ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IED Blast: ಜಮ್ಮು-ಕಾಶ್ಮೀರದಲ್ಲಿ ಶಂಕಿತ ಐಇಡಿ ಸ್ಫೋಟ; ಇಬ್ಬರು ಸೈನಿಕರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನ ಲಾಲೆಲಿಯಲ್ಲಿ ಮಂಗಳವಾರ (ಫೆ. 11) ಬಾಂಬ್‌ ಸ್ಫೋಟಗೊಂಡಿದ್ದು, ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಈ ಬಗ್ಗೆ ಸೇನೆ ತನಿಖೆ ಕೈಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇದಕ್ಕೂ ಮುನ್ನ ಅಖ್ನೂರ್ ಸೆಕ್ಟರ್‌ನಲ್ಲಿ ಬಾಂಬ್ ನಿಷ್ಕ್ರಿಯ ದಳವು ಮೋರ್ಟಾರ್ ಶೆಲ್ ಅನ್ನು ನಿಷ್ಕ್ರಿಯಗೊಳಿಸಿತ್ತು.

ಸಾಂದರ್ಭಿಕ ಚಿತ್ರ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ವಾಸ್ತವ ಗಡಿ ನಿಯಂತ್ರಣ ರೇಖೆಯ (Line of Control) ಅಖ್ನೂರ್ ಸೆಕ್ಟರ್‌ (Akhnoor sector)ನ ಲಾಲೆಲಿ(Laleali)ಯಲ್ಲಿ ಮಂಗಳವಾರ (ಫೆ. 11) ಬಾಂಬ್‌ ಸ್ಫೋಟಗೊಂಡು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ (IED Blast). ʼʼಅಖ್ನೂರ್ ಸೆಕ್ಟರ್‌ನಲ್ಲಿ ಗಸ್ತು ತಿರುಗುವ ಸಮಯದಲ್ಲಿ ಶಂಕಿತ ಐಇಡಿ (Improvised Explosive Device) ಸ್ಫೋಟಗೊಂಡಿದ್ದು, ಇಬ್ಬರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಶೋಧ ಕಾರ್ಯ ನಡೆಯುತ್ತಿದೆ. ಇಬ್ಬರು ಧೈರ್ಯಶಾಲಿ ಸೈನಿಕರ ಈ ಅಪ್ರತಿಮ ತ್ಯಾಗಕ್ಕೆ ವೈಟ್ ನೈಟ್ ಕಾರ್ಪ್ಸ್ (White Knight Corps) ಗೌರವ ಸಲ್ಲಿಸುತ್ತದೆ" ಎಂದು ಸೇನೆ ಎಕ್ಸ್‌ನಲ್ಲಿ ತಿಳಿಸಿದೆ.

ಸದ್ಯ ಈ ಬಗ್ಗೆ ಸೇನೆ ತನಿಖೆ ಕೈಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಅಪರಾಹ್ನ 3:50ರ ಸುಮಾರಿಗೆ ಕರ್ತವ್ಯ ನಿರತ ಸೈನಿಕರು ಗಸ್ತು ತಿರುಗುತ್ತಿದ್ದಾಗ ಭಟ್ಟಾಲ್ ಪ್ರದೇಶದ ಫಾರ್ವರ್ಡ್ ಪೋಸ್ಟ್ ಬಳಿ ಪ್ರಬಲ ಸ್ಫೋಟ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಕ್ಯಾಪ್ಟನ್ ಸೇರಿದಂತೆ ಇಬ್ಬರು ಹುತಾತ್ಮರಾಗಿದ್ದಾರೆ. ಗಾಯಗೊಂಡ ಇತರ ಸೈನಿಕರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.



ಇದಕ್ಕೂ ಮುನ್ನ ಅಖ್ನೂರ್ ಸೆಕ್ಟರ್‌ನಲ್ಲಿ ಬಾಂಬ್ ನಿಷ್ಕ್ರಿಯ ದಳವು ಮೋರ್ಟಾರ್ ಶೆಲ್ ಅನ್ನು ನಿಷ್ಕ್ರಿಯಗೊಳಿಸಿತ್ತು ಎಂದು ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ನಮಂದರ್ ಗ್ರಾಮದ ಬಳಿಯ ಪಾರ್ಟಾಪ್ ಕಾಲುವೆಯಲ್ಲಿದ್ದ ಮೋರ್ಟಾರ್ ಶೆಲ್ ಅನ್ನು ಸ್ಥಳೀಯರು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದರು.

ಮಾಹಿತಿ ಪಡೆದ ಪೊಲೀಸ್ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಸ್ಫೋಟಕ ವಸ್ತುವನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿತು ಎಂದು ಮೂಲಗಳು ತಿಳಿಸಿವೆ.