ನವದೆಹಲಿ, ಜ. 1: 2008ರ ಕಾನ್ಸುಲರ್ ಪ್ರವೇಶ (Consular Access) ಕುರಿತ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನವು ರಾಜತಾಂತ್ರಿಕ ಮಾರ್ಗಗಳ ಮೂಲಕ ಏಕಕಾಲಕ್ಕೆ ಪರಸ್ಪರ ವಶದಲ್ಲಿರುವ ನಾಗರಿಕ ಕೈದಿಗಳು ಹಾಗೂ ಮೀನುಗಾರರ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (Ministry of External Affairs) ಪ್ರಕಟಣೆ ತಿಳಿಸಿದೆ.
“ಭಾರತವು ತನ್ನ ವಶದಲ್ಲಿರುವ ಪಾಕಿಸ್ತಾನಿ ಅಥವಾ ಪಾಕಿಸ್ತಾನಿಯರು ಎಂದು ನಂಬಲಾದ 391 ಕೈದಿಗಳು ಮತ್ತು 33 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ. ಅದೇ ರೀತಿ ಪಾಕಿಸ್ತಾನವೂ ತನ್ನ ವಶದಲ್ಲಿರುವ ಭಾರತೀಯ ಅಥವಾ ಭಾರತೀಯರು ಎಂದು ನಂಬಲಾಗಿರುವ 58 ನಾಗರಿಕ ಕೈದಿಗಳು ಮತ್ತು 199 ಮೀನುಗಾರರ ಪಟ್ಟಿಯನ್ನು ನೀಡಿದೆ” ಎಂದು ಪ್ರಕಟಣೆ ತಿಳಿಸಿದೆ.
ಭಾರತ ಸರ್ಕಾರವು ಪಾಕಿಸ್ತಾನದ ವಶದಲ್ಲಿರುವ ಕೈದಿಗಳು, ಮೀನುಗಾರರು ಹಾಗೂ ನಾಪತ್ತೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಶೀಘ್ರ ಬಿಡುಗಡೆ ಮಾಡಿ ಕಳುಹಿಸುವಂತೆ ಮನವಿ ಮಾಡಿದೆ. ಜತೆಗೆ, ಶಿಕ್ಷೆ ಪೂರ್ಣಗೊಳಿಸಿರುವ 167 ಭಾರತೀಯ ಮೀನುಗಾರರು ಮತ್ತು ಕೈದಿಗಳನ್ನು ಶೀಘ್ರ ಬಿಡುಗಡೆ ಮಾಡಿ ಭಾರತಕ್ಕೆ ಮರಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಪಾಕಿಸ್ತಾನವನ್ನು ಆಗ್ರಹಿಸಿದೆ.
ಭಾರತ ಮತ್ತು ಪಾಕಿಸ್ತಾನ ಹಂಚಿಕೊಂಡ ಕೈದಿಗಳ ಪಟ್ಟಿ:
ಅಷ್ಟೇ ಅಲ್ಲದೆ ಪಾಕಿಸ್ತಾನದ ವಶದಲ್ಲಿರುವ ಹಾಗೂ ಭಾರತೀಯರೆಂದು ನಂಬಲಾದ 35 ಕೈದಿಗಳು ಮತ್ತು ಮೀನುಗಾರರಿಗೆ ಇದುವರೆಗೆ ಕಾನ್ಸುಲರ್ ಪ್ರವೇಶ ನೀಡಲಾಗಿಲ್ಲ. ಅವರಿಗೆ ತಕ್ಷಣ ಕಾನ್ಸುಲರ್ ಪ್ರವೇಶ ಒದಗಿಸುವಂತೆ ಪಾಕಿಸ್ತಾನವನ್ನು ಕೇಳಲಾಗಿದೆ.
ಪಾಕಿಸ್ತಾನ-ಅಫ್ಘಾನಿಸ್ತಾನದ ಶಾಂತಿ ಮಾತುಕತೆ ಯಶಸ್ವಿ
“ಭಾರತ ಸರ್ಕಾರವು ಎಲ್ಲ ಭಾರತೀಯ ನಾಗರಿಕ ಕೈದಿಗಳು ಹಾಗೂ ಮೀನುಗಾರರನ್ನು ಬಿಡುಗಡೆ ಮಾಡಿ ಮರಳಿಸುವ ತನಕ ಅವರ ಸುರಕ್ಷತೆ ಹಾಗೂ ಭದ್ರತೆ ಖಚಿತಪಡಿಸಿಕೊಳ್ಳುವಂತೆ ಪಾಕಿಸ್ತಾನ ಸರ್ಕಾರದ ಬಳಿ ಮನವಿ ಮಾಡಿದೆ” ಎಂದು ಪ್ರಕಟಣೆ ತಿಳಿಸಿದೆ.
“ಭಾರತ ಸರ್ಕಾರದ ನಿರಂತರ ಪ್ರಯತ್ನಗಳ ಫಲವಾಗಿ 2014ರಿಂದ ಇಂದಿನವರೆಗೆ ಪಾಕಿಸ್ತಾನದಿಂದ 2,661 ಭಾರತೀಯ ಮೀನುಗಾರರು ಮತ್ತು 71 ಭಾರತೀಯ ನಾಗರಿಕ ಕೈದಿಗಳನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ. ಇದರಲ್ಲಿ 2023ರಿಂದ ಇಂದಿನವರೆಗೆ ಪಾಕಿಸ್ತಾನದಿಂದ ಮರಳಿಸಲಾದ 500 ಭಾರತೀಯ ಮೀನುಗಾರರು ಮತ್ತು 13 ಭಾರತೀಯ ನಾಗರಿಕ ಕೈದಿಗಳು ಸೇರಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಜುಲೈ 1ರಂದು 2008ರ ಕಾನ್ಸುಲರ್ ಪ್ರವೇಶ ಕುರಿತ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಭಾರತ ಮತ್ತು ಪಾಕಿಸ್ತಾನವು ನವದೆಹಲಿ ಹಾಗೂ ಇಸ್ಲಾಮಾಬಾದ್‌ನಲ್ಲಿ ಏಕಕಾಲಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಸ್ಪರ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡಿದ್ದವು. ಈ ರೀತಿಯ ಪಟ್ಟಿಗಳನ್ನು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ.