ನವದೆಹಲಿ: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ (Bilkis Bano Case) ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ (Supreme Court) ಜಾಮೀನು ಮಂಜೂರು ಮಾಡಿದೆ. 2017ರ ಮೇ ತಿಂಗಳಿನಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳಾದ ಬಿಪಿನ್ಚಂದ್ ಜೋಶಿ ಮತ್ತು ಪ್ರದೀಪ್ ಮೋಧಿಯಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಈ ಇಬ್ಬರು ವ್ಯಕ್ತಿಗಳು 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಮತ್ತು ಅವರಲ್ಲಿ ಒಬ್ಬರು ತೀವ್ರ ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಅಲ್ಲದೆ, ಅವರು ಸಲ್ಲಿಸಿರುವ ಮೇಲ್ಮನವಿಗಳಲ್ಲಿ ಸತ್ಯಾಂಶ ಮತ್ತು ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದು, ಅವುಗಳನ್ನು ಪರಿಶೀಲಿಸಬೇಕಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅಪರಾಧದ ಗಂಭೀರತೆ ಹಾಗೂ ಕೆಳ ನ್ಯಾಯಾಲಯ ಮತ್ತು ಹೈಕೋರ್ಟ್ಗಳ ತೀರ್ಪುಗಳನ್ನು ಉಲ್ಲೇಖಿಸಿ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ಅಪರಾಧಿಗಳ ಪರ ವಕೀಲರು ವಾದ ಮಂಡಿಸಿ, ಆರಂಭಿಕ ಎಫ್ಐಆರ್ನಲ್ಲಿ (FIR) ಅರ್ಜಿದಾರರಲ್ಲಿ ಒಬ್ಬರ ಹೆಸರಿರಲಿಲ್ಲ ಮತ್ತು ಘಟನೆ ನಡೆದು ಸುಮಾರು ಮೂರು ವರ್ಷಗಳ ನಂತರ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದರು. ಸಂತ್ರಸ್ತೆಯು ಪೊಲೀಸರಿಗೆ ಅಥವಾ ವೈದ್ಯಕೀಯ ಪರೀಕ್ಷೆಯ ವೇಳೆ ವೈದ್ಯರಿಗೆ ನೀಡಿದ ಹೇಳಿಕೆಯಲ್ಲೂ ಈ ಇಬ್ಬರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಘಟನೆಯ ಸಮಯದಲ್ಲಿ ಗುಂಪಿನಲ್ಲಿ ಇದ್ದರು ಎಂಬುದನ್ನು ಬಿಟ್ಟರೆ, ಇವರು ಯಾವುದೇ ನೇರ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದಗಳನ್ನು ಆಲಿಸಿದ ಪೀಠ, ಮಾರ್ಚ್ನಲ್ಲಿ ನೋಟಿಸ್ ಜಾರಿಗೊಳಿಸಿ ಇದೀಗ ಜಾಮೀನು ಮಂಜೂರು ಮಾಡಿದೆ.
ʼʼಎದೆಯ ಭಾರ ಇಳಿಯಿತುʼʼ: ಎನ್ಕೌಂಟರ್ನಲ್ಲಿ ಹತ ಅತ್ಯಾಚಾರ ಆರೋಪಿಯ ಮುಖ ನೋಡಲೂ ನಿರಾಕರಿಸಿದ ತಾಯಿ
ಏನಿದು ಪ್ರಕರಣ?
2002ರ ಗುಜರಾತ್ ಗಲಭೆಯ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದ 21 ವರ್ಷದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಇದೇ ದಾಳಿಯಲ್ಲಿ ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ಅವಧಿಪೂರ್ವ ಬಿಡುಗಡೆಯನ್ನು (ಕ್ಷಮಾದಾನ) ಸುಪ್ರೀಂ ಕೋರ್ಟ್ 2024ರ ಜನವರಿಯಲ್ಲಿ ರದ್ದುಗೊಳಿಸಿತ್ತು. ಗುಜರಾತ್ ಸರ್ಕಾರಕ್ಕೆ ಕ್ಷಮಾದಾನ ನೀಡುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದ ನ್ಯಾಯಾಲಯ, ಎಲ್ಲಾ 11 ಅಪರಾಧಿಗಳು ಎರಡು ವಾರಗಳಲ್ಲಿ ಮತ್ತೆ ಜೈಲಿಗೆ ಶರಣಾಗುವಂತೆ ಆದೇಶಿಸಿತ್ತು