ರಾಂಚಿ, ಜ. 22: ಮಹತ್ವದ ಕಾರ್ಯಾಚರಣೆಯೊಂದರಲ್ಲಿ 1 ಕೋಟಿ ರುಪಾಯಿ ಇನಾಮು ಹೊಂದಿದ್ದ ಅನಲ್ ದಾ ಸೇರಿ ಒಟ್ಟು 15 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಜಾರ್ಖಂಡ್‌ನ ಪಶ್ಚಿಮ ಸಿಂಘ್‌ಭೂಮ್ ಜಿಲ್ಲೆಯಲ್ಲಿ ಗುರುವಾರ (ಜನವರಿ 22) ಈ ಎನ್‌ಕೌಂಟರ್ ನಡೆದಿದೆ. ಸುಮಾರು 1,500 ಮಂದಿ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ (Naxal Encounter). ಸಿಆರ್‌ಪಿಎಫ್‌ನ ಕೋಬ್ರಾ ಘಟಕ ಕಿರಿಬುರು ಪೊಲೀಸ್ ಠಾಣೆಯ ಸರಂದ ಅರಣ್ಯ ಪ್ರದೇಶದ ಕುಮ್ಡಿ ಪ್ರದೇಶದಲ್ಲಿ ನಡೆಸಿದ ಆಪರೇಷನ್‌ನಲ್ಲಿ ಈ ಮಾವೋವಾದಿಗಳನ್ನು ಹತ್ಯೆ ಮಾಡಲಾಯಿತು.
ʼʼನಾವು 15 ಮಾವೋವಾದಿಗಳ ಮೃತದೇಹವನ್ನು ವಶಕ್ಕೆ ಪಡೆದಿದ್ದೇವೆ. ಇದರಲ್ಲಿ ಮಾವೋವಾದಿ ಮುಖಂಡ ಪತಿರಾಮ್ ಮಜ್ಹಿ ಆಲಿಯಾಸ್ ಅನಲ್ ದಾ ಕೂಡ ಸೇರಿದ್ದಾನೆ. ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ 6 ಗಂಟೆಗೆ ಎನ್‌ಕೌಂಟರ್ ಆರಂಭವಾಗಿದ್ದು, ಈಗಲೂ ಮುಂದುವರಿದಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್ ಬಗ್ಗೆ ಮಾಹಿತಿ:
ಮಂಗಳವಾರವೇ (ಜನವರಿ 20) ಸರಂದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಗುರುವಾರ ಬೆಳಗೆ ಎನ್‌ಕೌಂಟರ್ ಶುರುವಾಯ್ತುಎಂದು ಮೂಲಗಳು ತಿಳಿಸಿವೆ. ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಆಪರೇಷನ್) ಮೈಕಲ್ ರಾಜ್ ಎಸ್. ಮಾತನಾಡಿ, ʼʼಅನಲ್ ದಾ ಮತ್ತು ಸಂಗಡಿಗರು ಸರಂದ ಅರಣ್ಯದಲ್ಲಿ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ಆರಂಭಿಸಿದೆವುʼʼ ಎಂದು ವಿವರಿಸಿದರು.
ಗಿರಿದಿ ಜಿಲ್ಲೆಯ ಪಿರ್ತಾಂಡ್ ನಿವಾಸಿ ಅನಲ್ ದಾ 1987ರಿಂದಲೂ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದ. ಪೊಲೀಸರು ಕೆಲವು ವರ್ಷಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆತನ ತಲೆಗೆ 1 ಕೋಟಿ ರುಪಾಯಿ ಇನಾಮು ಕೂಡ ಘೋಷಿಸಲಾಗಿತ್ತು.
1.1 ಕೋಟಿ ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಗಣೇಶ್ ಉಯಿಕೆ ಎನ್‌ಕೌಂಟರ್
ಕಾರ್ಯಚರಣೆಯ ಭಾಗವಾಗಿ ಸಿಆರ್‌ಪಿಎಫ್ ನಿರ್ದೇಶಕ ಜನರಲ್ ಜ್ಞಾನೇಂದ್ರ ಪ್ರತಾಪ್ ಸಿಂಗ್ ಸೋಮವಾರ ಪಶ್ಚಿಮ ಸಿಂಘ್‌ಭೂಮ್ ಜಿಲ್ಲೆಯ ಚೈಬಾಸಕ್ಕೆ ಭೇಟಿ ನೀಡಿದ್ದರು. ಸರಂದಾ ಮತ್ತು ಕೊಲ್ಹಾನ್ ಮಾವೋವಾದಿಗಳು ನೆಲೆಸಿರುವ ಜಾರ್ಖಂಡ್‌ನ ಕೊನೆಯ ತಾಣ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಯ ಸಿಬ್ಬಂದಿ ಬುದ ಪಹಾಡ್, ಚತ್ರ, ಲಾತೆಹರ್, ಗುಮ್ಲಾ, ಲೊಹರ್ದಾಗ, ರಾಂಚಿ ಮತ್ತು ಪರಶ್‌ನಾತ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಿಜೆಪಿ ನಾಯಕ ಬಾಬುಲಾಲ್ ಮರಂಡಿ ಇದನ್ನು ಮಹತ್ವದ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ. ರೆಡ್ ಟೆರರ್ ಅನ್ನು ಬೇರು ಸಮೇತ ಕಿತ್ತು ಹಾಕಲು ನಡೆಸಲಾಗುತ್ತಿರುವ ಹೋರಾಟಕ್ಕೆ ಸಿಕ್ಕ ಜಯ ಇದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿ ಅದಮ್ಯ ಧೈರ್ಯ ಮತ್ತು ಶೌರ್ಯ ಪ್ರದರ್ಶಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಕೇಂದ್ರ ಸರ್ಕಾರ 2026ರ ಮಾರ್ಚ್ ವೇಳೆಗೆ ನಕ್ಸಲಿಸಂ ಅನ್ನು ದೇಶದಿಂದ ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ದೃಢವಾಗಿ ಕೆಲಸ ಮಾಡುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.