ಕೋಲ್ಕತ್ತಾ, ಸೆ.20: 2021ರ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಸಂಬಂಧಿಸಿದ ಐದು ವರ್ಷಗಳ ಹಳೆಯ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ (West Bengal) ರೆಜಿನಗರ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ (independent candidate arrested). ಹುಮಾಯೂನ್ ಕಬೀರ್ ನೇತೃತ್ವದ ಆಮ್ ಜನತಾ ಉನ್ನಯನ್ ಪಕ್ಷ (ಎಜೆಯುಪಿ) ದೊಂದಿಗೆ ಸಂಬಂಧ ಹೊಂದಿರುವ ಸೈಫುಲ್ ಇಸ್ಲಾಂ ಅವರನ್ನು ಸೆಪ್ಟೆಂಬರ್ 19 ರಂದು ಬಂಧಿಸಲಾಯಿತು.
ನಂದಿಗ್ರಾಮ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದ ಒಂದು ದಿನದ ನಂತರ ಈ ಬಂಧನ ನಡೆದಿದೆ. ಸುಮಾರು ಎರಡು ದಶಕಗಳಷ್ಟು ಹಳೆಯದಾದ ಪ್ರಕರಣ ಇದಾಗಿದ್ದು, ಈ ಪ್ರದೇಶದಲ್ಲಿ ಭೂಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಪ್ರಕರಣ ದಾಖಲಾಗಿದೆ. ಎರಡು ಉಪಚುನಾವಣೆಗಳು ಅಕ್ಟೋಬರ್ 6 ರಂದು ನಡೆಯಲಿವೆ.
ನಂದಿಗ್ರಾಮ ಮತ್ತು ರೇಜಿನಗರದಲ್ಲಿ ಉಪಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರು ನಂದಿಗ್ರಾಮ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು. ಹೀಗಾಗಿ ನಂದಿಗ್ರಾಮದಲ್ಲಿ ಉಪಚುನಾವಣೆ ಅಗತ್ಯವಾಯಿತು. ಅದೇ ರೀತಿ ಕಬೀರ್ ಅವರು ನವ್ದಾ ಮತ್ತು ರೇಜಿನಗರ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಅವರು ನವ್ದಾ ಕ್ಷೇತ್ರವನ್ನು ಉಳಿಸಿಕೊಂಡು, ರೇಜಿನಗರ ಸ್ಥಾನವನ್ನು ಬಿಟ್ಟುಕೊಟ್ಟರು. ಹೀಗಾಗಿ ರೇಜಿನಗರದಲ್ಲೂ ಉಪಚುನಾವಣೆ ಅಗತ್ಯವಾಯಿತು.
ದುರ್ಗಾ ಪೂಜೆಗೂ ಮುನ್ನ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬಿರುಗಾಳಿ: 17 ಎನ್‌ಸಿಪಿಐ ಸಂಸದರು ಬಿಜೆಪಿ ಸೇರ್ಪಡೆ
ಹಿಂದಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಫುಲ್ ಇಸ್ಲಾಂ ಎಂಬ ವ್ಯಕ್ತಿಯ ವಿರುದ್ಧ ಕೇಸ್ ಇತ್ತು. ಇಗ ಬರ್ಹಾಂಪುರ ಪೊಲೀಸ್ ಠಾಣೆಯ ಪೊಲೀಸರು, ಹಳೆಯ ಪ್ರಕರಣದಲ್ಲಿ ಸೈಫುಲ್ ಇಸ್ಲಾಂ ಅವರನ್ನು ಬಂಧಿಸಿದ್ದಾರೆ.
ಶನಿವಾರ (ಸೆ.19) ಪೊಲೀಸರು ಎಜೆಯುಪಿ ಮುಖ್ಯಸ್ಥ ಹುಮಾಯೂನ್ ಕಬೀರ್ ಅವರಿಗೆ ನೋಟಿಸ್ ನೀಡಿದ್ದಾರೆ. ಸೋಮವಾರ (ಸೆ.21) ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ವಾತಾವರಣ ಸೃಷ್ಟಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಇತ್ತೀಚೆಗೆ ಬರ್ಹಾಂಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರು ಒಂದು ಆಡಿಯೋ ರೆಕಾರ್ಡಿಂಗ್‌ನ್ನು ಪ್ಲೇ ಮಾಡಿದ್ದರು. ಆ ಆಡಿಯೋದಲ್ಲಿನ ಮಾತುಕತೆಯನ್ನು ಆಧರಿಸಿ, ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡಲು ಯಾರೋ ಪ್ರಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 14 ರಂದು ಪ್ರಕರಣ ದಾಖಲಾಗಿತ್ತು. ಈ ಕೇಸ್‌ನ ತನಿಖೆಯ ಭಾಗವಾಗಿ ಹುಮಾಯೂನ್ ಕಬೀರ್ ಅವರನ್ನು ಸೋಮವಾರ (ಸೆ.21) ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಈ ಮಧ್ಯೆ, ಶುಕ್ರವಾರ (ಸೆ.18) ಮುರ್ಷಿದಾಬಾದ್ ಜಿಲ್ಲೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಹೆಚ್ಚಿನ ಪ್ರಮಾಣದ ನಕಲಿ ನೋಟುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಎಜೆಯುಪಿ ರಾಜ್ಯ ಕಾರ್ಯದರ್ಶಿ ಆಶಿಕ್ ಇಕ್ಬಾಲ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.