ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶೀತ, ಕೆಮ್ಮು ಎಂದು ಆಸ್ಪತ್ರೆಗೆ ದಾಖಲಾಗಿದ್ದ 19 ತಿಂಗಳ ಮಗುವಿನ ದೃಷ್ಟಿಯನ್ನೇ ಕಿತ್ತುಕೊಂಡ ವೈದ್ಯರು! ಕಫದ ಔಷಧ ಕಣ್ಣಿಗೆ ಹಾಕಿದ್ದೇ ಕಾರಣ

Child Loses Eyesight: ಶೀತ, ಕೆಮ್ಮು ಮತ್ತು ಕಣ್ಣು ಕೆಂಪಾಗಿದ್ದ ಕಾರಣಕ್ಕಾಗಿ ಮಧ್ಯ ಪ್ರದೇಶದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ 19 ತಿಂಗಳ ಮಗುವೊಂದು ವೈದ್ಯಕೀಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ತನ್ನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮಗುವಿನ ಕಣ್ಣನ್ನೇ ತೆಗೆದ ವೈದ್ಯರು

ಭೋಪಾಲ್, ಜೂ. 29: ಶೀತ, ಕೆಮ್ಮು ಮತ್ತು ಕಣ್ಣು ಕೆಂಪಾಗಿದ್ದ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗೆ (Government Hospital) ದಾಖಲಿಸಲಾಗಿದ್ದ 19 ತಿಂಗಳ ಮಗುವೊಂದು, ವೈದ್ಯಕೀಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ತನ್ನ ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡ ಘಟನೆ ಮಧ್ಯ ಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯ ಪ್ರದೇಶದ ಆರೋಗ್ಯ ಸಚಿವರ ಉಸ್ತುವಾರಿಯಲ್ಲಿರುವ ಜಿಲ್ಲೆ ಸಾಗರ್‌ನಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

ಸಾಗರ್‌ನ ಬಂಡಾ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಭೂಸಾ ಕಮಲಪುರ ಗ್ರಾಮದ ನಿವಾಸಿ ಇಂದ್ರಜ್ ವಿಶ್ವಕರ್ಮ ಮೇ 29ರಂದು ತಮ್ಮ ಮಗನನ್ನು ಚಿಕಿತ್ಸೆಗೆ ಕರೆದೊಯ್ದಿದ್ದರು. ಕುಟುಂಬದ ಪ್ರಕಾರ, ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಶೀತ, ಕೆಮ್ಮು ಮತ್ತು ಕಣ್ಣುಗಳು ಕೆಂಪಾಗಿರುವುದು ಸೇರಿ ಸಣ್ಣಪುಟ್ಟ ಅಸ್ವಸ್ಥತೆ ಇತ್ತು.

ಕುಟುಂಬವು ಒಪಿಡಿ ಚೀಟಿಯನ್ನು ಪಡೆದು ಕರ್ತವ್ಯದಲ್ಲಿದ್ದ ಮಕ್ಕಳ ತಜ್ಞ ಡಾ. ಹಿಮಾಂಶು ವರ್ಮಾ ಅವರನ್ನು ಸಂಪರ್ಕಿಸಿತು. ಮಗುವನ್ನು ಪರೀಕ್ಷಿಸಿದ ನಂತರ ವೈದ್ಯರು ಕಣ್ಣಿನ ಡ್ರಾಪ್ಸ್, ಪ್ಯಾರಸಿಟಮಾಲ್ ಸಿರಪ್, ಇಂಜೆಕ್ಷನ್ ಮತ್ತು ಇತರ ಔಷಧಿಗಳನ್ನು ಬರೆದುಕೊಟ್ಟಿದ್ದರು ಎಂದು ಇಂದ್ರರಾಜ್ ವಿಶ್ವಕರ್ಮ ತಿಳಿಸಿದ್ದಾರೆ. ಆದರೆ ಚಿಕಿತ್ಸೆಯ ಸಮಯದಲ್ಲಿ ಕಫವನ್ನು ನಿವಾರಿಸಲು ಬಳಸುವ ಔಷಧಿಯನ್ನು ಮಗುವಿನ ಕಣ್ಣಿಗೆ ಹಾಕಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು ಪ್ರಕರಣ; ಗುತ್ತಿಗೆದಾರ ಕಂಪನಿ ವಿರುದ್ಧ ಎಫ್‌ಐಆರ್‌

ಇದರಿಂದ ಮಗುವಿನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು ಎಂದು ತಂದೆ ಹೇಳಿದರು. ಮಗು ಸುಧಾರಿಸುತ್ತದೆ ಎಂದು ಆಶಿಸುತ್ತಾ ಕುಟುಂಬವು ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಿತು. ಆದರೆ, ಮಗುವಿನ ಸ್ಥಿತಿ ತೀರಾ ಹದಗೆಟ್ಟಿತು.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಆಸ್ಪತ್ರೆಯು ಮಗುವನ್ನು ಸಾಗರ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಸೂಚಿಸಿತು. ಬಾಲಕನನ್ನು ಪರೀಕ್ಷಿಸಿದ ನಂತರ, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲು ಸಲಹೆ ನೀಡಿದರು. ನಂತರ ಕುಟುಂಬವು ಮಗುವನ್ನು ಭೋಪಾಲ್‌ನ ಏಮ್ಸ್‌ಗೆ ಕರೆದೊಯ್ದಿತು. ಏಮ್ಸ್‌ನಲ್ಲಿ ತಜ್ಞ ವೈದ್ಯರು ಮಗುವನ್ನು ಪರೀಕ್ಷಿಸಿ ಆಘಾತಕಾರಿ ಮಾಹಿತಿ ತಿಳಿಸಿದ್ದಾರೆ. ತಪ್ಪು ಔಷಧ ಅಥವಾ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಮಗು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಬಾಲಕನ ತಂದೆ ಹೇಳಿದ್ದಾರೆ.

ದೂರು ದಾಖಲು

ಈ ಸಂಬಂಧ ಬಂದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಾಲಕನ ತಂದೆ, ತನ್ನ ಮಗನ ಜೀವನ ನಾಶವಾಗಿದೆ ಎಂದು ಆರೋಪಿಸಿದ್ದಾರೆ. ಕೆಮ್ಮು, ಶೀತ ಮತ್ತು ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದ್ದರಿಂದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಇನ್ನೆಂದು ಅವನಿಗೆ ಕಣ್ಣು ಕಾಣಿಸುವುದಿಲ್ಲ ಎಂಬ ಸುದ್ದಿ ಕೇಳಿ ಹೃದಯ ಒಡೆದುಹೋಗಿದೆ ಎಂದು ಮಗುವಿನ ಕುಟುಂಬ ದುಃಖ ವ್ಯಕ್ತಪಡಿಸಿದ್ದಾರೆ.

ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನೆಯವರು ಒತ್ತಾಯಿಸಿದರು. ವೈದ್ಯರ ನಿರ್ಲಕ್ಷ್ಯದ ಆರೋಪ ಹೊರಿಸಿ, ಕುಟುಂಬವು ನಿಷ್ಪಕ್ಷಪಾತ ತನಿಖೆಯನ್ನು ಆಗ್ರಹಿಸಿದೆ. ಸಾಗರ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಗಂಗಾ ಪ್ರಸಾದ್ ಆರ್ಯ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯು ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.