼರಂಜಾನಿ ಗ್ರಾಮಸ್ಥರು ಮರಳುತ್ತಿದ್ದಾಗ ಅವರಿದ್ದ ವಾಹನ ರಸ್ತೆ ಬದಿಯ ಬಾವಿಗೆ ಮಗುಚಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 14 ಮಂದಿ ಮೃತಪಟ್ಟರುವ ಶಂಕೆ ವ್ಯಕ್ತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಬಾವಿಗೆ ಬಿದ್ದಿದೆ. ಸದ್ಯ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ಕಾರಣ ತಿಳಿಯಲು ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ದೃಶ್ಯ:
ಮಹಸ್ವದ್-ತಂಡುಲ್ವಾಡಿ ರಸ್ತೆಯಲ್ಲಿ ವಾಹನ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿತು. ವರದಿಗಳ ಪ್ರಕಾರ ಕೂಡಲೇ ರಕ್ಷಣಾ ಕಾರ್ಯಾಚರಣೆ ತಂಡ, ಪೊಲೀಸರು, ಸ್ಥಳೀಯರು ಧಾವಿಸಿದ್ದಾರೆ. ಕಲೆಕ್ಟರ್ ಸೇರಿ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಗಾಯಗೊಂಡರವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನಲ್ಲಿ ಒಟ್ಟು 15 ಮಂದಿ ಇದ್ದರು ಎನ್ನಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ; ಲಾರಿಗೆ ಆಟೋ ಡಿಕ್ಕಿಯಾಗಿ 6 ಮಂದಿ ದುರ್ಮರಣ
ಪೊಲೀಸರು ಹೇಳಿದ್ದೇನು?
ʼʼಪ್ರಾಥಮಿಕ ತನಿಖೆಯ ಪ್ರಕಾರ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಅಪಘಾತದ ಮಾಹಿತಿ ಬಂದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆʼʼ ಎಂದು ಸೋಲಾಪುರ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕುಲಕರ್ಣಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ ವಾಹನದಲ್ಲಿದ್ದವರೆಲ್ಲ ಸಂಬಂಧಿಕರು. ಸಂಜೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ರಸ್ತೆ ಬದಿಯ ಹೊಲದಲ್ಲಿರುವ ಈ ಬಾವಿಗೆ ಸೂಕ್ತ ತಡೆಗೋಡೆ ಇಲ್ಲದಿರುವುದು ದುರಂತವನ್ನು ಇನ್ನಷ್ಟು ಭೀಕರಗೊಳಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ರಾಂಚಿ ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಎಲ್ಲ 7 ಪ್ರಯಾಣಿಕರು ಸಾವು, ಅಪಘಾತ ಸಂಭವಿಸಿದ್ದು ಹೇಗೆ?
ಪಿಕ್‌ಅಪ್ ವ್ಯಾನ್‌ನಲ್ಲಿದ್ದ 15 ಮಂದಿ ರಂಜಾನಿ ಗ್ರಾಮಕ್ಕೆ ಸೇರಿದವರಾಗಿದ್ದು, ಧಾರ್ಮಿಕ ಪ್ರಯಾಣದ ಭಾಗವಾಗಿ ಒಟ್ಟಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಸಿಪಿ (ಎಸ್.ಪಿ.) ನಾಯಕ, ಸ್ಥಳೀಯ ಶಾಸಕ ರೋಹಿತ್ ಪವಾರ್ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ಹೃದಯವಿದ್ರಾವಕ ಮತ್ತು ಆಘಾತಕಾರಿ ಎಂದು ಕರೆದಿದ್ದಾರೆ.
ಅಪಘಾತಕ್ಕೆ ಕಾರಣವೇನು ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.