ಕಠ್ಮಂಡು, ಆ.29: ನೇಪಾಳದ ರಸುಯಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದಿಂದ (Nepal Floods) ತಮಿಳುನಾಡಿನ 21 ಕೈಲಾಸ ಮಾನಸ ಸರೋವರ ಯಾತ್ರೆಯ ಯಾತ್ರಿಕರು (Tamil Nadu pilgrims) ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದರು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಬಿಜೆಪಿಯ ತಮಿಳುನಾಡು ಮುಖ್ಯಸ್ಥ ನೈನಾರ್ ನಾಗೇಂದ್ರನ್ ಉಪಸ್ಥಿತರಿದ್ದರು. ಆಗಸ್ಟ್ 24 ರಂದು ಕುಂಭಕೋಣಂ ಮೂಲದ ಟ್ರಾವೆಲ್ ಏಜೆನ್ಸಿಯ ಮೂಲಕ ಯಾತ್ರೆಗೆ ತೆರಳಿದ್ದ 57 ಯಾತ್ರಿಕರಲ್ಲಿ ಈ ಗುಂಪು ಸೇರಿತ್ತು. ಅವರು ಮೂರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಅವುಗಳಲ್ಲಿ ಎರಡು ಬಸ್ ಹಠಾತ್ ಪ್ರವಾಹಕ್ಕೆ ಸಿಲುಕಿ 36 ಜನರು ಕಾಣೆಯಾಗಿದ್ದರು. ಸಂತ್ರಸ್ತರನ್ನು ಕಠ್ಮಂಡುವಿನಿಂದ ಉತ್ತರಕ್ಕೆ 160 ಕಿ.ಮೀ ದೂರದಲ್ಲಿರುವ ತಿಮುರೆಯಲ್ಲಿರುವ ಸಶಸ್ತ್ರ ಪೊಲೀಸ್ ಪಡೆ ಹೊರಠಾಣೆಯಲ್ಲಿ ಶಿಬಿರಗಳಲ್ಲಿ ಇರಿಸಲಾಗಿತ್ತು.
“ನೇಪಾಳದ ಪ್ರವಾಹದಿಂದ ರಕ್ಷಿಸಲ್ಪಟ್ಟ ತಮಿಳುನಾಡಿನ 21 ತೀರ್ಥಯಾತ್ರಿಕರನ್ನು ಬರಮಾಡಿಕೊಳ್ಳಲಾಯಿತು. ಅವರ ನೇರ ಅನುಭವಗಳನ್ನು ಕೇಳಿ ಮನಸ್ಸು ಭಾರವಾಯಿತು. ಈ ರಕ್ಷಣಾ ಕಾರ್ಯಾಚರಣೆಯ ಶ್ರಮಕ್ಕಾಗಿ ನೇಪಾಳ ಸೇನಾ ಪ್ರಧಾನ ಕಚೇರಿ ಮತ್ತು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದಗಳು. ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಜೈಶಂಕರ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 469ಕ್ಕೆ ಏರಿಕೆ, 290 ಭಾರತೀಯರು ನಾಪತ್ತೆ
ಇದಕ್ಕೂ ಮುನ್ನ, ನೇಪಾಳದ ಮಹಾವಿಪತ್ತಿನ ನಂತರ ಅಲ್ಲಿ ಸಿಲುಕಿಕೊಂಡಿರುವ ರಾಜ್ಯದ 80ಕ್ಕೂ ಹೆಚ್ಚು ಜನರ ಮರಳುವಿಕೆಯನ್ನು ಸುಗಮಗೊಳಿಸಲು ಕೈಗೊಳ್ಳಲಾಗಿರುವ ಕ್ರಮಗಳ ಮೇಲ್ವಿಚಾರಣೆಗಾಗಿ ರಾಜ್ಯ ಸಚಿವರ ನಾಲ್ಕು ಸದಸ್ಯರ ತಂಡವು ನವದೆಹಲಿಗೆ ಆಗಮಿಸಿತ್ತು. ಈ ತಂಡದಲ್ಲಿ ಸಚಿವರಾದ ಆಧವ್ ಅರ್ಜುನ, ಎ. ರಾಜ್‌ಮೋಹನ್, ಆರ್. ವಿನೋತ್ ಮತ್ತು ತಂಗಂ ತೇನ್ನರಸು ಒಳಗೊಂಡಿದ್ದರು. ಅವರು ಪರಿಸ್ಥಿತಿಯನ್ನು ಪರಾಮರ್ಶಿಸಲು ತಮಿಳುನಾಡು ಹೌಸ್‌ನಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯ (ಕಂಟ್ರೋಲ್ ರೂಮ್) ಅಧಿಕಾರಿಗಳನ್ನು ಭೇಟಿ ಮಾಡಿದರು. ನಂತರ ಅವರು ಸ್ಥಳದಲ್ಲಿ ರಕ್ಷಿಸಲ್ಪಟ್ಟ 21 ಯಾತ್ರಿಕರನ್ನು ಭೇಟಿಯಾದರು.
“ನನಗೆ ಸಂತೋಷವಾಗಿದೆ. ಆದರೆ, ನಮ್ಮೊಂದಿಗೆ ಇನ್ನೂ 40 ಜನರು ಸಂಪರ್ಕದಿಂದ ಹೊರಗಿದ್ದಾರೆ ಎಂದು ಹಿಂದಿರುಗಿದ 21 ಜನರಲ್ಲಿ ಒಬ್ಬರಾದ ನವು ಕಬೀರ್‌ದಾಸ್ ಹೇಳಿದರು. ಘಟನೆ ನಡೆದಾಗ ನೇಪಾಳದಲ್ಲಿದ್ದ ತಮಿಳುನಾಡು ಮತ್ತು ಪುದುಚೇರಿಯ ಸುಮಾರು 83 ಯಾತ್ರಿಕರು ನಾಪತ್ತೆಯಾಗಿದ್ದಾರೆ” ಎಂದು ಸಚಿವ ರಾಜಮೋಹನ್ ಹೇಳಿದರು.
ನಾಲ್ವರು ಸಚಿವರು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರನ್ನು ಭೇಟಿ ಮಾಡಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಕುರಿತು ಚರ್ಚಿಸಿದರು. ಕಳೆದ ಎರಡು ದಿನಗಳಲ್ಲಿ ತಮಿಳುನಾಡಿನ ನಿಯಂತ್ರಣ ಕೊಠಡಿಗೆ 900ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ರಾಜ್ಯ ನಿಯೋಗ ತಿಳಿಸಿದೆ. ಪುದುಚೇರಿಯ ಮೂವರು ಸೇರಿದಂತೆ ಒಟ್ಟು 106 ತೀರ್ಥಯಾತ್ರಿಕರು ವಿವಿಧ ಗುಂಪುಗಳಲ್ಲಿ ಕೈಲಾಶ್ ಮಾನಸಸರೋವರ ಯಾತ್ರೆಗಾಗಿ ನೇಪಾಳಕ್ಕೆ ತೆರಳಿದ್ದರು ಎಂದು ರಾಜಮೋಹನ್ ಅವರು ರಾಜ್ಯ ವಿಧಾನಸಭೆಯಲ್ಲಿ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.