ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

14ನೇ ಜೆಪಿಎಸ್‌ಸಿ ಪರೀಕ್ಷೆ ರದ್ದು? ನೀಟ್ ಬಳಿಕ ಮತ್ತೊಂದು ವಿವಾದ ಎಬ್ಬಿಸಿದ ಜಾರ್ಖಂಡ್ ನಾಗರಿಕ ಸೇವಾ ಪರೀಕ್ಷೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಿಂದ ದೇಶಾದ್ಯಂತ ವಿದ್ಯಾರ್ಥಿಗಳ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರ ಶಿಕ್ಷಣ ಸಚಿವರ ತಲೆದಂಡವಾಗಿದೆ. ಇದರ ಬೆನ್ನಲ್ಲೇ ಈಗ ಜಾರ್ಖಂಡ್ ನಲ್ಲಿ ಮತ್ತೊಂದು ಪರೀಕ್ಷೆ ವಿವಾದ ಎದ್ದಿದೆ. 14ನೇ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಂಡಿದ್ದು, ಪರೀಕ್ಷೆ ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಸಂಗ್ರಹ ಚಿತ್ರ

ಜಾರ್ಖಂಡ್: ನೀಟ್ ಪ್ರಶ್ನೆ ಪತ್ರಿಕೆ (NEET Paper leak) ಸೋರಿಕೆ ಬೆನ್ನಲ್ಲೇ ಈಗ ಜಾರ್ಖಂಡ್ (Jharkhand)ನಲ್ಲಿ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ವಿವಾದ (Jharkhand Civil Services Exam) ಉಂಟಾಗಿದೆ. ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಪರೀಕ್ಷೆ ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಪ್ರತಿಭಟನಾಕಾರರೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಲಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಶನಿವಾರ ಸರಣಿ ಸಭೆ ನಡೆಸಿದ ಬಳಿಕ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ ನಾಗರಿಕ ಸೇವೆಗಳ 14ನೇ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ನೇಮಕಾತಿ ವ್ಯವಸ್ಥೆಯಲ್ಲಿ ಗಮನಾರ್ಹ ರೀತಿಯಲ್ಲಿ ಬದಲಾವಣೆಗಳನ್ನು ತರಲು ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಿದರು.

ʼʼನಿಮ್ಮಲ್ಲಿ ನಂಬಿಕೆ ಇರಿಸಿದ್ದೇವೆ, ನಿಮ್ಮ ಕೊಡುಗೆ ದೇಶಕ್ಕೆ ಅಗತ್ಯʼʼ: ಜೆನ್‌ ಝೀ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

ಸರ್ಕಾರವು ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಆಕಾಂಕ್ಷಿಗಳ ಪರವಾಗಿಯೇ ಇದೆ. ಮೂರು ನಾಲ್ಕು ದಿನಗಳ ಹಿಂದೆಯೇ ಇದಕ್ಕಾಗಿ ನಾವು ಸಂವಾದ ನಡೆಸಲು ಬಯಸಿದ್ದೆವು. ಈ ಕುರಿತು ಪ್ರಸ್ತಾವನೆಯನ್ನು ಕೂಡ ವಿದ್ಯಾರ್ಥಿಗಳ ಮುಂದೆ ಇರಿಸಿದ್ದೇವೆ. ಅವರ ನಿಜವಾದ ಬೇಡಿಕೆಗಳು ಏನೇ ಇರಲಿ. ಇದಕ್ಕಾಗಿ ಅವರೊಂದಿಗೆ ಈಗಾಗಲೇ ಸಾಕಷ್ಟು ಸಮಾಲೋಚನೆಗಳನ್ನು ನಡೆಸಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ವಿದ್ಯಾರ್ಥಿಗಳ ಬೇಡಿಕೆ ಮತ್ತು ಅವರೊಂದಿಗಿನ ಮಾತುಕತೆಯಲ್ಲಿ ನಡೆಯುತ್ತಿರುವ ಪ್ರಗತಿಯ ಬಗ್ಗೆ ತಿಳಿಸಲಾಗಿದೆ. ಭಾನುವಾರ ಮತ್ತೆ ಸಭೆ ಸೇರಿ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂಬುದು ಖಚಿತ. ವಿದ್ಯಾರ್ಥಿಗಳು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರ ಕಾಳಜಿ ಅರ್ಥವಾಗುತ್ತದೆ. ಸರ್ಕಾರ ಅವುಗಳನ್ನು ಪರಿಹರಿಸಲು ಸಿದ್ಧವಾಗಿದೆ ಎಂದರು.

ಜಾರ್ಖಂಡ್ ಸರ್ಕಾರವು ಶನಿವಾರ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗ ಎನ್‌ಎಸ್‌ಯುಐ, ಜಾರ್ಖಂಡ್ ಛತ್ರ ಮಂಚ್ ಮತ್ತು ಆದಿವಾಸಿ ಛತ್ರ ಸಂಘ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳೊಂದಿಗೆ ನಾಲ್ಕು ಸುತ್ತಿನ ಮಾತುಕತೆಗಳನ್ನು ನಡೆಸಿದೆ. ಆದರೆ ಬಿಕ್ಕಟ್ಟು ಪರಿಹರಿಸಲು ವಿಫಲವಾದ ಹಿನ್ನೆಲೆಯಾಯ್ಲ್ಲಿ ಭಾನುವಾರ ಮತ್ತೆ ಸಭೆ ಕರೆದಿದೆ. ಸರ್ಕಾರಿ ಸಮಿತಿಯಲ್ಲಿ ಸಚಿವರಾದ ದೀಪಿಕಾ ಪಾಂಡೆ ಸಿಂಗ್, ಸುದಿವ್ಯ ಕುಮಾರ್, ಚಮ್ರಾ ಲಿಂಡಾ ಮತ್ತು ಸಂಜಯ್ ಪ್ರಸಾದ್ ಯಾದವ್ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ವಿದ್ಯಾರ್ಥಿ ಗುಂಪಿನ ನಾಯಕರಾದ ರವೀಂದ್ರ ಪಾಸ್ವಾನ್ ಅವರು ಪ್ರತಿಕ್ರಿಯಿಸಿ ಸರ್ಕಾರವು ಪ್ರತ್ಯೇಕ ಚರ್ಚೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿ ಚಳವಳಿಯಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದು ಸರ್ಕಾರದ ರಾಜಕೀಯ ತಂತ್ರ. ಆದರೆ ಇದು ನಡೆಯುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ದಾರೆ ಎಂದರು.

ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಜುಲೈ 25ರಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಕುರಿತು ಸುದ್ದಿಗಾರರೊಂದಿಗೆ ತಿಳಿಸಿದ ಅವರು, ಪರೀಕ್ಷೆ ಸುಧಾರಣಾ ಸಮಿತಿ ಮುಂದೆ ತಮ್ಮ ಎಲ್ಲಾ ಬೇಡಿಕೆಗಳನ್ನು ಇರಿಸಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿ ಪ್ರತಿಭಟನಾಕಾರರು ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆಗಳ ಕಾರ್ಯನಿರ್ವಹಣೆಯಲ್ಲಿ ಸಮಗ್ರ ಸುಧಾರಣೆಗಳನ್ನು ಆಗ್ರಹಿಸಿದೆ. ಇದಕ್ಕಾಗಿ 14ನೇ ಜೆಪಿಎಸ್ ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ರದ್ದುಗೊಳಿಸುವುದು ಸೇರಿದಂತೆ ಐದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಇದರಲ್ಲಿ ಮುಖ್ಯವಾಗಿ ಅನುಮಾನಾಸ್ಪದವಾಗಿರುವ ಎಲ್ಲಾ ಜೆಪಿಎಸ್ ಸಿ ಮತ್ತು ಜೆ ಎಸ್ ಎಸ್ ಸಿ ಪರೀಕ್ಷೆಗಳ ಕುರಿತು ಸಿಐಡಿ ತನಿಖೆಯಾಗಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಾದರಿಯಲ್ಲಿ ಜಾರ್ಖಂಡ್ ಪರೀಕ್ಷಾ ಸಂಸ್ಥೆಯನ್ನು ರಚಿಸಬೇಕು. ನೇಮಕಾತಿ ಪರೀಕ್ಷೆಗಳಲ್ಲಿ ಬುಡಕಟ್ಟು ಮತ್ತು ಪ್ರಾದೇಶಿಕ ಭಾಷೆಗಳನ್ನು ಸೇರ್ಪಡೆಗೊಳಿಸಬೇಕು. ಅಕ್ರಮಗಳು ಕಂಡುಬಂದಿರುವ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.

ಯುಪಿಐ ಪಾವತಿಗೆ ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ: ಕೇಂದ್ರದಿಂದ ಅಭಯ

ವಿದ್ಯಾರ್ಥಿಗಳೊಂದಿಗೆ ಸರ್ಕಾರ ಮಾತುಕತೆ ಮುಂದುವರಿಸಿದ್ದರೂ ಕೂಡ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಭಾನುವಾರದೊಳಗೆ ಸರ್ಕಾರದಿಂದ ಸೂಕ್ತ ಭರವಸೆ ಸಿಗದೇ ಇದ್ದರೆ ಆಗಸ್ಟ್ 10 ರಂದು ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author